ADVERTISEMENT

ಕೋವಿಡ್‌ ಶವಸಂಸ್ಕಾರ ಉಚಿತ - ಚಿತಾಗಾರಗಳ ಸಂಖ್ಯೆ ಹೆಚ್ಚಳ

ವಿದ್ಯುತ್‌ ಚಿತಾಗಾರದ ಮುಂದೆ ಶವಗಳ ಸಾಲು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 20:48 IST
Last Updated 15 ಏಪ್ರಿಲ್ 2021, 20:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ವಿದ್ಯುತ್‌ ಚಿತಾಗಾರದ ಮುಂದೆ ಶವಗಳ ಸಾಲು ಹೆಚ್ಚಾಗುತ್ತಿದೆ. ಅಂತ್ಯಕ್ರಿಯೆ ಮುಗಿಸಲು ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಮಸ್ಯೆಯನ್ನು ಮನಗಂಡಿರುವ ಬಿಬಿಎಂಪಿಯು ಮೂರು ಹೆಚ್ಚುವರಿ ಚಿತಾಗಾರಗಳನ್ನು ಗುರುತಿಸಿದೆ. ಆ ಮೂಲಕ ಕೋವಿಡ್‌ ಶವಗಳ ದಹನ ಮಾಡುವ ಚಿತಾಗಾರಗಳ ಸಂಖ್ಯೆ 7ಕ್ಕೆ ಏರಿದೆ.

ಕೋವಿಡ್‌ ಶವಗಳನ್ನು ದಹಿಸಲು ಹೆಚ್ಚು ಹಣ ಕೇಳಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿಯೂ ಕ್ರಮ ಕೈಗೊಂಡಿರುವ ಪಾಲಿಕೆಯು, ಕೊರೊನಾ ಸೋಂಕಿನಿಂದ ಮೃತಪಡುವವರ ಶವ ಸಂಸ್ಕಾರಕ್ಕೆೆ ಯಾವುದೇ ಶುಲ್ಕ ನಿಗದಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಪ್ರತಿ ದಿನ ವರದಿ:ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಈ ಚಿತಾಗಾರಗಳು ಕಾರ್ಯನಿರ್ವಹಿಸುತ್ತವೆ. ಸೂಪರಿಂಟೆಂಡಿಂಗ್ ಎಂಜಿನಿಯರ್‌ ಪ್ರತಿದಿನ ಈ ಕುರಿತು ವರದಿ ನೀಡಬೇಕು. ಸಂಬಂಧಪಟ್ಟ ವಲಯ ಆರೋಗ್ಯಾಧಿಕಾರಿ ವಿದ್ಯುತ್ ಚಿತಾಗಾರ ಸಿಬ್ಬಂದಿಗೆ ಅವಶ್ಯವಿರುವ ಎಲ್ಲ ಸುರಕ್ಷತಾ ಪರಿಕರಗಳನ್ನು ನೀಡಬೇಕು ಹಾಗೂ ಸ್ಯಾನಿಟೈಸ್ ವ್ಯವಸ್ಥೆೆ ಕಲ್ಪಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.

260 ಆಂಬುಲೆನ್ಸ್‌:ಕೋವಿಡ್ ಸೋಂಕಿತರನ್ನು ಆಸ್ಪತ್ರೆೆಗೆ ಕರೆದುಕೊಂಡು ಹೋಗಲು 198 ವಾರ್ಡ್‌ಗಳಿಗೆ 260 ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸೋಂಕಿತರನ್ನು ಅವರ ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ ಕರೆದುಕೊಂಡು ಹೋಗಲಾಗುತ್ತಿದೆ. ಆಂಬುಲೆನ್ಸ್‌ಗಳಿಗೂ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜಯೇಂದ್ರ ತಿಳಿಸಿದ್ದಾರೆ.

ಹೊರಗುತ್ತಿಗೆ ಆಧಾರದ ಮೇಲೆ ಈ ಆಂಬುಲೆನ್ಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಕೋವಿಡ್‌ ಶವಗಳನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಸಾಗಿಸಲು 49 ಶವ ಸಾಗಣೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ವ್ಯವಸ್ಥೆಯೂ ಉಚಿತವಾಗಿದ್ದು ಯಾವುದೇ ಹಣ ನೀಡಬಾರದು ಎಂದೂ ಅವರು ಹೇಳಿದ್ದಾರೆ.

ವೇತನ ಬಿಡುಗಡೆಗೆ ಸೂಚನೆ

ಬಿಬಿಎಂಪಿಯ ಎಲ್ಲ ವಿದ್ಯುತ್‌ ಚಿತಾಗಾರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಲಯ ಮಟ್ಟದಲ್ಲಿ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸೂಚನೆ ನೀಡಿದ್ದಾರೆ.

‘ವೇತನ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ವೇತನ ಬಿಡುಗಡೆಯಾಗದಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

‘ಚಿತಾಗಾರಗಳಲ್ಲಿ ಕೋವಿಡ್‌ ಶವಸಂಸ್ಕಾರದ ವೇಳೆ ಎಲ್ಲ ಅಗತ್ಯ ಸುರಕ್ಷತಾ ಕ್ರಮ ಅನುಸರಿಸಬೇಕು. ಇದರಲ್ಲಿ ಲೋಪವಾದರೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ಚಿತಾಗಾರದ ಸಿಬ್ಬಂದಿಗೆ 10 ತಿಂಗಳಿನಿಂದ ವೇತನ ಪಾವತಿಯಾಗದಿರುವ ಬಗ್ಗೆ ಮತ್ತು ಕೋವಿಡ್‌ ಶವಸಂಸ್ಕಾರಕ್ಕಾಗಿ ತಾಸುಗಟ್ಟಲೇ ಕಾಯಬೇಕಾಗಿರುವ ಬಗ್ಗೆ ‘ಪ್ರಜಾವಾಣಿ’ಯು ಗುರುವಾರ ವಿಶೇಷ ವರದಿ ಪ್ರಕಟಿಸಿತ್ತು.

ಎಲ್ಲೆಲ್ಲಿ ಕೋವಿಡ್ ಶವಸಂಸ್ಕಾರ ?

ವಿದ್ಯುತ್ ಚಿತಾಗಾರ; ವಲಯ

ಕೂಡ್ಲು; ಬೊಮ್ಮನಹಳ್ಳಿ
ಪಣತ್ತೂರು; ಮಹದೇವಪುರ
ಮೇಡಿ ಅಗ್ರಹಾರ; ಯಲಹಂಕ
ಕೆಂಗೇರಿ; ಆರ್.ಆರ್. ನಗರ
ಬನಶಂಕರಿ; ದಕ್ಷಿಣ
ಪೀಣ್ಯ ದಾಸರಹಳ್ಳಿ;ಆರ್.ಆರ್. ನಗರ
ಸುಮನಹಳ್ಳಿ; ಆರ್.ಆರ್. ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.