ಬೆಂಗಳೂರು: ‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗೆ 2023ರ ಆಗಸ್ಟ್‌ನಿಂದ ಬಿಲ್ ಪಾವತಿಯಾಗಿಲ್ಲ. ಕನಿಷ್ಠ 12 ತಿಂಗಳ ಎಲ್‌ಒಸಿಯನ್ನಾದರೂ ಶೀಘ್ರ ಬಿಡುಗಡೆ ಮಾಡಿ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘ ಮನವಿ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ‘2023ರ ಆಗಸ್ಟ್‌ನಿಂದ 2025ರ ಜೂನ್‌ವರೆಗೆ 23 ತಿಂಗಳ ಬಿಲ್ ಪಾವತಿ ಬಾಕಿ ಇದೆ. 2023ರ ಆಗಸ್ಟ್‌ನಿಂದ 12 ತಿಂಗಳ ಎಲ್‌ಒಸಿ ಬಿಡುಗಡೆ ಮಾಡಿ’ ಎಂದರು.
‘₹1 ಕೋಟಿ ಮೀರಿದ ಕಾಮಗಾರಿಗಳಿಗೆ ಗುಣ ನಿಯಂತ್ರಣ ವಿಭಾಗದಿಂದ ಯೋಜನಾ ನಿರ್ವಹಣಾ ಸಲಹೆಗಾರರನ್ನು (ಪಿಎಂಸಿ) ನೇಮಿಸಿಕೊಳ್ಳುತ್ತಿದ್ದು, ಹಿಂದಿನ ಪದ್ಧತಿಯಂತೆ ಕಾರ್ಯಪಾಲಕ ಎಂಜಿನಿಯರ್‌ಗಳು ಪಿಎಂಸಿ ನಿಗದಿಪಡಿಸಿಕೊಳ್ಳಲು ಆದೇಶಿಸಬೇಕು’ ಎಂದು ಕೋರಿದ್ದಾರೆ.
‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದಿಂದ (ಕೆಆರ್‌ಐಡಿಎಲ್) ಆರೇಳು ವರ್ಷಗಳ ಹಿಂದೆ ನಡೆಸಿರುವ ಕಾಮಗಾರಿಯ ಬಿಲ್‌ನಲ್ಲಿ ಶೇ 25ರಷ್ಟನ್ನು ತಡೆಹಿಡಿದಿದ್ದು, ಅದನ್ನು ಬಿಡುಗಡೆ ಮಾಡಬೇಕು. 2019ರ ಜೂನ್‌ನಿಂದ 2023ರ ಮಾರ್ಚ್ ಅಂತ್ಯದವರೆಗೆ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್‌ನಲ್ಲಿ ತಡೆಹಿಡಿದಿರುವ ಶೇ 10ರಷ್ಟು ಭದ್ರತಾ ಠೇವಣಿಯನ್ನು ಪಾವತಿಸಬೇಕು’ ಎಂದಿದ್ದಾರೆ.
‘ವಾರ್ಡ್ ಮಟ್ಟದ ಕಾಮಗಾರಿಗಳನ್ನು ವಿಭಾಗ ಮಟ್ಟದಲ್ಲಿ ಒಟ್ಟುಗೂಡಿಸಿ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದ್ದು, ಪ್ಯಾಕೇಜ್ ಪದ್ಧತಿಯನ್ನು ರದ್ದುಪಡಿಸಬೇಕು’ ಎಂದು ಮನವಿ ಮಾಡಿದ್ದಾರೆ.
₹2150 ಕೋಟಿ ಬಾಕಿ: ನಂದಕುಮಾರ್
‘ಬಿಬಿಎಂಪಿ ಅನುದಾನದಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್‌ಗಳು 2023ರ ಆಗಸ್ಟ್‌ನಿಂದ ಬಾಕಿ ಉಳಿದಿದ್ದು ಇದರ ಮೊತ್ತ ಸುಮಾರು ₹2150 ಕೋಟಿ’ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ತಿಳಿಸಿದರು. ‘ನಾವು 12 ತಿಂಗಳ ಎಲ್‌ಒಸಿ ಕೇಳುತ್ತಿದ್ದು ಇದು ಸುಮಾರು ₹600 ಕೋಟಿಯಾಗಲಿದೆ. ಬಿಬಿಎಂಪಿಯಲ್ಲಿ ಸಂಗ್ರಹವಾಗುವ ತೆರಿಗೆಯಿಂದಲೇ ಈ ಹಣವನ್ನು ಪಾವತಿಸಬೇಕಾಗಿದೆ. ಈಗಾಗಲೇ ಸುಮಾರು ₹2500 ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದ್ದು ಅದರಲ್ಲಿ ₹600 ಕೋಟಿಯನ್ನು ಪಾವತಿಸಿದರೆ ಗುತ್ತಿಗೆದಾರರು ಸ್ವಲ್ಪಮಟ್ಟಿಗೆ ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ. ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ನಮ್ಮ ಮನವಿಗೆ ಸ್ಪಂದಿಸಿದ್ದು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.