ADVERTISEMENT

ಈ ಬಾರಿ ಮಹಿಳಾ ಬಜೆಟ್‌?

18ರಂದು ಬಿಬಿಎಂಪಿ ಆಯವ್ಯಯ ಮಂಡನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 20:30 IST
Last Updated 13 ಫೆಬ್ರುವರಿ 2019, 20:30 IST
.
.   

ಬೆಂಗಳೂರು: ‘ಪಾಲಿಕೆಯ ಬಜೆಟ್‌ ವಾಸ್ತವಕ್ಕೆ ದೂರವಾಗಿರುತ್ತದೆ. ಆದಾಯಕ್ಕೂ ವೆಚ್ಚಕ್ಕೂ ತಾಳ
ಮೇಳವೇ ಇರುವುದಿಲ್ಲ. ಸಾಧಿಸಲು ಸಾಧ್ಯವಾಗದಷ್ಟು ಆದಾಯ ಸಂಗ್ರಹದ ಗುರಿ ನಿಗದಿಪಡಿಸಲಾಗುತ್ತದೆ...’

ಪಾಲಿಕೆ ಬಜೆಟ್‌ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿರುವ ಆರೋಪವಿದು. ‘ಪಾಲಿಕೆ ಬಜೆಟ್‌ ಮಂಡಿಸುವಾಗ ಆರ್ಥಿಕ ಶಿಸ್ತು ಕಾಪಾಡುತ್ತಿಲ್ಲ. ವಿತ್ತೀಯ ಕೊರತೆ ನಿರ್ವಹಣೆ ಕಾಯ್ದೆಯಲ್ಲಿರುವಅಂಶಗಳು ಬಿಬಿಎಂಪಿಗೂ ಅನ್ವಯ ಮಾಡಬೇಕು’ ಎಂದು ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಈ ಬಾರಿ ಹೇಗಾದರೂ ಮಾಡಿ ಇಂತಹ ಟೀಕೆಗಳಿಂದ ಮುಕ್ತಿ ಪಡೆಯುವಂತಹ ನಿಟ್ಟಿನಲ್ಲಿ ಪಾಲಿಕೆ ಹೆಜ್ಜೆ ಇಟ್ಟಿದೆ.

ಮಹಿಳೆಯರ ಸುರಕ್ಷತೆ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂಬ ಒತ್ತಡ ಪಾಲಿಕೆ ಮೇಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ
ಸಮಿತಿ ಅಧ್ಯಕ್ಷರು ಹಾಗೂ ಮೇಯರ್‌ ಇಬ್ಬರೂ ಮಹಿಳೆಯರೇ ಆಗಿರುವುದರಿಂದ ಬಜೆಟ್‌ ವೇಳೆ ಇಂತಹ ಕಾರ್ಯಕ್ರಮಗಳಿಗೆ ಆದ್ಯತೆ ಸಿಗುವ ನಿರೀಕ್ಷೆ ಇದೆ.

ADVERTISEMENT

ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿರುವ ಕರಡಿನ ಪ್ರಕಾರ ಬಜೆಟ್‌ ಗಾತ್ರ ₹ 8,900 ಕೋಟಿ ಆಜುಬಾಜಿನಲ್ಲಿದೆ. ಇದಕ್ಕೆ ಜನಪ್ರತಿನಿಧಿಗಳ ಕಡೆಯಿಂದ ಇನ್ನಷ್ಟು ಕಾರ್ಯಕ್ರಮಗಳು ಸೇರ್ಪಡೆಗೊಳ್ಳಲಿರುವ ಕಾರಣ ಗಾತ್ರವು ಮತ್ತಷ್ಟು ಹಿಗ್ಗಬಹುದು. ಹೇಗಾದರೂ ಮಾಡಿ ಬಜೆಟ್‌
ಗಾತ್ರವನ್ನು ₹ 9,500 ಕೋಟಿ ಆಸುಪಾಸಿನಲ್ಲಿ ನಿಲ್ಲಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ, ಮೇಯರ್‌ ಗಂಗಾಂಬಿಕೆ ಹಾಗೂ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಕಸರತ್ತು ನಡೆಸುತ್ತಿದ್ದಾರೆ. 2018–19ನೇ ಸಾಲಿನಲ್ಲಿ ಪಾಲಿಕೆ ₹ 10,132 ಕೋಟಿ ವೆಚ್ಚದ ಬಜೆಟ್‌ ಮಂಡಿಸಿತ್ತು.

‘ತೆರಿಗೆ ಸಂಗ್ರಹಣೆಯಲ್ಲಿ ಸಾಧಿಸಲು ಅಸಾಧ್ಯವಾದ ಗುರಿ ನಿಗದಿಪಡಿಸುವುದಿಲ್ಲ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಾಲಿನಲ್ಲಿ ಬಾಕಿ ತೆರಿಗೆ ವಸೂಲಿಯಲ್ಲಿ ಪ್ರಗತಿ ಆಗಿದೆ. 2018ರ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಸುಮಾರು 8,906 ಆಸ್ತಿಗಳಿಂದ ₹ 128 ಕೋಟಿ ಬಾಕಿ ತೆರಿಗೆ ವಸೂಲಿ ಮಾಡಲಾಗಿತ್ತು. ಹಾಗಾಗಿ ಟೋಟಲ್‌ ಸ್ಟೇಷನ್‌ ಸರ್ವೆ ಹಾಗೂ ಸುಧಾರಣಾ ಶುಲ್ಕದಿಂದ ಒಟ್ಟು ₹ 3000 ಕೋಟಿ ಸಂಗ್ರಹಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ. ಆದರೆ ಈ ಬಾರಿ ಜಾಹೀರಾತು
ಗಳಿಂದ ಹೆಚ್ಚಿನ ಆದಾಯ ನಿರೀಕ್ಷೆ ಮಾಡುತ್ತಿಲ್ಲ.

ಡಯಾಲಿಸ್‌ ಕೇಂದ್ರಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆಯೂ ಹೆಚ್ಚಿನ ಅನುದಾನ ಒದಗಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.