ADVERTISEMENT

ಬಿಬಿಎಂಪಿ: ₹2,555 ಕೋಟಿ ಆಸ್ತಿ ತೆರಿಗೆ ಸಂಗ್ರಹ

ಯಲಹಂಕ ವಲಯದಲ್ಲಿ ಶೇ 76ರಷ್ಟು ಸಾಧನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 20:14 IST
Last Updated 27 ಡಿಸೆಂಬರ್ 2021, 20:14 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಕಳೆದ 9 ತಿಂಗಳಲ್ಲಿ ₹2,555 ಕೋಟಿ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಂಗ್ರಹಿಸಿದೆ. ಈ ಮೂಲಕ ತೆರಿಗೆ ಸಂಗ್ರಹ ಗುರಿಯಲ್ಲಿ ಶೇ 63ರಷ್ಟು ಸಾಧನೆ ಮಾಡಿದ್ದು, ಈ ಪೈಕಿ ಯಲಹಂಕ ವಲಯದಲ್ಲಿ ಅತೀ ಹೆಚ್ಚು ಶೇ 76.10ರಷ್ಟು ತೆರಿಗೆ ವಸೂಲಿಯಾಗಿದೆ.

‘ಲಾಕ್‌ಡೌನ್ ಇದ್ದ ಸಂದರ್ಭದಲ್ಲೂ ಆನ್‌ಲೈನ್ ಮೂಲಕ ಅಧಿಕ ಪ್ರಮಾಣದ ತೆರಿಗೆ ಪಾವತಿಯಾಗಿದೆ. ಆಸ್ತಿ ತೆರಿಗೆ ವಸೂಲಿ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಬುಧವಾರ ಈ ಅಭಿಯಾನ ನಡೆಯುತ್ತಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವ 3 ಲಕ್ಷಕ್ಕೂ ಹೆಚ್ಚು ಸುಸ್ತಿದಾರರ ಪೈಕಿ 1.41 ಲಕ್ಷ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಅದರಿಂದಲೇ ₹150 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಜೋಡಣೆ ಮಾಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇದೆಲ್ಲದರ ಪರಿಣಾಮ ಇಷ್ಟು ಪ್ರಮಾಣದ ತೆರಿಗೆ ಸಂಗ್ರಹ ಸಾಧ್ಯವಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಮೊದಲ ಹಂತದಲ್ಲಿ ನೋಟಿಸ್ ನೀಡಬೇಕು. ಅದಕ್ಕೂ ಜಗ್ಗದಿದ್ದರೆ ವಾರಂಟ್ ಜಾರಿ ಮಾಡಿ
ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಈ ಹಿಂದೆ ತಾಕೀತು ಮಾಡಿದ್ದರು.
ಹೊಸ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸುವ ಸಂಬಂಧ ಜಿಐಎಸ್ ಮತ್ತು ಡ್ರೋನ್ ಮೂಲಕ ಸರ್ವೆ ನಡೆಸುವಂತೆಯೂ ತಿಳಿಸಿದ್ದರು.‌

ADVERTISEMENT

‘ಅಂತೆಯೇ ಮೊದಲು ನೋಟಿಸ್, ನಂತರ ಜಪ್ತಿ ವಾರಂಟ್ ನೀಡಿದೆವು. ತೆರಿಗೆ ಪಾವತಿಸುವ ತನಕ ಬಿಡದೆ ಬೆನ್ನತ್ತಿದ್ದರಿಂದ ಇಷ್ಟು ಪ್ರಮಾಣದಲ್ಲಿ ತೆರಿಗೆ ವಸೂಲಿ ಸಾಧ್ಯವಾಗಿದೆ. ಕಳೆದ ಸಾಲಿನಲ್ಲಿ ಮಾರ್ಚ್‌ ಅಂತ್ಯಕ್ಕೆ ಯಲಹಂಕ ವಲಯದಲ್ಲಿ ₹207 ಕೋಟಿ ಸಂಗ್ರಹವಾಗಿತ್ತು. ಈಗ ಡಿಸೆಂಬರ್ ಅಂತ್ಯಕ್ಕೇ ₹259.49 ಕೋಟಿ ಸಂಗ್ರಹವಾಗಿದೆ. ಮಾರ್ಚ್‌ ವೇಳೆಗೆ ಗುರಿ ಮೀರಿ ತೆರಿಗೆ ವಸೂಲಿ ಆಗಲಿದೆ’ ಎಂದು ಯಲಹಂಕ ವಿಭಾಗವ ಉಪ ಆಯುಕ್ತ (ಕಂದಾಯ) ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.