ADVERTISEMENT

ಬಿಬಿಎಂಪಿಯ ₹50 ಸಾವಿರ ಕೋಟಿ ಮೌಲ್ಯದ ಆಸ್ತಿ ನಾಪತ್ತೆ!

ಪತ್ತೆ ಹಚ್ಚಿ ವಶಕ್ಕೆ ಪಡೆದರೆ ವರಮಾನ ದುಪ್ಪಟ್ಟು: ಪಾಲಿಕೆಗೆ ‘ನಮ್ಮ ನಾಯಕರ’ರ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 19:33 IST
Last Updated 12 ಸೆಪ್ಟೆಂಬರ್ 2020, 19:33 IST
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ    

ಬೆಂಗಳೂರು: ‘ಬಿಬಿಎಂಪಿಗೆ ಸೇರಿದ ಸುಮಾರು ₹50 ಸಾವಿರ ಕೋಟಿ ಮೌಲ್ಯದ ಆಸ್ತಿ ನಾಪತ್ತೆಯಾಗಿದೆ. ಅದೆಲ್ಲವನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆದರೆ ಪಾಲಿಕೆ ವರಮಾನ ದುಪ್ಪಟ್ಟಾಗಲಿದೆ’

ಸೆ.10ರಂದು ಅಧಿಕಾರಾವಧಿ ಪೂರ್ಣಗೊಂಡ ಕೆಲವು ಪಾಲಿಕೆ ಸದಸ್ಯರ ಅಭಿಪ್ರಾಯವಿದು. ಜನಾಗ್ರಹ ಸಂಘಟನೆ ಶನಿವಾರ ಆಯೋಜಿಸಿದ್ದ ‘ನಮ್ಮ ನಾಯಕರು’ ವೆಬಿನಾರ್ ಕಾರ್ಯಕ್ರಮದಲ್ಲಿ ಕಳೆದ ಅವಧಿಯ ಮೇಯರ್‌ಗಳು, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪಾಲಿಕೆ ಆಡಳಿತ ಸುಧಾರಣೆ ಬಗ್ಗೆ ಸಲಹೆ ನೀಡಿದರು. ಐದು ವರ್ಷಗಳ ಅಧಿಕಾರವಧಿಯ ಅನುಭವಗಳನ್ನು ಹಂಚಿಕೊಂಡರು.

ನಿಕಟಪೂರ್ವ ಮೇಯರ್ ಎಂ. ಗೌತಮ್‌ಕುಮಾರ್, ‘ಮುಂಬೈ ಪಾಲಿಕೆಗೆ ಹೋಲಿಸಿದರೆ ಬಿಬಿಎಂಪಿ ಬಜೆಟ್ ಗಾತ್ರ ತೀರಾ ಕಡಿಮೆ. ಅಲ್ಲಿ ಪಾಲಿಕೆ ಆಸ್ತಿ ಬೇರೆಯವರ ಪಾಲಾಗಲು ಬಿಟ್ಟಿಲ್ಲ. ನಮ್ಮಲ್ಲಿ ಪಾಲಿಕೆ ಆಸ್ತಿ ವಿವರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸುವುದೇ ಇಲ್ಲ. ಸುಮಾರು ₹40 ಸಾವಿರ ಕೋಟಿಯಿಂದ ₹50 ಸಾವಿರ ಕೋಟಿಯಷ್ಟು ಬೆಲೆಬಾಳುವ ಪಾಲಿಕೆಯ ಆಸ್ತಿಗಳು ಯಾರದೋ ಸ್ವಾಧೀನದಲ್ಲಿವೆ. ಇವುಗಳನ್ನು ವಶಕ್ಕೆ ಪಡೆಯುವ ಪ್ರಯತ್ನಗಳೇ ಆಗಿಲ್ಲ. ವರಮಾನ ಹೆಚ್ಚಿಸಿಕೊಳ್ಳಲು ಈ ಅವಕಾಶ ಬಳಸುವ ಇಚ್ಛಾಶಕ್ತಿ ಅಧಿಕಾರಿಗಳಿಗೆ ಇರಬೇಕು’ ಎಂದರು.

ADVERTISEMENT

ಇದಕ್ಕೆ ಧ್ವನಿಗೂಡಿಸಿದ ದೊಮ್ಮಲೂರು ವಾರ್ಡ್‌ನ ಸದಸ್ಯರಾಗಿದ್ದ ಸಿ.ಆರ್.ಲಕ್ಷ್ಮೀನಾರಾಯಣ, ‘ಪಾಲಿಕೆಯ ಕಾನೂನು ಕೋಶ ಗಟ್ಟಿಯಾದಷ್ಟೂ ಬಿಬಿಎಂಪಿ ಬಲಿಷ್ಠವಾಗಲಿದೆ. ಆ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ’ ಎಂದರು.

