ADVERTISEMENT

BBMP Budget 2022| ‘ವಿತ್ತೀಯ ಹೊಣೆಗಾರಿಕೆ’ಗೆ ಈ ಸಲವೂ ಎಳ್ಳುನೀರು?

2022–23ರಲ್ಲೂ ₹ 9ಸಾವಿರ ಕೋಟಿ ಮೀರಲಿದೆ ಬಜೆಟ್‌ ಗಾತ್ರ? l ಅನುದಾನ ಹೆಚ್ಚಳಕ್ಕೆ ಕೊನೆ ಕ್ಷಣದಲ್ಲಿ ಶಾಸಕರಿಂದ ಒತ್ತಡ

ಪ್ರವೀಣ ಕುಮಾರ್ ಪಿ.ವಿ.
Published 30 ಮಾರ್ಚ್ 2022, 20:02 IST
Last Updated 30 ಮಾರ್ಚ್ 2022, 20:02 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ‘ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ತರಬೇಕು. ಕಂದಾಯ ಸ್ವೀಕೃತಿಯ ವಾಸ್ತವಾಂಶಗಳನ್ನು ಆಧರಿಸಿಯೇ ಬಜೆಟ್‌ ರೂಪಿಸಬೇಕು’ ಎಂಬ ಉದ್ದೇಶದಿಂದ ಬಿಬಿಎಂಪಿಗೂ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ರಾಜ್ಯ ಸರ್ಕಾರ 2022ರ ಮಾರ್ಚ್‌ 10ರಿಂದ ಜಾರಿಗೊಳಿಸಿದೆ. ಆದರೆ, ಪಾಲಿಕೆಯ 2022–23ನೇ ಸಾಲಿನ ಬಜೆಟ್‌ ಕೂಡ ಇದಕ್ಕೆ ಬದ್ಧವಾಗಿ ರೂಪುಗೊಳ್ಳುವುದು ಅನುಮಾನ ಎನ್ನುತ್ತವೆ ಬಿಬಿಎಂಪಿ ಮೂಲಗಳು.

ಅಧಿಕಾರಿಗಳು ಬಿಬಿಎಂಪಿ ಬಜೆಟ್‌ ಅಂತಿಮ ರೂಪ ನೀಡಿದ ಬಳಿಕವೂ ನಗರದ ಕೆಲವು ಸಚಿವರು ಹಾಗೂ ಶಾಸಕರು ತಮ್ಮ ಕ್ಷೇತ್ರದ ವಾರ್ಡ್‌ಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಒತ್ತಡ ಹೇರುತ್ತಿರುವುದು ಅಧಿಕಾರಿಗಳನ್ನು ಹೈರಾಣಾಗಿಸಿದೆ.

ಈ ಸಲ ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ) ನಿಯಮಗಳು 2021ರ ಆಧಾರದಲ್ಲಿ ಬಜೆಟ್‌ ರೂಪಿಸಬೇಕಿದೆ. ಹಿಂದಿನ ವರ್ಷದಲ್ಲಿ ವಾಸ್ತವದಲ್ಲಿ ಎಷ್ಟು ವರಮಾನ ಬಂದಿದೆ ಎಂಬ ಆಧಾರದಲ್ಲೇ ಬಜೆಟ್‌ ರೂಪಿಸಬೇಕು. ಇದನ್ನು ಖಾತರಿಪಡಿಸುವ ಸಲುವಾಗಿ ಹಣಕಾಸು ನಿರ್ವಹಣಾ ತತ್ವಗಳನ್ನು ರೂಪಿಸಲಾಗಿದೆ. ಅದರ ಪ್ರಕಾರ ಬಜೆಟ್‌ನ ವಿತ್ತೀಯ ಕೊರತೆಯು ಬಜೆಟ್‌ ಗಾತ್ರದ ಶೇ 3 ಅನ್ನು ಮೀರುವಂತಿಲ್ಲ. ಪಾಲಿಕೆಯ ಹಣಕಾಸು ಸ್ಥಿತಿಗತಿಯನ್ನು ಅವಲೋಕಿಸುವುದಕ್ಕೆ ಸೂಚ್ಯಂಕಗಳನ್ನು ರೂಪಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಪಾಲಿಕೆಯ ವಾರ್ಷಿಕ ಬೆಳವಣಿಗೆಯ ಸಂಯುಕ್ತ ದರ (ಸಿಎಜಿಆರ್) ಆಧರಿಸಿ ಬಜೆಟ್‌ ಗಾತ್ರವನ್ನು ನಿಗದಿಪಡಿಸಬೇಕು. ಸಿಎಜಿಆರ್‌ ದರದಷ್ಟು ಪ್ರಮಾಣದಲ್ಲಿ ಬಜೆಟ್‌ ಗಾತ್ರವನ್ನು ಹೆಚ್ಚಿಸುವುದಕ್ಕೆ ಅವಕಾಶ ಇರುತ್ತದೆ.

