ADVERTISEMENT

ತುಷಾರ್ ಗಿರಿನಾಥ್ ವಿರುದ್ಧ ಆಕ್ರೋಶ: 21ರಿಂದ ಬಿಬಿಎಂಪಿ ಗುತ್ತಿಗೆದಾರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 4:31 IST
Last Updated 18 ಸೆಪ್ಟೆಂಬರ್ 2022, 4:31 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ಪೂರ್ಣಗೊಂಡ ಕಾಮಗಾರಿ ಬಿಲ್ ಪಾವತಿ ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸಿರುವುದನ್ನು ವಿರೋಧಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘ ಸೆ.21ರಿಂದ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧರಿಸಿದೆ.

‘ಬಿಲ್ ಪಾವತಿಗೆ ಸಂಬಂಧಿಸಿದಂತೆ ಹಲವು ಹೊಸ ಪ್ರಕ್ರಿಯೆಗಳನ್ನು ಮುಖ್ಯ ಆಯುಕ್ತರು ಹೊರಡಿಸಿದ್ದರು. ಇದನ್ನು ಬದಲಿಸಲು ಕೋರಿ ಮೂರು ಬಾರಿ ಮನವಿ ಸಲ್ಲಿಸಿದ್ದೆವು. ಆ.30ರಂದು ನಮ್ಮೊಂದಿಗೆ ಚರ್ಚೆ ನಡೆಸಿ ಎಲ್ಲಾ ಬೇಡಿಕೆ ಈಡೇರಿಸುವ ಭರವಸೆಯನ್ನೂ ನೀಡಿದ್ದರು. ಆದರೆ, ಸೆ.14ರಂದು ಹೊರಡಿಸಿರುವ ಆದೇಶದಲ್ಲಿ ಇನ್ನಷ್ಟು ಹೊಸ ಅಂಶಗಳನ್ನು ಸೇರಿಸಿದ್ದಾರೆ. ಆದ್ದರಿಂದ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ’ ಎಂದು ಸಂಘದ ಅಧ್ಯಕ್ಷ ಅಂಬಿಕಾಪತಿ ತಿಳಿಸಿದರು.

ಈ ಸಂಬಂಧ ಮುಖ್ಯ ಆಯುಕ್ತರಿಗೆ ಪತ್ರವನ್ನು ಬರೆಯಲಾಗಿದೆ ಎಂದರು.

ADVERTISEMENT

‘ಗುಣಮಟ್ಟಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಬದಲಿಸಲಾಗಿದೆ. ಇದು ಗುತ್ತಿಗೆದಾರರಿಗೆ ಹೊರೆಯಾಗಿದೆ. ಜುಲೈ 30ರ ಆದೇಶದಂತೆ ಮಾರ್ಪಡಿಸಬೇಕು. ವಲಯ ಕಚೇರಿಗಳಲ್ಲಿ ಆಯಾ ಬಿಲ್ ಪಾವತಿಯನ್ನು ರದ್ದುಪಡಿಸಿ ಕೇಂದ್ರ ಕಚೇರಿಯಿಂದಲೇ ನಿರ್ವಹಿಸಬೇಕು. ಟಿವಿಸಿಸಿ ಮೂಲಕ ತಪಾಸಣೆಯನ್ನು ಕೈಬಿಡಬೇಕು. 2020ರ ಅಕ್ಟೋಬರ್‌ನಿಂದ ಈವರೆಗೆ ಬಿಲ್ ಪಾವತಿ ಬಾಕಿ ಇದ್ದು, ಕನಿಷ್ಠ 6 ತಿಂಗಳ ‘ಜನರಲ್ ಎಲ್ಒಸಿ’ ಯನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.

‘ಟೆಂಡರ್ ಬಿಡ್ ಡಾಕ್ಯುಮೆಂಟ್ ನಿಯಮಗಳ ಪ್ರಕಾರ ಕಾಮಗಾರಿ ನಿರ್ವಹಣಾ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಬೇಕು. ಬಾಕಿ ಇರುವ ಬಿಲ್ಲುಗಳಿಗೆ ಹಾಗೂ 2022ರ ಜುಲೈ18ರವರೆಗೆ ನೀಡಿರುವ ಕಾರ್ಯಾ ದೇಶಗಳಿಗೆ ಶೇ 6ರಷ್ಟು ಜಿಎಸ್‌ಟಿ ವ್ಯತ್ಯಾಸದ ಮೊತ್ತವನ್ನು ಬಿಬಿಎಂಪಿ ಭರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.