ADVERTISEMENT

ಒಂದೇ ದಿನ ಸಂಗ್ರಹವಾಯಿತು ₹ 36 ಕೋಟಿ ಆಸ್ತಿ ತೆರಿಗೆ!

ಕೋವಿಡ್‌ ಸಂಕಷ್ಟದ ನಡುವೆಯೂ ಕಳೆದ ವರ್ಷಕ್ಕಿಂತ ಹೆಚ್ಚು ತೆರಿಗೆ ಸಂಗ್ರಹ

ಪ್ರವೀಣ ಕುಮಾರ್ ಪಿ.ವಿ.
Published 24 ಮಾರ್ಚ್ 2021, 20:02 IST
Last Updated 24 ಮಾರ್ಚ್ 2021, 20:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಬುಧವಾರ ಒಂದೇ ದಿನ ₹ 36.65 ಕೋಟಿ ತೆರಿಗೆ ಸಂಗ್ರಹ ಮಾಡಿದ್ದಾರೆ. 2020–21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಇನ್ನೇನು ಒಂದೇ ವಾರ ಇದ್ದು, ಪಾಲಿಕೆಯು ಹಳೆ ಬಾಕಿಯೂ ಸೇರಿ ಇದುವರೆಗೆ ₹ 2,753 ಕೋಟಿ ತೆರಿಗೆ ಸಂಗ್ರಹಿಸಿದೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಲ್‌.ಶ್ರೀನಿವಾಸ್‌ 2020ರ ಏ. 20ರಂದು ಬಜೆಟ್‌ ಮಂಡಿಸಿದಾಗ ಬಾಕಿಯೂ ಸೇರಿ ಪ್ರಸಕ್ತ ಸಾಲಿನಲ್ಲಿ ₹ 2,500 ಕೋಟಿ ಹಳೆ ಬಾಕಿ ಸೇರಿಸಿ ₹ 4,942 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ನಿಗದಿಪಡಿಸಿದ್ದರು.

‘ಕಳೆದ (2019–20) ಸಾಲಿಗೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಬಿಬಿಎಂಪಿ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ತೆರಿಗೆ ಸಂಗ್ರಹ ಯಾವತ್ತೂ ಆಗಿರಲಿಲ್ಲ. ಕೋವಿಡ್‌ನಿಂದ ಎದುರಾದ ಸಂಕಷ್ಟದ ಕಾಲದಲ್ಲೂ ಇಷ್ಟೊಂದು ತೆರಿಗೆ ಸಂಗ್ರಹವಾಗಿರುವುದಕ್ಕೆ ಅಧಿಕಾರಿಗಳ ಪರಿಶ್ರಮ ಹಾಗೂ ಬಿಬಿಎಂಪಿ ಮೇಲೆ ಜನ ನಂಬಿಕೆ ಇಟ್ಟಿರುವುದು ಕಾರಣ’ ಎಂದು ಪಾಲಿಕೆ ಆಯಕ್ತ ಎನ್‌.ಮಂಜುನಾಥಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತೆರಿಗೆ ಪಾವತಿಗೆ ವಿಶೇಷ ರಿಯಾಯಿತಿ ಇಲ್ಲದ ದಿನಗಳಲ್ಲಿ ಒಂದೇ ದಿನ ₹ 36 ಕೋಟಿ ತೆರಿಗೆ ಸಂಗ್ರಹವಾಗಿದ್ದೂ ಹೊಸ ಸಾಧನೆ. ಇನ್ನೂ ₹ 75 ಕೋಟಿ ಮೊತ್ತದ ತೆರಿಗೆ ಪಾವತಿಗೆ ಆಸ್ತಿ ಮಾಲೀಕರು ಚಲನ್‌ ಪಡೆದಿದ್ದು, ಅದು ವಾರದೊಳಗೆ ಪಾವತಿ ಆಗುವ ನಿರೀಕ್ಷೆ ಇದೆ. ಈ ಆರ್ಥಿಕ ವರ್ಷದ ಅಂತ್ಯಕ್ಕೆ ₹ 2,850 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಬಹುದು’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

‘ಕೋವಿಡ್‌ ಇದ್ದುದರಿಂದ ತೆರಿಗೆಸಂಗ್ರಹ ಪ್ರಮಾಣದಲ್ಲಿ ಭಾರಿ ಇಳಿಕೆ ಆಗಬಹುದು ಎಂದು ಭಾವಿಸಿದ್ದೆವು. ಹಾಗಾಗಿ ತೆರಿಗೆ ವಸೂಲಿಗೆ ಕಠಿಣ ಪರಿಶ್ರಮ ಹಾಕಿದೆವು. ತೆರಿಗೆ ಸಂಗ್ರಹಕ್ಕೆ ಪ್ರತಿ ಬುಧವಾರ ವಿಶೇಷ ಅಭಿಯಾನ ನಡೆಸಿದೆವು. ಅದು ಫಲ ನೀಡಿದೆ’ ಎಂದು ವಿಶೇಷ ಆಯುಕ್ತ ಬಸವರಾಜ್‌ ತಿಳಿಸಿದರು.