ADVERTISEMENT

ಉದಾಹರಣೆಗೆ, ಹಿಂದಿನ ವರ್ಷದ ಕಂದಾಯ ಸ್ವೀಕೃತಿ ₹ 4 ಸಾವಿರ ಕೋಟಿ ಆಗಿದ್ದರೆ, ಸಿಎಜಿಆರ್‌ ದರ 10 ಇದ್ದರೆ, ಕಂದಾಯ ಸ್ವೀಕೃತಿಯನ್ನು ₹4,400 ಕೋಟಿ ಎಂದು ಅಂದಾಜು ಮಾಡಿ ಅದಕ್ಕೆ ಬಂಡವಾಳ ಸ್ವೀಕೃತಿಯನ್ನು ಸೇರಿಸಿ ಬಜೆಟ್‌ ಗಾತ್ರವನ್ನು ನಿಗದಿಪಡಿಸಬಹುದು. ಬಿಬಿಎಂಪಿ 2021–22ರಲ್ಲಿ ಮಾರ್ಚ್ 29ರವರೆಗೆ ₹ 3,004 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕೊನೆಯ ಎರಡು ದಿನಗಳ ತೆರಿಗೆ ಸಂಗ್ರಹ ಹಾಗೂ ಇತರ ವರಮಾನಗಳನ್ನು ಸೇರಿಸಿದರೂ ಕಂದಾಯ ಸ್ವೀಕೃತಿ ಗಾತ್ರ ಗರಿಷ್ಠ ₹ 3,500 ತಲುಪಬಹುದು ಎನ್ನುತ್ತವೆ ಬಿಬಿಎಂಪಿ ಮೂಲಗಳು.

‘ಈ ವರ್ಷವೂ ಬಜೆಟ್‌ ಗಾತ್ರ ಕಳೆದ ಸಾಲಿಗಿಂತ ಕಡಿಮೆ ಆಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಬಿಎಂಪಿಯ ಕಂದಾಯ ಸ್ವೀಕೃತಿಯಲ್ಲಿಯೂ ಗಣನೀಯ ಹೆಚ್ಚಳ ಆಗುವ ನಿರೀಕ್ಷೆಗಳಿಲ್ಲ. ಹಾಗಾಗಿ ಬಜೆಟ್‌ ಗಾತ್ರ ₹ 9ಸಾವಿರ ಕೋಟಿ ಮೀರಿದರೆ ಅದನ್ನು ವಾಸ್ತವಾಂಶ ಆಧರಿಸಿದ ಬಜೆಟ್‌ ಎನ್ನಲಾಗದು’ ಎನ್ನುವುದು ಅಧಿಕಾರಿಯೊಬ್ಬರ ಅಭಿಪ್ರಾಯ.

