ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ಇಂದು ಬೆಳಿಗ್ಗೆ 7 ಗಂಟೆಯಿಂದ ಅಮೃತಹಳ್ಳಿ ಮುಖ್ಯ ರಸ್ತೆಯ ಬ್ಯಾಟರಾಯನಪುರದಲ್ಲಿರುವ ಬೆಂಗಳೂರು ಉತ್ತರ ನಗರ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಸಿದರು.
ಆಕ್ರಮಣಕಾರಿ ಬೀದಿ ನಾಯಿಗಳ ಸೆರೆ:
ಫೋನ್ ಇನ್ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಎಂಬುವವರು ಬೀದಿ ನಾಯಿಗಳ ಆಕ್ರಮಣಕಾರಿ ನಡವಳಿಕೆಯ ಬಗ್ಗೆ ದೂರು ನೀಡಿದ್ದು, ಆಯುಕ್ತರ ನಿರ್ದೇಶನದ ಮೇರೆಗೆ ಸುಗ್ಗಪ್ಪ ಲೇಔಟ್ ನಲ್ಲಿ ಈಗಾಗಲೇ ಎರಡು ಬೀದಿ ನಾಯಿಗಳನ್ನು ಸೆರೆ ಹಿಡಿದಿದ್ದು, ಅವುಗಳನ್ನು ನಡವಳಿಕೆಯ ವೀಕ್ಷಣೆಗೆ ಒಳಪಡಿಸಲಾಗಿದೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ:
ಫೋನ್ ಇನ್ ಕಾರ್ಯಕ್ರಮದಲ್ಲಿ ಬಹುಪಾಲು ದೂರುಗಳು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ್ದಾಗಿದ್ದು, ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಹಾಗೂ ರಸ್ತೆ ದುರಸ್ತಿಯ ಅಗತ್ಯವಿರುವ ಸ್ಥಳಗಳಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡು, ನಾಗರಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಗೆ ಸೂಚನೆ:
ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಸಮರ್ಪಕ ತ್ಯಾಜ್ಯ ನಿರ್ವಹಣೆಯಾಗುತ್ತಿರುವುದರ ಕುರಿತು ಕಾರ್ಯಕ್ರಮದ ವೇಳೆ ದೂರುಗಳು ಬಂದಿದ್ದು, ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸಿ, ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆ ಕಾರ್ಯವನ್ನು ನಡೆಸುವಂತೆ ಸೂಚಿಸಿದರು.
ಬೀದಿ ದೀಪಗಳ ಸೂಕ್ತ ನಿರ್ವಹಣೆ:
ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಸಮಸ್ಯೆಗಳು ಎದುರಾಗಿದ್ದು, ಸೂಕ್ತ ರೀತಿಯಲ್ಲಿ ಬೀದಿ ದೀಪಗಳನ್ನು ನಿರ್ವಹಿಸುವಂತೆ ಹಾಗೂ ದುರಸ್ತಿಯ ಅಗತ್ಯವಿದ್ದಲ್ಲಿ ಕಾರ್ಯವನ್ನು ಕೈಗೆತ್ತಿಕೊಂಡು ತ್ವರಿತವಾಗಿ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 41 ಕರೆಗಳನ್ನು ಸ್ವೀಕರಿಸಿದ್ದು ಒಟ್ಟಾರೆಯಾಗಿ 64 ಅಹವಾಲುಗಳನ್ನು ಸ್ವೀಕರಿಸಲಾಗಿದೆ. ಸದರಿ ಅಹವಾಲುಗಳನ್ನು ಸಹಾಯ ಪೋರ್ಟಲ್ ನಲ್ಲಿ ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ, ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.
ಮುಂದುವರೆದಂತೆ, ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಸಾರ್ವಜನಿಕರಿಗೆ ಅನುವಾಗುವಂತೆ ಹಾಗೂ ನಗರ ಪಾಲಿಕೆಯ ಮಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವ ಸಲುವಾಗಿ ಪ್ರತಿ ಶುಕ್ರವಾರ ಆಯುಕ್ತರು ಫೋನ್ ಇನ್ ಕಾರ್ಯಕ್ರಮ ಮುಂದುವರಿಸಲಿದ್ದು, ಸಾರ್ವಜನಿಕರ ಅಹವಾಲುಗಳ ಸಂಬಂಧ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.