ADVERTISEMENT

ಕಸ ಸ್ವಚ್ಛತೆಗೆ ಬಂತು 17 ಯಂತ್ರ

6 ಆಂಬುಲೆನ್ಸ್‌, 2 ಅ್ಯಪ್‌ ಬಿಡುಗಡೆ: 200 ಮಾರ್ಷಲ್‌ಗಳಿಗೆ ದಂಡ ವಿಧಿಸುವ ಯಂತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 19:43 IST
Last Updated 8 ಫೆಬ್ರುವರಿ 2020, 19:43 IST
ರಸ್ತೆ ಗುಡಿಸುವ ಯಂತ್ರಗಳು.   –ಪ್ರಜಾವಾಣಿ ಚಿತ್ರ
ರಸ್ತೆ ಗುಡಿಸುವ ಯಂತ್ರಗಳು.   –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಸ್ವಚ್ಛತೆಗೆ ಹಾಗೂ ಆರೋಗ್ಯ ಸುಧಾರಣೆಗಾಗಿ ನೂತನ 17 ಕಸ ಗುಡಿಸುವ ಯಂತ್ರಗಳು ಹಾಗೂ ಸುಸಜ್ಜಿತ ಆರು ಆಂಬುಲೆನ್ಸ್‌ಗಳು ರಸ್ತೆಗೆ ಇಳಿದಿವೆ.‌

ನಾಗರಿಕರ ಕುಂದುಕೊರತೆ ದಾಖಲಿಸಲು ಮತ್ತು ಪರಿಹರಿಸಲು ‘ಸಹಾಯ 2.0’ ಆ್ಯಪ್‌ ಹಾಗೂ ವಿವಿಧ ಇಲಾಖೆಗಳಿಗೆ ಸಲ್ಲಿಸಬೇಕಾದ ದೂರುಗಳನ್ನು ಒಂದೇ ತಂತ್ರಾಂಶದ ಮೂಲಕ ದಾಖಲಿಸಲು ‘ನಮ್ಮ ಬೆಂಗಳೂರು’ ಆ್ಯಪ್‌ ಬಿಡುಗಡೆಗೊಳಿಸಲಾಗಿದೆ. ಘನತ್ಯಾಜ್ಯ ನಿಯಮಗಳ ನಿರ್ವಹಣೆ, ಬೈಲಾಗಳಿಗೆ ತಕ್ಕಂತೆ ದಂಡ ವಿಧಿಸುವುದಕ್ಕಾಗಿ ಮಾರ್ಷಲ್‌ಗಳ ಬಳಕೆಗಾಗಿ 200ಕ್ಕೂ ಅಧಿಕ ಪಿಒಎಸ್ ದಂಡ ವಿಧಿಸುವ ಯಂತ್ರಗಳನ್ನೂ ವಿತರಿಸಲಾಗಿದೆ.

ಹೊಸ ಆಂಬುಲೆನ್ಸ್‌ಗಳು ಹೊಸಹಳ್ಳಿ ರೆಫರಲ್‌ ಆಸ್ಪತ್ರೆ, ಎಚ್‌.ಸಿದ್ಧಯ್ಯ ರಸ್ತೆ ರೆಫರಲ್‌ ಆಸ್ಪತ್ರೆ, ಹಲಸೂರು ರೆಫರಲ್‌ ಆಸ್ಪತ್ರೆ, ಜೆ.ಜೆ.ಆರ್.ನಗರ ರೆಫರಲ್ ಆಸ್ಪತ್ರೆ, ಶ್ರೀರಾಮಪುರ ರೆಫರಲ್‌ ಆಸ್ಪತ್ರೆ ಹಾಗೂ ಬನಶಂಕರಿ ರೆಫರಲ್‌ ಅಸ್ಪತ್ರೆಗಳ ಸೇವೆಗೆ ಲಭ್ಯವಾಗಿವೆ.

ADVERTISEMENT

ಈ ಆಸ್ಪತ್ರೆಗಳಿಂದ ರೋಗಿಗಳು, ನವಜಾತ ಶಿಶುಗಳನ್ನು ಹೆಚ್ಚುವರಿ ಆರೈಕೆ ಮಾಡುವ ಆಸ್ಪತ್ರೆಗಳಿಗೆ ಕರೆದೊಯ್ಯಲು ಈ ಆಂಬುಲೆನ್ಸ್‌ಗಳನ್ನು ಬಳಸಲಾಗುತ್ತದೆ.

