ADVERTISEMENT

ಬಿಬಿಎಂಪಿ ವ್ಯಾಪ್ತಿ | ನಗರದ ಕೆಲವು ಭಾಗಗಳಲ್ಲಿ ಫ್ಲೆಕ್ಸ್‌ ತೆರವು

ದಂಡ, ವೆಚ್ಚ ವಸೂಲಿ, ಎಫ್‌ಐಆರ್‌ ದಾಖಲಿಸಲು ಜಾರಿಯಾಗದ ಎಸ್‌ಒಪಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 15:57 IST
Last Updated 18 ಆಗಸ್ಟ್ 2025, 15:57 IST
ಟ್ಯಾನರಿ ರಸ್ತೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸೋಮವಾರ ಫ್ಲೆಕ್ಸ್‌ ತೆರವುಗೊಳಿಸಿದರು
ಟ್ಯಾನರಿ ರಸ್ತೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಸೋಮವಾರ ಫ್ಲೆಕ್ಸ್‌ ತೆರವುಗೊಳಿಸಿದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಯಲಹಂಕ ಹಾಗೂ ಪಶ್ಚಿಮ ವಲಯದ ಕೆಲವು ಪ್ರದೇಶಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಬಿಬಿಎಂಪಿ ಸಿಬ್ಬಂದಿ ಸೋಮವಾರ ತೆರವು ಮಾಡಿದರು.

ಯಲಹಂಕ ಉಪನಗರದಲ್ಲಿ ಮುಖ್ಯ ರಸ್ತೆಗಳಲ್ಲಿ ವಿದ್ಯುತ್‌ ಕಂಬಗಳಿಗೆ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಅವುಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು.

ಪಶ್ಚಿಮ ವಲಯದ ಪುಲಕೇಶಿನಗರ ವ್ಯಾಪ್ತಿಯ ಟ್ಯಾನರಿ ರಸ್ತೆಯಲ್ಲಿ ಹಲವು ರೀತಿಯ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಲಾಗಿತ್ತು. ಬಿಬಿಎಂಪಿ ಸಿಬ್ಬಂದಿ  ‘ತೆರವು ಅಭಿಯಾನ’ ನಡೆಸಿ, ನೂರಾರು ಫ್ಲೆಕ್ಸ್‌ಗಳನ್ನು ತೆಗೆದುಹಾಕಿದರು.

ADVERTISEMENT

ನಗರದಲ್ಲಿ ಬ್ಯಾನರ್‌, ಫ್ಲೆಕ್ಷ್‌, ಕಟೌಟ್‌ ಅಳವಡಿಸುವವರು, ಅದರಲ್ಲಿರುವ ವ್ಯಕ್ತಿಗಳು, ಮುದ್ರಕರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಿ, ತೆರವಿನ ಸಂಪೂರ್ಣ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಲು ಅನುವಾಗುವ ಪರಿಷ್ಕೃತ ಪ್ರಮಾಣಿತ ಕಾರ್ಯಾಚಾರಣಾ ವಿಧಾನವನ್ನು (ಎಸ್‌ಒಪಿ) ಏಪ್ರಿಲ್‌ 24ರಿಂದ ಜಾರಿ ಮಾಡಲಾಗಿದೆ.

ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 158ರಂತೆ ಪಾಲಿಕೆಯ ವ್ಯಾಪ್ತಿಯಲ್ಲಿನ ಯಾವುದೇ ಕಟ್ಟಡ, ಪ್ರದೇಶ, ಗೋಡೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಆಯುಕ್ತರ ಲಿಖಿತ ಅನುಮತಿಯಿಲ್ಲದೆ ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ ಹಾಗೂ ಯಾವುದೇ ರೀತಿಯ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಮುದ್ರಣ ಘಟಕದವರ ಮೇಲೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಎಸ್ಒಪಿ ಜಾರಿಯಾಗದೆ ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಲೇ ಇವೆ.

