ADVERTISEMENT

ಮುಖ್ಯ ಎಂಜಿನಿಯರ್‌ ಅಮಾನತು, ಜೆ.ಸಿ.ಗೆ ನೋಟಿಸ್‌

ಬಿಬಿಎಂಪಿ ದಾಸರಹಳ್ಳಿ ವಲಯ ಕಚೇರಿ: 3ಕ್ಕಿಂತ ಹೆಚ್ಚು ದಿನ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST

ಬೆಂಗಳೂರು: ಮೂಲಸೌಕರ್ಯ ಅಭಿವೃದ್ಧಿಗೆ ಮಂಜೂರಾದ ಅನುದಾನ ಬಳಕೆ ಮಾಡದಿರುವುದು ಹಾಗೂ ಕಾಮಗಾರಿಗಳ ಮೇಲ್ವಿಚಾರಣೆ ಯನ್ನು ಸಮರ್ಪಕವಾಗಿ ನಡೆಸದಿರುವ ಆರೋಪದ ಮೇರೆಗೆ ಬಿಬಿಎಂಪಿ ದಾಸರಹಳ್ಳಿ ವಲಯದ ಮುಖ್ಯ ಎಂಜಿನಿಯರ್‌ (ಪ್ರಭಾರ) ಎನ್‌.ವಿಜಯ ಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ.

ದಾಸರಹಳ್ಳಿ ವಲಯದ ಬಿಬಿಎಂಪಿ ಕಚೇರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಶುಕ್ರವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅನೇಕ ಸಿಬ್ಬಂದಿ ಮಂಜೂರಾತಿ ಪಡೆಯದೆಯೇ ಕರ್ತವ್ಯಕ್ಕೆ ಗೈರು ಹಾಜರಾಗಿದ್ದದ್ದು ಪರಿಶೀಲನೆ ವೇಳೆ ಕಂಡು ಬಂದಿತ್ತು.

ಕಲ್ಯಾಣ ಕಾರ್ಯಕ್ರಮಗಳಿಗೆ ಮಂಜೂರಾದ ಅನುದಾನ ಬಳಕೆ ಆಗದಿರುವುದು ಹಾಗೂ 2015–16 ಹಾಗೂ 2016–17ನೇ ಸಾಲಿನ ಅನೇಕ ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಪತ್ತೆಯಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಚಿವರು ಆದೇಶ ಮಾಡಿದ್ದರು.

ADVERTISEMENT

ಚೊಕ್ಕಸಂದ್ರ ವಾರ್ಡ್‌ನ ಕಾಮಗಾರಿಯೊಂದಕ್ಕೆ ಸಂಬಂಧಿಸಿದ ಕಡತ ಕಾಣೆಯಾಗಿತ್ತು. ಆದರೂ ಮುಖ್ಯ ಎಂಜಿನಿಯರ್‌ ಅವರು ನಿಗದಿತ ಅವಧಿಯೊಳಗೆ ಈ ಬಗ್ಗೆ ದೂರು ದಾಖಲಿಸಿರಲಿಲ್ಲ. ಕಡತ ಕಾಣೆಯಾಗಲು ಕಾರಣರಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೆಚ್ಚುವರಿ ಆಯುಕ್ತರು (ಆಡಳಿತ) ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವರಿಗೆ ಮೂಲಸೌಕರ್ಯ ಕಲ್ಪಿಸಲು ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದಿರುವುದಕ್ಕೆ ಕಾರಣ ಕೇಳಿ ದಾಸರಹಳ್ಳಿ ವಲಯದ ಜಂಟಿ ಆಯುಕ್ತರಾದ ವೆಂಕಟರಾಯಪ್ಪ ಅವರಿಗೆ ಬಿಬಿಎಂಪಿ ಹೆಚ್ಚುವರಿ ಆಯುಕ್ತರು (ಆಡಳಿತ) ನೋಟಿಸ್‌ ಜಾರಿಗೊಳಿಸಿದ್ದಾರೆ. ಏಳು ದಿನಗಳ ಒಳಗೆ ಉತ್ತರಿಸುವಂತೆ ಸೂಚಿಸಿದ್ದಾರೆ. 2015–16 ಹಾಗೂ 2016–17ನೇ ಸಾಲಿನಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ₹50 ಲಕ್ಷ ಮಂಜೂರಾಗಿತ್ತು. ಕೇವಲ 8 ಮಂದಿಗೆ ವೆಚ್ಚ ಮರುಪಾವತಿಯಾಗಿದ್ದು, ₹3 ಲಕ್ಷವನ್ನು ವೆಚ್ಚ ಮಾಡಲಾಗಿದೆ.

ಕಲ್ಯಾಣ ಕಾರ್ಯಕ್ರಮಗಳ ಅನುದಾನ ಬಳಕೆ ವಿಳಂಬ ಆಗಿರುವ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ 15 ದಿನಗಳ ಒಳಗೆ ವರದಿ ನೀಡುವಂತೆ ಉಪಾಯುಕ್ತ (ಕಲ್ಯಾಣ) ಅವರಿಗೆ ಹೆಚ್ಚುವರಿ ಆಯುಕ್ತರು ಸೂಚಿಸಿದ್ದಾರೆ.

ದಾಸರಹಳ್ಳಿ ವಲಯದಲ್ಲಿ ಉಪ ಆಯುಕ್ತರಾಗಿ (ಪ್ರಭಾರ) ಕರ್ತವ್ಯ ನಿರ್ವಹಿಸುತ್ತಿರುವ ಶಶಿಕಲಾ ಅವರಿಗೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಕಾರಣ ಕೇಳಿ ಬಿಬಿಎಂಪಿ ಹೆಚ್ಚುವರಿ ಆಯುಕ್ತರು (ಆಡಳಿತ) ನೋಟಿಸ್‌ ಜಾರಿಗೊಳಿಸಿದ್ದಾರೆ. ಸಹಾಯಕ ಆಯುಕ್ತರಾದ (ನೇಮಕಾತಿ ಮತ್ತು ವಿಚಾರಣೆ) ಲಕ್ಷ್ಮೀದೇವಿ ಅವರಿಗೆ ಉಪಾಯುಕ್ತರ ಹೊಣೆ (ಪ್ರಭಾರ) ವಹಿಸಲಾಗಿದೆ. ಶಶಿಕಲಾ ಅವರು ಬೊಮ್ಮನಹಳ್ಳಿ ವಲಯದ ಉಪ ಆಯುಕ್ತರಾಗಿ ಮುಂದುವರಿಯಲಿದ್ದಾರೆ.

ಮಂಜೂರಾತಿ ಪಡೆಯದೆಯೇ ಸತತವಾಗಿ ಮೂರು ಅಥವಾ ಅದಕ್ಕಿಂತ ಹೆಚ್ಚು ದಿನಗಳು ಗೈರುಹಾಜರಾದ ಬಿಬಿಎಂಪಿಯ ದಾಸರಹಳ್ಳಿ ವಲಯದ ಕಚೇರಿಯ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ವಲಯದ ಜಂಟಿ ಆಯುಕ್ತರಿಗೆ ಹೆಚ್ಚುವರಿ ಆಯುಕ್ತರು ಸೂಚಿಸಿದ್ದಾರೆ. ಒಂದು ಅಥವಾ ಎರಡು ದಿನ ಮಂಜೂರಾತಿ ಪಡೆಯದೆಯೇ ಕರ್ತವ್ಯಕ್ಕೆ ಗೈರಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವಂತೆ ಆದೇಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.