ಪೌರಕಾರ್ಮಿಕರ ಆರೋಗ್ಯ ಮತ್ತು ಅಪಘಾತಗಳಿಂದ ಅವರನ್ನು ರಕ್ಷಿಸುವ ಸಲುವಾಗಿ ದೇಶೀಯವಾಗಿ ನಿರ್ಮಿಸಲಾದ ಹಾಗೂ ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ನಿರ್ವಹಿಸುವ 17 ಕಸ ಗುಡಿಸುವ ಯಂತ್ರಗಳು ರಸ್ತೆಗೆ ಇಳಿದಿದ್ದು, ಅಧಿಕ ವಾಹನ ದಟ್ಟಣೆಯ ರಸ್ತೆಗಳ ಪಾದಚಾರಿ, ರಸ್ತೆ ವಿಭಜಕ ಮಾರ್ಗದಲ್ಲಿ ಸಂಗ್ರಹವಾಗುವ ಕಸ, ಮಣ್ಣು, ಮರಳಿನ ಕಣಗಳನ್ನು ರಾತ್ರಿ ವೇಳೆ ತೆರವುಗೊಳಿಸುವ ಕೆಲಸ ಮಾಡಲಿವೆ. 2018ರ ಫೆಬ್ರುವರಿ 14ರಂದು ಈ ಯಂತ್ರಗಳಿಗಾಗಿ ಟೆಂಡರ್‌ ಆಹ್ವಾನಿಸಲಾಗಿತ್ತು. 2019ರ ಮಾರ್ಚ್‌ 1ರಂದು ಕಾರ್ಯಾದೇಶ ನೀಡಲಾಗಿತ್ತು.

‘ಸಹಾಯ 2.0‘ ಅಪ್ಲಿಕೇಶನ್‌ನಿಂದ ಬಿಬಿಎಂಪಿಗೆ ಸಂಬಂಧಿಸಿದ ವಿವಿಧ ಮಾದರಿಯ ದೂರುಗಳು ಸ್ವಯಂಚಾಲಿತವಾಗಿ ಅಧಿಕಾರಿಗಳಿಗೆ ತಲುಪುವುದು ಸಾಧ್ಯವಿದೆ. ‘ನಮ್ಮ ಬೆಂಗಳೂರು’ ಅಪ್ಲಿಕೇಷನ್‌ನಿಂದ ವಿವಿಧ ದೂರುಗಳನ್ನು ದಾಖಲಿಸಲು ಒಂದೇ ವೇದಿಕೆ ನಿರ್ಮಾಣವಾಗಿದೆಯಲ್ಲದೆ, ಜನರು ಲಿಖಿತ, ಛಾಯಾಚಿತ್ರ ಹಾಗೂ ವಿಡಿಯೊ ಮೂಲಕ ದೂರಿನ ವಿವರ ದಾಖಲಿಸಿ, ಅದರ ಸಂಪೂರ್ಣ ಸ್ಥಿತಿಗತಿ ನೋಡಬಹುದು. ಜನರು bbmp.gov.in ಅಥವಾ https;//nammabengaluru.org.in ಲಿಂಕ್‌ ಬಳಸಿಕೊಂಡು ‘ನಮ್ಮ ಬೆಂಗಳೂರು’ ತಂತ್ರಾಂಶವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಘನತ್ಯಾಜ್ಯ ನಿರ್ವಹಣೆಯ ನಿಯಮಗಳ ಉಲ್ಲಂಘನೆಗಾಗಿ ಇದುವರೆಗೆ ಬಿಲ್‌ ಪುಸ್ತಕ ಮೂಲಕ ದಂಡ ವಿಧಿಸಲಾಗುತ್ತಿತ್ತು. ಇದರ ಬದಲಿಗೆ ಎಲೆಕ್ಟ್ರಾನಿಕ್‌ ಇ–ರಶೀದಿ ದಂಡ ವಿಧಿಸುವ ಯಂತ್ರಗಳನ್ನು ಮಾರ್ಷಲ್‌ಗಳಿಗೆ ನೀಡಲಾಗಿದ್ದು, ನಗದು, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಹಾಗೂ ಚೆಕ್‌ ಮೂಲಕ ಸ್ವೀಕರಿಸಿ, ಸ್ಥಳದಲ್ಲೇ ರಶೀತಿ ಮುದ್ರಿಸುವ ಸೌಲಭ್ಯ ಇದೆ.

‘3 ವರ್ಷದೊಳಗೆ ಉ‍ಪನಗರ ರೈಲು’

‘ಬೆಂಗಳೂರು ನಗರದ ಸಂಚಾರ ದಟ್ಟಣೆ, ಸ್ವಚ್ಛತೆ, ಆರೋಗ್ಯ ರಕ್ಷಣೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮೂರು ವರ್ಷಗಳಲ್ಲಿ ಉಪನಗರ ರೈಲು ಯೋಜನೆ ಪೂರ್ಣಗೊಳ್ಳಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ವಿವಿಧ ಸೇವೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ‘ಮೆಟ್ರೊ ಎರಡನೇ ಹಂತ 2021ರ ಡಿಸೆಂಬರ್‌ ವೇಳೆಗೆ ಕೊನೆಗೊಳ್ಳಲಿದೆ. ಹೊರವರ್ತುಲ ರಸ್ತೆ, ವಿಮಾನನಿಲ್ದಾಣ ರಸ್ತೆ ಮೆಟ್ರೊ ಕಾಮಗಾರಿಯನ್ನು 2023ರಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. 2025ರ ವೇಳೆಗೆ ಮೆಟ್ರೊ ವಿಸ್ತೀರ್ಣವನ್ನು 300 ಕಿ.ಮೀ.ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

***

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ, ಮೂಲಸೌಲಭ್ಯಕ್ಕೆ ದೂರದೃಷ್ಟಿಯ ಯೋಜನೆ ಜಾರಿಗೊಳಿಸಲಾಗುತ್ತಿದೆ
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.