ADVERTISEMENT

ನಾಗವಾರ: ಸೋಂಕಿತನ ಸಂಪರ್ಕ, 53 ಮಂದಿಗೆ ಪ್ರತ್ಯೇಕವಾಸ

ಬಿಬಿಎಂಪಿ ಆಯುಕ್ತರ ನೇತೃತ್ವದ ತಂಡದಿಂದ ಕಂಟೈನ್‌ಮೆಂಟ್‌ ಪ್ರದೇಶ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಮೇ 2020, 10:36 IST
Last Updated 20 ಮೇ 2020, 10:36 IST
ನಾಗವಾರ ವಾರ್ಡ್‌ನ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡುವ ಬಗ್ಗೆ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಾಗವಾರ ವಾರ್ಡ್‌ನ ಗಾಂಧಿನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡುವ ಬಗ್ಗೆ ಬಿ.ಎಚ್‌.ಅನಿಲ್‌ ಕುಮಾರ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   

ಬೆಂಗಳೂರು: ಬಿಬಿಎಂಪಿ ಪೂರ್ವ ವಲಯದ ನಾಗವಾರ ವಾರ್ಡ್ ವ್ಯಾಪ್ತಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಪ್ರಕರಣ ಪತ್ತೆಯಾಗಿದೆ. ಇಲ್ಲಿನ ಸೋಂಕಿತ ವ್ಯಕ್ತಿ ಜೊತೆ ನೇರ ಸಂಪರ್ಕ ಹೊಂದಿದ್ದ ಮೂವರು ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 50 ಮಂದಿಯನ್ನು ಬಿಬಿಎಂಪಿ ಗುರುತಿಸಿದ್ದು ಅವರ ಪ್ರತ್ಯೇಕ ವಾಸಕ್ಕೆ ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಕೋವಿಡ್‌ 19 ಸೋಂಕು ತಗುಲಿದ ವ್ಯಕ್ತಿ ವಾಸವಿದ್ದ ಹಿನ್ನೆಲೆಯಲ್ಲಿ ನಾಗವಾರ ವಾರ್ಡ್ ಅನ್ನು ನಿಯಂತ್ರಿತ (ಕಂಟೈನ್ಮೆಂಟ್) ಪ್ರದೇಶವನ್ನಾಗಿ ಘೋಷಿಸಲಾಗಿದೆ. ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ನೇತೃತ್ವದ ಅಧಿಕಾರಿಗಳ ತಂಡ ಕೋವಿಡ್‌ 19 ಸೋಂಕು ಪತ್ತೆಯಾದ ಪ್ರದೇಶಕ್ಕೆ ಭೇಟಿ ನೀಡಿತು. ಈ ನಿಯಂತ್ರಿತ ಪ್ರದೇಶದಲ್ಲಿ ಜನರ ಓಡಾಡ ತಡೆಯುವ ಸಲುವಾಗಿ ನಡೆದಿರುವ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿತು.

ನಾಗರವಾರ ವಾರ್ಡ್ನಲ್ಲಿ ಕೆ.ಜಿ.ಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮುತ್ತು ಕಾಂಪೌಡ್ (ಗಾಂಧಿನಗರ) ಮತ್ತು ಸುತ್ತಮುತ್ತಲಿನ ಪ್ರದೇಶದ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಜೋಡಿಸಿ ಸೀಲ್‌ಡೌನ್ ಮಾಡಲು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

‘ಸೋಂಕಿತ ವ್ಯಕ್ತಿಯ ಜೊತೆ ಇನ್ನಷ್ಟು ಮಂದಿ ಪರೋಕ್ಷ ಸಂಪರ್ಕ ಹೊಂದಿರುವ ಸಾಧ್ಯತೆ ಇರುವುದರಿಂದ ಅವರನ್ನೂ ಪತ್ತೆ ಹಚ್ಚಬೇಕು. ಈ ವಾರ್ಡ್‌ನಲ್ಲಿ ಇತರರಿಗೆ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಯುಕ್ತರು ಸೂಚಿಸಿದರು.

ಬಿಬಿಎಂಪಿಯ ವಿಶೇಷ ಆಯುಕ್ತ (ಹಣಕಾಸು) ಲೋಕೇಶ್, ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಪೂರ್ವ ವಲಯ ಜಂಟಿ ಆಯುಕ್ತರಾದ ಪಲ್ಲವಿ, ಆರೋಗ್ಯಾಧಿಕಾರಿ ಸಿದ್ಧಪ್ಪಾಜಿ ಅವರು ಇಲ್ಲಿನ ನಿಯಂತ್ರಿತ ಪ್ರದೇಶದ ನಿವಾಸಿಗಳಿಗೆ ಸೌಕರ್ಯ ಒದಗಿಸುವ ಬಗ್ಗೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.