ADVERTISEMENT

ಲಸಿಕೆಗೆ ಸಿಂಗಪುರ ಮಾದರಿ–ಚಿಂತನೆ ನಡೆಯಬೇಕಿದೆ: ಬಿಬಿಎಂಪಿ ಮುಖ್ಯ ಆಯುಕ್ತ ಗುಪ್ತ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 16:36 IST
Last Updated 12 ನವೆಂಬರ್ 2021, 16:36 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ‘ಸಿಂಗಪುರ ಮಾದರಿಯಲ್ಲಿ ಲಸಿಕೆ ಕಡ್ಡಾಯಗೊಳಿಸುವ ನಿರ್ಧಾರ ಸದ್ಯಕ್ಕಿಲ್ಲ, ಈ ಬಗ್ಗೆ ಚಿಂತನೆ ನಡೆಯಬೇಕಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

‘ಸಿಂಗಪುರ ಮಾದರಿಯಲ್ಲಿ ಹಲವು ದೇಶಗಳಲ್ಲಿ ಲಸಿಕೆ ಕಡ್ಡಾಯ ಇದೆ. ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಬರಲು ಅವಕಾಶ ಇದೆ. ನಗರದ ಜನ ತಮ್ಮ ಮತ್ತು ಸುತ್ತಮುತ್ತಲಿನವರ ಆರೋಗ್ಯದ ಹಿತದೃಷ್ಟಿಯಿಂದ ತಾವಾಗಿಯೇ ಲಸಿಕೆ ಪಡೆಯುವುದು ಒಳ್ಳೆಯದು’ ಎಂದು ಹೇಳಿದರು.

‘ನಗರದಲ್ಲಿ ಕೋವಿಡ್‌ ಹತೋಟಿಯಲ್ಲಿದೆ. ಶೇ 87ರಷ್ಟು ಜನ ಮೊದಲ ಡೋಸ್ ಮತ್ತು ಶೇ 58ರಷ್ಟು ಜನ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಎಲ್ಲರೂ ಎರಡು ಡೋಸ್ ಲಸಿಕೆ ಪಡೆಯಬೇಕು’ ಎಂದು ಅವರು ಮಾನವಿ ಮಾಡಿದರು.

ADVERTISEMENT

‘ನಗರದಲ್ಲಿನ ಅಕ್ರಮ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ. ನಕ್ಷೆ ಇಲ್ಲದ ಮತ್ತು ನಕ್ಷೆ ಉಲ್ಲಂಘನೆ ಮಾಡಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಈ ಬಗ್ಗೆ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲಾಗುವುದು. ವರದಿ ನೀಡಿದರೆ ಸಾಕಾಗುವುದಿಲ್ಲ. ನಿಯಮ ಉಲ್ಲಂಘನೆ ಮಾಡಿರುವ ಕಟ್ಟಡಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಲಾಗುವುದು’ ಎಂದು ಹೇಳಿದರು.

ಕಡಲೆಕಾಯಿ ಪರಿಷೆಗೆ ತಯಾರಿ
ಪಾರಂಪರಿಕ ಉತ್ಸವವಾದ ಬಸನವಗುಡಿ ಕಡಲೆಕಾಯಿ ಪರಿಷೆ ನ.29ರಿಂದ ಆರಂಭವಾಗಲಿದ್ದು, ವ್ಯವಸ್ಥಿತವಾಗಿ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಗೌರವ್ ಗುಪ್ತ ತಿಳಿಸಿದರು.

ಮುಜರಾಯಿ, ಬೆಸ್ಕಾಂ, ಪೊಲೀಸ್ ಸೇರಿ ಸಂಬಂಧಪಟ್ಟ ಇಲಾಖೆಗಳ ಜತೆ ಸಭೆ ನಡೆದಿದೆ. ಪಾಲಿಕೆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.