
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳ ತೆರವು ಕಾರ್ಯಾಚರಣೆ ಆರಂಭಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲ ಇಲಾಖೆಗಳೊಂದಿಗಿನ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ‘ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ಗುರುತಿಸಬೇಕು. ಅವುಗಳನ್ನು ತ್ವರಿತವಾಗಿ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಅರಣ್ಯ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಂಚಾರ ಸಿಗ್ನಲ್‌ಗಳಿಗೆ ಅಡ್ಡಿಯಾಗಿರುವ, ಪಾದಚಾರಿ ಮಾರ್ಗಗಳಲ್ಲಿ ನಾಗರಿಕರ ತಲೆಗೆ ತಾಗುವ, ರಸ್ತೆಗಳಿಗೆ ವಾಲಿಕೊಂಡಿರುವ ಹಾಗೂ ವಿದ್ಯುತ್ ದೀಪಗಳಿಗೆ ಅಡ್ಡಿಯಾಗಿರುವ ಮರದ ರೆಂಬೆಗಳು/ ಕೊಂಬೆಗಳನ್ನು ಕೂಡಲೇ ಕತ್ತರಿಸಬೇಕು. ಪಾದಚಾರಿ ಮಾರ್ಗಗಳಲ್ಲಿ ಬಿದ್ದಿರುವ ಮರದ ಕೊಂಬೆಗಳನ್ನೂ ತೆರವುಗೊಳಿಸಬೇಕು ಎಂದು ಹೇಳಿದರು.
‘ಮಾರ್ಕ್ಸ್’ ತಂತ್ರಾಂಶದ ಮೂಲಕ ರಸ್ತೆ ಕತ್ತರಿಸಲು ಸಲ್ಲಿಸಿರುವ ಅರ್ಜಿಗಳಿಗೆ ತಕ್ಷಣ ಅನುಮತಿ ನೀಡಬೇಕು. ನಂತರ ಸಂಬಂಧಿತ ಇಲಾಖೆಗಳು ರಸ್ತೆ ಕತ್ತರಿಸುವ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ರಸ್ತೆ ಪುನರ್ ನಿರ್ಮಾಣ ಕಾರ್ಯವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕು ಎಂದರು.
ಸಂಚಾರ ಪೊಲೀಸ್ ವಿಭಾಗವು ರಸ್ತೆಗಳಲ್ಲಿ ಮಳೆನೀರು ನಿಲ್ಲುವ ಸ್ಥಳಗಳ ಪಟ್ಟಿಯನ್ನು ಸಲ್ಲಿಸಿದ್ದು, ಅದರನ್ವಯ ಸ್ಥಳ ಪರಿಶೀಲನೆ ನಡೆಸಬೇಕು. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ಎಲ್ಲಾ ಪ್ರದೇಶಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಮಳೆನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಅಕ್ರಮ ಕಟ್ಟಡ ತೆರವು:
ಕೇಂದ್ರ ನಗರ ಪಾಲಿಕೆಯ ಶಾಂತಲಾನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳ ಭಾಗವನ್ನು ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.
76-122-4 ಆಸ್ತಿಗೆ ಕಾಯ್ದೆಯಡಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ನಿಯಮಬಾಹಿರವಾಗಿ ನಿರ್ಮಿಸಲಾದ ಭಾಗಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಸೂಚಿಸಲಾಗಿತ್ತು. ಆದರೂ ಮಾಲೀಕರು ಅದನ್ನು ಪಾಲಿಸಿರಲಿಲ್ಲ. ಹೀಗಾಗಿ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಟ್ಟಡದ ಅಕ್ರಮ ಭಾಗಗಳನ್ನು ಬುಧವಾರ ತೆರವುಗೊಳಿಸಿದರು.
ಮುಖ್ಯ ಆಯುಕ್ತರ ಸೂಚನೆಗಳು
* ಆಯಾ ನಗರ ಪಾಲಿಕೆಗಳಲ್ಲಿ ‘ಅನಾಥ ವಾಹನಗಳ’ ಟೋಯಿಂಗ್ ಕಾರ್ಯಾಚರಣೆ ಪ್ರಾರಂಭಿಸಬೇಕು
* ಕೆ-100ರಲ್ಲಿ ಜಲಮಂಡಳಿಯ ಕೊಳಚೆ ನೀರು ಹರಿದುಬರುವುದನ್ನು ತಡೆಯಬೇಕು.
* ಮೆಟ್ರೊ ನಿಲ್ದಾಣ ಹಾಗೂ ಸುತ್ತಮುತ್ತ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು
* ಲಾಸ್ಟ್ ಮೈಲ್ ಕನೆಕ್ಟಿವಿಟಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು
* ನಗರ ಪಾಲಿಕೆಗಳಲ್ಲಿ ಪಾದಚಾರಿ ಮಾರ್ಗಗಳ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು
* ವೈಟ್ ಟಾಪಿಂಗ್ ಕಾಮಗಾರಿಗಳು ನಡೆಯುತ್ತಿರುವ ಕಡೆ ಸಮಸ್ಯೆಗಳನ್ನು ಬಗೆಹರಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.