ADVERTISEMENT

ಬಿಬಿಎಂಪಿ: 3 ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹ

ಗುರಿ ಸಾಧನೆ: ಮುಂಚೂಣಿಯಲ್ಲಿ ಯಲಹಂಕ ವಲಯ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 20:04 IST
Last Updated 30 ಮಾರ್ಚ್ 2022, 20:04 IST
   

ಬೆಂಗಳೂರು: ಬಿಬಿಎಂಪಿಯಲ್ಲಿ 2021–22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ₹ 3 ಸಾವಿರ ಕೋಟಿ ದಾಟಿದೆ. ಮಾ.29ರವರೆಗೆ ಒಟ್ಟು ₹ 3,004.83 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪಾಲಿಕೆ ಇದುವರೆಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ₹ 3 ಸಾವಿರ ಕೋಟಿ ಗಡಿ ದಾಟಿರುವುದು ಇದೇ ಮೊದಲು.

Caption

2021–22ನೇ ಸಾಲಿಗೆ ಒಟ್ಟು 4,000 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ₹ 3,058.23 ಕೋಟಿ ಪ್ರಸಕ್ತ ಸಾಲಿನ ತೆರಿಗೆ ಹಾಗೂ ₹942.30 ಕೋಟಿ ಹಳೆ ಬಾಕಿ ಸೇರಿತ್ತು.

‘ಭಾರಿ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿದ್ದವರಿಗೆ ನೋಟಿಸ್‌ ಜಾರಿಗೊಳಿಸಿ, ಒತ್ತಡ ಹಾಕಿದ್ದರಿಂದ ಅನೇಕರು ಹಳೆ ಬಾಕಿಗಳನ್ನು ಚುಕ್ತಾ ಮಾಡಿದ್ದಾರೆ. ಇನ್ನು ಅನೇಕರು ಹಳೆ ಬಾಕಿ ಪಾವತಿಸಿಲ್ಲ. ಅದರ ವಸೂಲಿಗೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಡಾ.ದೀಪಕ್‌ ಆರ್‌.ಎಲ್‌. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರತಿ ವರ್ಷವೂ ಕೊನೆಯ 2–3 ದಿನಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚು ಇರುತ್ತದೆ. ಮಂಗಳವಾರ (ಮಾರ್ಚ್‌ 29) 13 ಕೋಟಿ, ಬುಧವಾರ (ಮಾರ್ಚ್‌ 30) 23 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ. ಈ ಆರ್ಥಿಕ ವರ್ಷದ ಕೊನೆಯ ದಿನವಾದ ಗುರುವಾರ (ಮಾರ್ಚ್‌ 31) ಭಾರಿ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ’ ಎಂದು ಜಂಟಿ ಆಯುಕ್ತ (ಕಂದಾಯ) ವೆಂಕಟಾಚಲಪತಿ ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದ ಗುರಿ ಸಾಧನೆಯಲ್ಲಿ ಯಲಹಂಕ ವಲಯ ಮುಂಚೂಣಿಯಲ್ಲಿದೆ. ಅನೇಕ ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಟೆಕ್‌ ಪಾರ್ಕ್‌ಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕಲ್ಯಾಣ ಸಂಸ್ಥೆಗಳ ಮೇಲೆ ಇಲ್ಲಿನ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ನೋಟಿಸ್‌ ಜಾರಿಗೊಳಿಸಿ ತೆರಿಗೆ ವಸೂಲಿಗೆ ಕ್ರಮಕೈಗೊಂಡಿದ್ದರು. ಈ ವಲಯವು ಶೇ 84.95ರಷ್ಟು ಗುರಿ ಸಾಧನೆ ಮಾಡಿದೆ. ದಾಸರಹಳ್ಳಿ ವಲಯವು ಗುರಿ ಸಾಧನೆಯಲ್ಲಿ (ಶೇ 68.61) ಹಿಂದುಳಿದಿದೆ.

‘ಯಲಹಂಕ ವಲಯದಲ್ಲಿ ಕಳೆದ ವರ್ಷದವರೆಗೆ ಗರಿಷ್ಠ ₹ 217 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿತ್ತು. 2021–22ನೇ ಸಾಲಿನಲ್ಲಿ ಒಟ್ಟು ₹ 289.69 ಕೋಟಿ ತೆರಿಗೆ ಸಂಗ್ರಹವಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹಾಗೂ ವಿಶೇಷ ಆಯುಕ್ತ (ಕಂದಾಯ) ದೀಪಕ್‌ ಅವರ ಮಾರ್ಗದರ್ಶನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ’ ಎಂದು ಯಲಹಂಕ ವಲಯದ ಕಂದಾಯ ಉಪಾಯುಕ್ತ ಕೆ.ಶಿವೇಗೌಡ ತಿಳಿಸಿದರು.

ಬಿಬಿಎಂಪಿಯು ಕಳೆದ ಆರ್ಥಿಕ ವರ್ಷದಲ್ಲಿ (2020–21) ಆಸ್ತಿ ತೆರಿಗೆ, ಖಾತಾ ವರ್ಗಾವಣೆ, ಖಾತಾ ಪ್ರಮಾಣ ಪತ್ರ ನೀಡುವಿಕೆ ಹಾಗೂ ಸುಧಾರಣಾ ಶುಲ್ಕಗಳಿಂದ ಒಟ್ಟು ₹ 3,001.06 ಕೋಟಿ ಸಂಗ್ರಹಿಸಿತ್ತು. ಅದರಲ್ಲಿ ಆಸ್ತಿ ತೆರಿಗೆ ಸಂಗ್ರಹದ ಪಾಲು ₹ 2780.83 ಕೋಟಿ ಇತ್ತು.

***

ಬಿಬಿಎಂಪಿಯು ₹ 3 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ಸಂಗ್ರಹಿಸಿದ್ದು ಗಮನಾರ್ಹ ಸಾಧನೆ. ವ್ಯವಸ್ಥೆಯ ಕೆಲವು ಲೋಪಗಳನ್ನು ಸರಿಪಡಿಸಿ ತೆರಿಗೆ ಸಂಗ್ರಹವನ್ನು ಇನ್ನಷ್ಟು ಸುಧಾರಿಸಲು ಕ್ರಮ ಕೈಗೊಳ್ಳುತ್ತೇವೆ

- ಡಾ.ದೀಪಕ್‌ ಆರ್‌.ಎಲ್‌., ವಿಶೇಷ ಆಯುಕ್ತ (ಕಂದಾಯ), ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.