ADVERTISEMENT

ಬಿಬಿಎಂಪಿ 'ಗುಪ್ತ' ಬಜೆಟ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 2:20 IST
Last Updated 1 ಏಪ್ರಿಲ್ 2022, 2:20 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ಆರ್ಥಿಕ ವರ್ಷ ಮುಗಿ ಯುವವರೆಗೂ ಕಾಲಹರಣ‌ಮಾಡಿದ ಬಿಬಿಎಂಪಿ ಗುರುವಾರ ಮಧ್ಯರಾತ್ರಿ 11.30ಕ್ಕೆ 2022-23ನೇ ಸಾಲಿನ ಬಜೆಟ್ ಪ್ರತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕೋವಿಡ್ ತಾರಕದ ಕಾಲದಲ್ಲೂ ಬಿಬಿಎಂಪಿ ಬಜೆಟ್ ಮಂಡನೆಯನ್ನು ಕೈಬಿಟ್ಟಿರಲಿಲ್ಲ. ಆದರೆ ಈಗ ಬಜೆಟ್ ಮಂಡಿಸುವ ಪರಿಪಾಟಕ್ಕೆ ಇತಿಶ್ರೀ ಹಾಡಿದೆ. ತಡರಾತ್ರಿ ಬಜೆಟ್ ಪ್ರತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಮಾಹಿತಿಯನ್ನುವಾಟ್ಸ್‌ಆ್ಯಪ್‌ನ ಬಿಬಿಎಂಪಿ ಮಾಧ್ಯಮ ಗ್ರೂಪ್‌ನಲ್ಲಿ ಹಾಕಲಾಗಿದೆ.

ಈ ವರ್ಷದಿಂದ ಬಿಬಿಎಂಪಿಯಲ್ಲೂ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಸರ್ಕಾರ ಜಾರಿಗೊಳಿಸಿದೆ. ಇದರ ಆಶಯದಂತೆ ನಾಲ್ಕು ವರ್ಷಗಳ ಸಂಯುಕ್ತ ವಾರ್ಷಿಕ ಅಭಿವೃದ್ದಿ ದರದ ಆಧಾರದಲ್ಲಿ ಬಜೆಟ್ ಸಿದ್ದಪಡಿಸಬೇಕಿತ್ತು. ಕಂದಾಯ ಸ್ವೀಕೃತಿಯ ವಾಸ್ತವಿಕ ಅಂಕಿ–ಅಂಶ ಹಾಗೂ ಬಂಡವಾಳ ವೆಚ್ಚ ಸೇರಿಸಿ ಬಜೆಟ್ ಗಾತ್ರವನ್ನು ನಿರ್ಧಾರ ಮಾಡಬೇಕಿತ್ತು. ಅದನ್ನೂ ಬಜೆಟ್ ನಲ್ಲಿ ಪಾಲಿಸಲಾಗಿಲ್ಲ.

ADVERTISEMENT

ಬಜೆಟ್ ಗಾತ್ರ ಈ ವರ್ಷವೂ ₹10 ಸಾವಿರ ಕೋಟಿಯ ಗಡಿ ದಾಟಿದೆ‌. ₹10,484.28 ಕೋಟಿ ಗಾತ್ರದ ಬಜೆಟ್ ಸಿದ್ಧಪಡಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಒಟ್ಟು ₹10,480.93 ಕೋಟಿ ವೆಚ್ಚ ಮಾಡಲಾಗುತ್ತಿದೆ‌. ಬಜೆಟ್ ಪ್ರತಿಯಲ್ಲೂ ಎಲ್ಲೂ ಕಾರ್ಯಕ್ರಮಗಳ ವಿವರಗಳಿಲ್ಲ. ಕೇವಲ ಪಾವತಿಯ ವಿಭಾಗವಾರು ವಿವರಗಳನ್ನಷ್ಟೇ ಒದಗಿಸ ಲಾಗಿದೆ. ಯಾವುದೇ ಹೊಸ ಕಾರ್ಯಕ್ರಮಗಳನ್ನೂ ಪ್ರಕಟಿಸಿಲ್ಲ.

ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಆಯೋಗದ ನಿಧಿಯಿಂದ ₹436 ಕೋಟಿ ಹಾಗೂ ವಿಶೇಷ ಮೂಲ ಸೌಕರ್ಯ ಯೋಜನೆ ಅನುದಾನದಿಂದ ₹3 ಸಾವಿರ ಕೋಟಿ ನಿರೀಕ್ಷೆ ಮಾಡಲಾಗಿದೆ. ಈ ಬಾರಿ ವಿಶೇಷ ಅಭಿವೃದ್ಧಿ ವಿವೇಚನೆಗೆ ₹ 341 ಕೋಟಿ ಮೀಸಲಿಡಲಾಗಿದೆ. ವಿಶೇಷ ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗೆ ₹ 2673.37 ಕೋಟಿ ಕಾಯ್ದಿರಿಸಲಾಗಿದೆ. ಮೇಯರ್, ಉಪಮೇಯರ್, ಸ್ಥಾಯಿ ಸಮಿತಿಗಳಿಗೆ ಹಾಗೂ ಮುಖ್ಯ ಆಯುಕ್ತರ ವಿವೇಚನಾ ನಿಧಿಗೆ ಒಂದಿಷ್ಟು ಮೊತ್ತ ಕಾಯ್ದಿರಿಸಲಾಗುತ್ತಿತ್ತು.

ಆದರೀಗ ವಿಶೇಷ ಅಭಿವೃದ್ಧಿ ವಿವೇಚನೆ ನಿಧಿಗೂ ಮೊತ್ತ ಕಾಯ್ದಿರಿಸಲಾಗಿದೆ. ಚುನಾಯಿತ ಕೌನ್ಸಿಲ್ ಅಸ್ಥಿತ್ವದಲ್ಲಿ ಇ‌ಲ್ಲದ ಕಾರಣ ಇದರ ಬಳಕೆಗೆ ಯಾರ ‌‘ವಿವೇಚನೆ’ ಬಳಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

ಬಜೆಟ್ ಮಂಡನೆ ಕಾರ್ಯಕ್ರಮ ನಡೆಸದೆಯೇ ನೇರವಾಗಿ ವೆಬ್ ಸೈಟ್ ನಲ್ಲಿ ಪ್ರಕಟಿಸಿದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಮಧ್ಯರಾತ್ರಿ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಅನುದಾನ ಖರ್ಚು ಮಾಡುವುದಕ್ಕೆ ನಿರ್ಬಂಧ

ಹಣ ತೆಗೆಯುವ ಹಾಗೂ ಬಟವಾಡೆ ಮಾಡುವ ಇಲಾಖೆಯ ಅಧಿಕಾರಿಗಳು ವೇತನ, ಭತ್ಯೆ, ಕಚೇರಿ ವೆಚ್ಚವನ್ನು ಹೊರತುಪಡಿಸಿ ಉಳಿದ ಲೆಕ್ಕ ಶೀರ್ಷಿಕೆಗಳ ಅನುದಾನವನ್ನು ನೇರಚಾಗಿ ಬಳಕೆ ಮಾಡುವಂತಿಲ್ಲ.

ಇಲಾಖೆ ಮುಖ್ಯಸ್ಥರು ಎಲ್ಲ ಕಾಮಗಾರಿಗಳ ಮತ್ತು ಇತರೆ ವೆಚ್ಚ ಭರಿಸಲು ಸ್ಥಾಯಿ ಸಮಿತಿ ಆಯುಕ್ತರ ಅಥವಾ ಕೌನ್ಸಿಲ್ ಸಭೆಯ ಅನುಮೋದನೆ ಪಡೆಯುವುದು ಕಡ್ಡಾಯ. ಬಿಲ್ಲುಗಳನ್ನು ಜ್ಯೇಷ್ಠತೆ ಆಧಾರದಲ್ಲೇ ಪಾವತಿಸಲು ಸಲ್ಲಿಕೆ ಮಾಡಬೇಕು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.