ಮೋಹನ್‌ಕುಮಾರ್, ‘ನಗರದ ಹಲವೆಡೆ ಪಾಲಿಕೆ ಆಸ್ತಿಗಳಿವೆ. ಅವುಗಳನ್ನು ವಶಕ್ಕೆ ಪಡೆಯಬೇಕು. ಮೈಕೊ ಕಾರ್ಖಾನೆ ಎದುರಿನಲ್ಲಿರುವ 10 ಎಕರೆ ಜಾಗ ಪಾಲಿಕೆ ಸ್ವತ್ತು. ಅದರ ಮೌಲ್ಯ ಸುಮಾರು ₹500 ಕೋಟಿ’ ಎಂದು ಉದಾಹರಣೆ ನೀಡಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ 1,400 ಕಿ.ಮೀ. ಉದ್ದದ ಪ್ರಮುಖ ರಸ್ತೆ ಜಾಲ, 840 ಕಿ.ಮೀ ಉದ್ದ ರಾಜಕಾಲುವೆ ಜಾಲವಿದೆ ಇವೆಲ್ಲವುಗಳ ನಿರ್ವಹಣೆ ಜತೆಗೆ ಹೊಸ ಯೋಜನೆಗಳ ಅನುಷ್ಠಾನಕ್ಕೆ ಪಾಲಿಕೆ ಆರ್ಥಿಕವಾಗಿ ಇನ್ನಷ್ಟು ಬಲಿಷ್ಠವಾಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಮೇಯರ್ ಆಗಿ ಕಾರ್ಯನಿರ್ವಹಿಸಿದ್ದ ಗಂಗಾಂಬಿಕೆ, ‘ವಾರ್ಡ್ ಅಭಿವೃದ್ಧಿ ಬಗ್ಗೆ ಆಸಕ್ತಿ ಇರುವವರನ್ನೇ ವಾರ್ಡ್‌ ಸಮಿತಿಗಳಿಗೆ ಆರಿಸಬೇಕು. ಆ ಕೆಲಸ ಮಾಡಿದ್ದರಿಂದಲೇ ನಮ್ಮ ವಾರ್ಡ್‌ನಲ್ಲಿ ಸಮಸ್ಯೆಗಳು ತಲೆದೋರಲಿಲ್ಲ’ ಎಂದರು.

‘ಮೇಯರ್ ಆಗಿದ್ದ ಅವಧಿಯಲ್ಲಿ ಕಸದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಶ್ರಮ ವಹಿಸಿದ್ದೆ. ಪಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪ್ರಯತ್ನಿಸಿದೆ’ ಎಂದರು.

ಮಮತಾ ವಾಸುದೇವ್, ‘ಕೊಳಚೆ ಪ್ರದೇಶಗಳ ಬಡವರ ಜೀವನ ಕ್ರಮ ಸುಧಾರಿಸಲು ಪಾಲಿಕೆ ಗಮನ ಹರಿಸಬೇಕಾಗುತ್ತದೆ. ಕಡಿಮೆ ಖರ್ಚಿನಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡುವ ತಂತ್ರಜ್ಞಾನ ಬಳಸಬೇಕು’ ಎಂದು ಸಲಹೆ ನೀಡಿದರು.

ಸದಸ್ಯರಾಗಿ ಅವಧಿ ಪೂರ್ಣಗೊಳಿಸಿರುವ ಪದ್ಮನಾಭರೆಡ್ಡಿ, ಅಬ್ದುಲ್ ವಾಜೀದ್, ಎಂ.ಶಿವರಾಜು, ಭುವನೇಶ್ವರಿ, ಶ್ವೇತಾ ವಿಜಯಕುಮಾರ್, ಎಸ್‌.ಜಿ. ನಾಗರಾಜ್ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು. ಜನಾಗ್ರಹ ಸಂಘಟನೆಯ ಸಪ್ನಾ ಹಾಗೂ ಸಿಟಿಜನ್ಸ್ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿ ಕಾರ್ಯಕ್ರಮ ಸಂಯೋಜಿಸಿದ್ದರು.

‘ಮೇಯರ್ ಅವಧಿ ಎರಡೂವರೆ ವರ್ಷವಿರಲಿ’

‘ಮುಂಬೈನಲ್ಲಿ ಮೇಯರ್ ಅವಧಿ ಎರಡೂವರೆ ವರ್ಷ ಇದೆ. ಅದೇ ಮಾದರಿಯನ್ನು ಬಿಬಿಎಂಪಿಗೂ ಅಳವಡಿಸಿದರೆ ಸೂಕ್ತ. ಒಂದು ವರ್ಷದ ಅವಧಿಯಲ್ಲಿ ಅಂದುಕೊಂಡ ಯಾವ ಕೆಲಸವನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಆಗುವುದಿಲ್ಲ. ಎರಡೂವರೆ ವರ್ಷ ಕಾಲಾವಕಾಶ ಸಿಕ್ಕರೆ ಸಮಗ್ರ ಯೋಜನೆ ರೂಪಿಸಿ ಜಾರಿಗೊಳಿಸಲು ಅನುಕೂಲವಾಗಲಿದೆ’ ಎಂದು ಎಂ. ಗೌತಮ್‌ ಕುಮಾರ್ ಅಭಿಪ್ರಾಯಪಟ್ಟರು.

‘ನಮ್ಮ ನಾಯಕ’ರ ಸಲಹೆಗಳೇನು?

* ಪಾಲಿಕೆ ಆಸ್ತಿ ಸ್ವಾಧೀನಕ್ಕೆ ನೀಡಬೇಕು ಆದ್ಯತೆ

* ಅಭಿವೃದ್ಧಿಯ ಕಾಳಜಿ ಇರುವವರನ್ನೇ ವಾರ್ಡ್‌ ಸಮಿತಿಗೆ ಆಯ್ಕೆ ಮಾಡಬೇಕು

* ಕೊಳೆಗೇರಿ ನಿವಾಸಿಗಳಿಗೆ ಗುಣಮಟ್ಟದ ಮನೆ ನಿರ್ಮಾಣಕ್ಕೆ ಆಧುನಿಕ ತಂತ್ರಜ್ಞಾನ ಬಳಸಬೇಕು

* ಕಾನೂನು ಕೋಶವನ್ನು ಬಲಪಡಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.