2019–20ನೇ ಸಾಲಿನಲ್ಲಿ ಬಿಬಿಎಂಪಿ ಹಿಂದಿನ ವರ್ಷಗಳ ಬಾಕಿ ₹ 2,480.58 ಕೋಟಿಯೂ ಸೇರಿದಂತೆ ಒಟ್ಟು ₹ 4,929.89 ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ₹ 2,686 ಕೋಟಿ ತೆರಿಗೆ ಸಂಗ್ರಹಿಸಿತ್ತು. ಈ ಬಾರಿ ಇದಕ್ಕಿಂತಲೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ.

ಮಾರ್ಚ್‌ 26ರಂದು ಬಜೆಟ್‌ ಮಂಡನೆ?

ಬಿಬಿಎಂಪಿ ಇದೇ 26ರಂದು ಬಜೆಟ್‌ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

‘ತಪ್ಪು ಮಾಹಿತಿಗೆ ಇನ್ನು ಅವಕಾಶವಿಲ್ಲ’

‘ಆಸ್ತಿ ತೆರಿಗೆ ಪಾವತಿಗೆ ಎ,ಬಿ,ಸಿ,ಡಿ,ಇ ಎಂಬ ವಲಯಗಳನ್ನು ಗೊತ್ತುಪಡಿಸಲಾಗಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ತೆರಿಗೆ ಪಾವತಿಸುವಾಗ ಆಸ್ತಿ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಪಡದ ವಲಯವನ್ನು (ಅಲ್ಲಿ ಮಾರ್ಗಸೂಚಿ ಮೌಲ್ಯ ಬೇರೆ ಇರುತ್ತದೆ) ಉಲ್ಲೇಖಿಸಿ ವಂಚನೆ ನಡೆಸುತ್ತಿದ್ದರು. ಇಂತಹ 3.90 ಲಕ್ಷ ಪ್ರಕರಣಗಳನ್ನು ಬಿಬಿಎಂಪಿ ಪತ್ತೆಹಚ್ಚಿದ್ದು, 78 ಸಾವಿರ ಮಂದಿಗೆ ನೋಟಿಸ್‌ ನೀಡಿದ್ದೇವೆ. ಈಗ ಬಿಬಿಎಂಪಿಯೇ ವಲಯದ ಆಯ್ಕೆ ಮಾಡುವುದರಿಂದ ಇಂತಹ ವಂಚನೆಗೆ ಅವಕಾಶ ಇಲ್ಲ. ಹಾಗಾಗಿ ಸಹಜವಾಗಿ ಮುಂದಿನ ವರ್ಷ ಆಸ್ತಿ ತೆರಿಗೆ ಸಂಗ್ರಹ ಇನ್ನಷ್ಟು ಹೆಚ್ಚಳವಾಗಲಿದೆ’ ಎಂದು ಮಂಜುನಾಥಪ್ರಸಾದ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಬಹುಮಹಡಿ ಕಟ್ಟಡಗಳ ಟೋಟಲ್‌ ಸ್ಟೇಷನ್‌ ಸರ್ವೆ ನಡೆಸಿದಾಗ ಆಸ್ತಿ ತೆರಿಗೆ ವ್ಯತ್ಯಾಸ ಕಂಡುಬಂದಿದೆ. ಇದರ ಮೊತ್ತವೇ ₹ 627 ಕೋಟಿಗಳಷ್ಟಿದೆ. ಈ ವ್ಯತ್ಯಾಸದ ಮೊತ್ತದ ವಸೂಲಿಗೂ ಕ್ರಮವಹಿಸಲಾಗುತ್ತಿದೆ’ ಎಂದರು.

ಅಂಕಿ ಅಂಶ

20.60 ಲಕ್ಷ – ತೆರಿಗೆ ಪಾವತಿ ವ್ಯಾಪ್ತಿಗೆ ಸೇರಿರುವ ಆಸ್ತಿಗಳು

₹ 2,442 ಕೋಟಿ – ಬಿಬಿಎಂಪಿಯ 2020–21ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹ ಗುರಿ

₹ 2098 ಕೋಟಿ – 2020–21ನೇ ಸಾಲಿನಲ್ಲಿ ಸಂಗ್ರಹವಾದ ಆಸ್ತಿ ತೆರಿಗೆ

₹ 2500 ಕೋಟಿ – ಈ ಹಿಂದಿನ ವರ್ಷಗಳ ತೆರಿಗೆ ಬಾಕಿ ವಸೂಲಾಗಬೇಕಾದುದು

₹ 592.94 ಕೋಟಿ – ಹಳೆ ಬಾಕಿ ವಸೂಲಿಯಾಗಿರುವುದು

₹ 56 ಕೋಟಿ – ನ್ಯಾಯಾಲಯದ ಆದೇಶಗಳ ಮೂಲಕ ತೆರಿಗೆಯ ಭಾಗಶಃ ಮೊತ್ತ ಪಾವತಿ ಆಗಿರುವುದು

7.44 ಲಕ್ಷ – ತೆರಿಗೆ ಬಾಕಿ ಉಳಿಸಿಕೊಂಡಿದ್ದ ಆಸ್ತಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.