ADVERTISEMENT

ಬಿಬಿಎಂಪಿ: ಬಜೆಟ್‌ ಸಿದ್ಧತೆ ಪ್ರಾರಂಭ

ವಲಯವಾರು ಆಯ–ವ್ಯಯಕ್ಕೆ ಮತ್ತೆ ಚಿಂತನೆ; ನಾಗರಿಕರ ಸಲಹೆಗಿಲ್ಲ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 0:10 IST
Last Updated 3 ಜನವರಿ 2024, 0:10 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ಬಿಬಿಎಂಪಿ 2024–25ನೇ ಸಾಲಿನ ಬಜೆಟ್‌ ಸಿದ್ಧತೆ ಪ್ರಾರಂಭಿಸಿದ್ದು, ವಿಭಾಗವಾರು ಪ್ರಗತಿ ಹಾಗೂ ಯೋಜನೆಗಳ ಸಮಾಲೋಚನೆ ಸಭೆ ನಡೆಯುತ್ತಿವೆ.

ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಎಲ್ಲ ವಿಭಾಗಗಳ ವಿಶೇಷ ಆಯುಕ್ತರು ಸೇರಿದಂತೆ ವಲಯಗಳ ಆಯುಕ್ತರೊಂದಿಗೆ ಈಗಾಗಲೇ ಸಭೆ ನಡೆಸಿದ್ದಾರೆ. ಬಜೆಟ್‌ ಸಿದ್ಧತೆ ಹಾಗೂ ಈ ಆರ್ಥಿಕ ವರ್ಷದಲ್ಲಿನ ವೆಚ್ಚ ಹಾಗೂ ಯೋಜನೆಗಳ ಸ್ಥಿತಿ ಹಾಗೂ ಮಾಹಿತಿ ನೀಡಲು ಸೂಚಿಸಿದ್ದಾರೆ.

ADVERTISEMENT

ಬಿಬಿಎಂಪಿಯ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳು ಬಜೆಟ್‌ ಸಿದ್ಧತೆ ಹಾಗೂ ಮಾಹಿತಿ ಒದಗಿಸುವ ಕಾರ್ಯ ಆರಂಭಿಸಿದ್ದು, ಜ.15ರೊಳಗೆ ವಿವರ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

‘ವಲಯವಾರು ಬಜೆಟ್‌ ಮಂಡನೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹಿಂದಿನ ವರ್ಷ ಹೇಳಿದ್ದರು. ಆದರೆ ಅದಕ್ಕೆ ಅವಕಾಶವಿಲ್ಲದೆ ವಿಧಾನಸಭೆ ಚುನಾವಣೆಯ ಸಂದರ್ಭವಾದ್ದರಿಂದ ಎಂದಿನಂತೆ ಬಜೆಟ್ ಮಂಡಿಸಲಾಗಿತ್ತು. ಆದರೆ ಈ ಬಾರಿ ವಲಯವಾರು ಬಜೆಟ್‌ಗೆ ಮತ್ತೆ ಚಿಂತನೆ ಆರಂಭವಾಗಿದೆ.

‘ವಲಯಗಳಿಗೆ ಸೀಮಿತವಾಗಿ ಆಯುಕ್ತರನ್ನು ನೇಮಿಸಿರುವುದರಿಂದ ಅಲ್ಲಿನ ಕಾಮಗಾರಿಗಳಿಗೆ ಅವರು ಜವಾಬ್ದಾರರಾಗಿರುತ್ತಾರೆ. ಅವರಿಂದಲೇ ಕಾಮಗಾರಿಗಳು, ಯೋಜನೆಗಳ ಮಾಹಿತಿ ಪಡೆದುಕೊಂಡು ಅದಕ್ಕೆ ಹಣಕಾಸು ಒದಗಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ, ಗುತ್ತಿಗೆದಾರರಿಗೆ ವಲಯವಾರು ಮುಖ್ಯ ಎಂಜಿನಿಯರ್‌ಗಳಿಂದ ಬಿಲ್‌ ಪಾವತಿ ಮಾಡಲಾಗುತ್ತಿದೆ. ಹೀಗಾಗಿ ಬಜೆಟ್‌ ಅನ್ನು ವಲಯವಾರು ಮಂಡಿಸುವ ಯೋಜನೆ ಹೊಂದಲಾಗಿದೆ’ ಎಂದು ತಿಳಿದು ಬಂದಿದೆ.