‘₹ 4,544.33 ಕೋಟಿ ಕಂದಾಯ ಸ್ವೀಕೃತಿಯನ್ನು ಅಂದಾಜು ಮಾಡಿ ₹ 9,019 ಕೋಟಿ ಮೊತ್ತಕ್ಕೆ ಬಜೆಟ್‌ ಗಾತ್ರವನ್ನು ಅಂತಿಮಗೊಳಿಸಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದರು. ಆ ಬಳಿಕವೂ ಕೆಲವು ಸಚಿವರು ಹಾಗೂ ಶಾಸಕರು ತಮ್ಮ ವಾರ್ಡ್‌ಗೆ ಹೆಚ್ಚುವರಿ ಅನುದಾನ ಮೀಸಲಿಡುವಂತೆ ಒತ್ತಡ ಹೇರಿದ್ದಾರೆ. ಅದಕ್ಕೆ ಒಪ್ಪಿದರೆ ವಿತ್ತೀಯ ಹೊಣೆಗಾರಿಕೆ ನಿಯಮದ ಆಶಯಗಳಿಗೆ ಬದ್ಧವಾಗಿರಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಂಡರು.

2021–22ನೇ ಸಾಲಿನಲ್ಲಿ ಬಿಬಿಎಂಪಿ ಅಧಿಕಾರಿಗಳು ₹ 9,286.80 ಕೋಟಿ ಗಾತ್ರದ ಬಜೆಟ್‌ ಅನ್ನು ಅಂಗೀಕರಿಸಿ ನಗರಾಭಿವೃದ್ಧಿ ಇಲಾಖೆಗೆ ಅನೊಮೋದನೆಗಾಗಿ ಕಳುಹಿಸಿತ್ತು. ಯಾವತ್ತೂ ಬಿಬಿಎಂಪಿ ಬಜೆಟ್‌ ಗಾತ್ರಕ್ಕೆ ಕತ್ತರಿ ಹಾಕಿ ಅನುಮೋದನೆ ನೀಡುತ್ತಿದ್ದ ಇಲಾಖೆ ಬಜೆಟ್‌ ಗಾತ್ರವನ್ನು ₹ 9,951.8 ಕೋಟಿಗೆ ಹೆಚ್ಚಿಸಿ ಅನುಮೋದನೆ ನೀಡಿತ್ತು.

ಪಾಲಿಕೆ ಬಜೆಟ್–ಮುಖ್ಯಮಂತ್ರಿ ಅಂಗಳಕ್ಕೆ

ಪಾಲಿಕೆ ಬಜೆಟ್‌ ಮಂಡನೆಯ ದಿನಾಂಕ ನಿಗದಿ ನಿರ್ಧಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಂಗಳವನ್ನು ತಲುಪಿದೆ.

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಹಾಗೂ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಮುಖ್ಯಮಂತ್ರಿಯವರು ಗುರುವಾರ (ಇದೇ 31ರಂದು) ಬೆಳಿಗ್ಗೆ 10 ಗಂಟೆಗೆ ಭೇಟಿ ಆಗಿ ಬಜೆಟ್‌ ಬಗ್ಗೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸಚಿವರು ಹಾಗೂ ಶಾಸಕರು ಉಪಸ್ಥಿತರಿರುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಮ್ಮತಿ ಸೂಚಿಸಿದರೆ, ಗುರುವಾರವೇ ಬಜೆಟ್‌ ಮಂಡಿಸುವ ಸಾಧ್ಯತೆಯೂ ಇದೆ.

‘2020ರ ಬಿಬಿಎಂಪಿ ಕಾಯ್ದೆ ಪ್ರಕಾರ ಆರ್ಥಿಕ ವರ್ಷ ಕೊನೆಗೊಳ್ಳುವುದಕ್ಕೆ ಮೂರು ವಾರ ಮುಂಚಿತವಾಗಿ ಪಾಲಿಕೆ ಬಜೆಟ್‌ಗೆ ಅಂಗೀಕಾರ ಪಡೆಯಬೇಕು. ಕಡೇ ಪಕ್ಷ ಈ ಆರ್ಥಿಕ ವರ್ಷದಲ್ಲಾದರೂ ಬಜೆಟ್‌ ಮಂಡಿಸಿದರೆ ಒಳ್ಳೆಯದು. ಏಪ್ರಿಲ್‌ 1ರ ನಂತರ ಬಜೆಟ್‌ ಮಂಡಿಸುವುದು ಅಷ್ಟು ಸಮಂಜಸವಲ್ಲ’ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.