ADVERTISEMENT

66 ಆಸ್ಪತ್ರೆಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ನೋಟಿಸ್‌

ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಶೇ 10ರಷ್ಟು ಹಾಸಿಗೆಗಳನ್ನು ಒದಗಿಸಲು ಮೀನಮೇಷ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 16:48 IST
Last Updated 21 ಏಪ್ರಿಲ್ 2021, 16:48 IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಳವಾಗುತ್ತಿರುವುದರಿಂದ ನಗರದ ಎಲ್ಲ ಆಸ್ಪತ್ರೆಗಳು ತಮ್ಮಲ್ಲಿರುವ ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಈ ಆದೇಶ ಪಾಲಿಸಲು ಮೀನ ಮೇಷ ಎಣಿಸುತ್ತಿರುವ 66 ಆಸ್ಪತ್ರೆಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಕಾರಣ ಕೇಳಿ ಬುಧವಾರ ತುರ್ತು ನೋಟಿಸ್‌ ಜಾರಿಗೊಳಿಸಿದ್ದಾರೆ.

ಕೋವಿಡ್‌ ಮೊದಲ ಅಲೆ ತಾರಕಕ್ಕೆ ಏರಿದ್ದಾಗ ಯಾವೆಲ್ಲ ಆಸ್ಪತ್ರೆಗಳು ಎಷ್ಟು ಹಾಸಿಗೆಗಳನ್ನು ಒದಗಿಸಿವೆ ಎಂಬುದನ್ನು ಆಧರಿಸಿ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಹಿಂದೆ ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳನ್ನು ಒದಗಿಸಿದ್ದ ಆಸ್ಪತ್ರೆಗಳು ಕೋವಿಡ್‌ ಎರಡನೇ ಅಲೆ ವೇಳೆ ಹಿಂದಿನಷ್ಟು ಸಂಖ್ಯೆಯ ಹಾಸಿಗೆಗಳನ್ನು ಒದಗಿಸಿಲ್ಲ. ಇದನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿ, ಈ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಕೋವಿಡ್‌ ಎರಡನೇ ಅಲೆ ವೇಳೆ ಸೊಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ತುರ್ತು ಚಿಕಿತ್ಸೆ ಅಗತ್ಯ ಇರುವವರನ್ನು ದಾಖಲಿಸಲು ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಾಸಿಗೆಗಳು, ಅದರಲ್ಲೂ ತೀವ್ರ ನಿಗಾ ಘಟಕದ ಹಾಸಿಗೆಗಳು ಲಭಿಸುತ್ತಿಲ್ಲ. ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಹಾಗೂ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಗಣನೀಯವಾಗಿ ಕುಸಿತ ಕಂಡ ರೋಗಿಗಳನ್ನು ಆಂಬುಲೆನ್ಸ್‌ನಲ್ಲಿಟ್ಟುಕೊಂಡು ಬಂಧುಗಳು ಐಸಿಯು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಗೌರವ ಗುಪ್ತ ಅವರು ಸೋಮವಾರ ನಗರದ ವಿಕ್ರಂ ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ (ಕನ್ನಿಂಗ್ ಹ್ಯಾಂ ರಸ್ತೆ), ಆಸ್ಟರ್ ಸಿಎಂಐ ಆಸ್ಪತ್ರೆ, ಕೊಲಂಬಿಯಾ ಏಷಿಯಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಆಸ್ಪತ್ರೆಗಳು ತಮ್ಮಲ್ಲಿರುವ ಹಾಸಿಗೆಗಳ ಬಗ್ಗೆ ಸಮರ್ಪಕವಾದ ಮಾಹಿತಿ ನೀಡದೇ ಇರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿತ್ತು. ಈ ಆಸ್ಪತ್ರೆಗಳಿಗೆ ಮುಖ್ಯ ಆಯುಕ್ತರು ಸ್ಥಳದಲ್ಲೇ ತುರ್ತು ನೋಟಿಸ್‌ ಜಾರಿ ಮಾಡಿದ್ದರು. ಶೇ‌ 50 ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಒದಗಿಸದೇ ಹೋದರೆ, ಆಸ್ಪತ್ರೆಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಮುಖ್ಯ ಆಯುಕ್ತರ ನೋಟಿಸ್‌ಗೆ ಈ ಐದೂ ಆಸ್ಪತ್ರೆಗಳು ಉತ್ತರಿಸಿವೆ. ‘ನಾವು ಈಗ ಕೋವಿಡೇತರ ಕಾಯಿಲೆಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಈ ಹಾಸಿಗೆಗಳು ಖಾಲಿ ಆದಂತೆಯೇ ಹಂತ ಹಂತವಾಗಿ ಶೇ. 50 ರಷ್ಟು ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನೀಡುತ್ತೇವೆ’ ಎಂದು ಮುಖ್ಯ ಆಯುಕ್ತರು ಪತ್ರ ಬರೆದು ಸಮಜಾಯಿಷಿ ನೀಡಿವೆ. ಈಗಾಗಲೇ ಹೆಚ್ಚುವರಿ ಹಾಸಿಗೆಗಳನ್ನು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ನೀಡಲು ಪ್ರಾರಂಭಿಸಿವೆ’ ಎಂದು ಬಿಬಿಎಂಪಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.