ಎಸ್‌ಒಪಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ವಲಯದ ಜಂಟಿ ಆಯುಕ್ತರನ್ನು ನೋಡಲ್‌ ಅಧಿಕಾರಿಯಾಗಿ ಹಾಗೂ ವಲಯ ಆಯುಕ್ತರನ್ನು ಮೇಲ್ವಿಚಾರಣೆ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ವಲಯ ಆಯುಕ್ತರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಉಪ ಪೊಲೀಸ್‌ ಕಮಿಷನರ್‌ (ಡಿಸಿಪಿ) ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಆದರೆ, ಈ ಕ್ರಮಗಳು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ರಸ್ತೆ, ಜಂಕ್ಷನ್‌ಗಳಲ್ಲಿ ಹಬ್ಬದ ಶುಭಾಶಯದ ಫ್ಲೆಕ್ಸ್‌ಗಳು ಜನ್ಮದಿನಾಚರಣೆ, ಶುಭ ಹಾರೈಕೆಗೆ ಬೃಹತ್‌ ಕಟೌಟ್‌ಗಳು ಫ್ಲೆಕ್ಸ್ ಕಟ್ಟಲು ರಾಜಕೀಯ ಮುಖಂಡರ ಪೈಪೋಟಿ

‘ಪ್ರಭಾವಿಗಳ ವಿರುದ್ಧ ಕ್ರಮವಿಲ್ಲ’

‘ಫ್ಲೆಕ್ಸ್‌ ಬ್ಯಾನರ್‌ ಹಾಕುವಂತಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದೆ. ಅದರ ಅನುಷ್ಠಾನಕ್ಕೆ ಬಿಬಿಎಂಪಿ ಎಸ್‌ಒಪಿ ಜಾರಿಮಾಡಿದ್ದರೂ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜಕಾರಣಿಗಳು ಅವರ ಹಿಂಬಾಲಕರು ಹಾಗೂ ಪ್ರಭಾವಿಗಳ ಫ್ಲೆಕ್ಸ್‌ಗಳನ್ನು ತೆಗೆಯುತ್ತಿಲ್ಲ. ಅವರ ವಿರುದ್ಧ ಎಫ್‌ಐಆರ್ ಕೂಡ ಹಾಕುತ್ತಿಲ್ಲ. ಹೆಚ್ಚು ಪ್ರಭಾವವಿಲ್ಲದ ವ್ಯಕ್ತಿಗಳ ಮೇಲೆ ದರ್ಪ ತೋರಿ ಎಫ್‌ಐಆರ್‌ ದಾಖಲಿಸುತ್ತಿದ್ದಾರೆ’ ಎಂದು ನಾಗರಿಕರಾದ ಮನೋಜ್‌ ಚಂದ್ರಶೇಖರ್‌ ಶ್ರೀನಿವಾಸ್‌ ಜಗದೀಶ್‌ ದೂರಿದರು. ‘ನಗರದಲ್ಲಿ ಈ ವರ್ಷ 27 ಸಾವಿರ ಫ್ಲೆಕ್ಸ್/ ಬ್ಯಾನರ್‌ಗಳನ್ನು ತೆರವು ಮಾಡಿದ್ದೇವೆ. 461 ಎಫ್ಐಆರ್ ದಾಖಲಿಸಿದ್ದೇವೆ’ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು. ‘ಸಚಿವರು ಹಾಗೂ ಶಾಸಕರ ಹೆಸರಿನಲ್ಲೇ ಹಲವು ಫ್ಲೆಕ್ಸ್‌ಗಳಿವೆ. ರಾಜಕೀಯ ಪಕ್ಷಗಳ ಬೆಂಬಲಿಗರ ಫ್ಲೆಕ್ಸ್‌/ ಬ್ಯಾನರ್‌ಗಳನ್ನು ತೆಗೆಯಲು ಹೋದರೆ ಹೆಚ್ಚು ಸಮಸ್ಯೆಯಾಗುತ್ತದೆ. ಒಬ್ಬರು ಇನ್ನೊಬ್ಬರ ಮೇಲೆ ಹೇಳಿ ಅವರ ಫ್ಲೆಕ್ಸ್‌ ಮೊದಲು ತೆಗೆಯಿರಿ ಎನ್ನುತ್ತಾರೆ. ಒತ್ತಡ ಹಾಗೂ ಪ್ರಭಾವದಿಂದಾಗಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.