‘ನಗರಯೋಜನೆ, ಬೃಹತ್‌ ನೀರುಗಾಲುವೆ, ಯೋಜನೆ, ಘನತ್ಯಾಜ್ಯ, ಕೆರೆಗಳು, ರಸ್ತೆ ಮೂಲಸೌಕರ್ಯದಂತಹ ಪ್ರಮುಖ– ಬೃಹತ್‌ ಯೋಜನೆಗಳನ್ನು ನಿರ್ವಹಿಸುವ ವಿಭಾಗಗಳ ಆಯ–ವ್ಯಯ ಪ್ರತ್ಯೇಕವಾಗಿರುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

‘ಕಳೆದ ಬಾರಿ ಡಿಸೆಂಬರ್‌ನಲ್ಲೇ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಬಾರಿ ಅಂತಹ ‌ಪ್ರಕ್ರಿಯೆ ನಡೆದಿಲ್ಲ. ಇರುವ ಕೆಲವೇ ಕೆಲವು ವಾರ್ಡ್‌ ಸಮಿತಿಗಳ ಬಗ್ಗೆ ಅಧಿಕಾರಿಗಳು ತಾತ್ಸಾರ ಭಾವನೆ ಹೊಂದಿದ್ದು ಅವರ ಅಭಿಪ್ರಾಯಗಳಿಗೆ ಮಾನ್ಯತೆಯನ್ನೂ ನೀಡುತ್ತಿಲ್ಲ. ಹೀಗಾಗಿ ಈ ಬಾರಿಯೂ ಪ್ರಮುಖ ಅಧಿಕಾರಿಗಳು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಯೋಚನೆಗಳಷ್ಟೇ ಬಜೆಟ್‌ನಲ್ಲಿ ಇರಲಿವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಎಂಜಿನಿಯರ್‌ರೊಬ್ಬರು ತಿಳಿಸಿದರು.

‘ಆಸ್ತಿ ತೆರಿಗೆ ಸೇರಿದಂತೆ ಪಾಲಿಕೆಗೆ ಸಂದಾಯವಾಗಬೇಕಿರುವ ಎಲ್ಲ ರೀತಿಯ ಶುಲ್ಕ, ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಲು ನಿರ್ಧರಿಸಿರುವುದರಿಂದ ವರಮಾನ ಹೆಚ್ಚಾಗಲಿದೆ. ಹೀಗಾಗಿ ಪಾಲಿಕೆ ಅನುದಾನದಲ್ಲೇ ವೈಟ್‌ ಟಾಪಿಂಗ್‌, ಮೇಲ್ಸೇತುವೆ ಸೇರಿದಂತೆ ಬೃಹತ್‌ ಯೋಜನೆಗಳನ್ನು ಕೈಗೊಳ್ಳುವ ಪ್ರಸ್ತಾಪವೂ ಈ ಬಾರಿ ಬಜೆಟ್‌ನಲ್ಲಿ ಇರಲಿದೆ’ ಎನ್ನಲಾಗಿದೆ.

2022–23ನೇ ಸಾಲಿನ ಬಜೆಟ್‌ ಅನ್ನು ಕಳೆದ ವರ್ಷ ಮಾರ್ಚ್‌ 31ರಂದು ರಾತ್ರಿ 11.30ಕ್ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ‘ಗುಪ್ತ’ವಾಗಿ ಬಜೆಟ್‌ ಮಂಡಿಸಲಾಗಿತ್ತು. ಕಳೆದ ವರ್ಷ ಮಾರ್ಚ್‌ 2ರಂದು ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ₹11,163 ಕೋಟಿ ಗಾತ್ರದ ಆಯ–ವ್ಯಯವನ್ನು (2023–24) ಹಣಕಾಸು ವಿಭಾಗದ ಅಂದಿನ ವಿಶೇಷ ಆಯುಕ್ತ ಜಯರಾಂ ರಾಯಪುರ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.