ADVERTISEMENT

ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ಆಮೆಗತಿ

ಪಾಲಿಕೆಗೆ ಹೊಸ ಗ್ರಾಮಗಳ ಸೇರ್ಪಡೆ: 11 ತಿಂಗಳಲ್ಲಿ ಒಮ್ಮೆ ಮಾತ್ರ ಸಭೆ ನಡೆಸಿರುವ ಸಮಿತಿ

ಪ್ರವೀಣ ಕುಮಾರ್ ಪಿ.ವಿ.
Published 13 ಸೆಪ್ಟೆಂಬರ್ 2021, 21:23 IST
Last Updated 13 ಸೆಪ್ಟೆಂಬರ್ 2021, 21:23 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಗಡಿ ಪ್ರದೇಶದ ಹೊಸ ಗ್ರಾಮಗಳನ್ನು ಸೇರ್ಪಡೆ ಮಾಡಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಯಾವೆಲ್ಲ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಬೇಕು ಎಂದು ಶಿಫಾರಸು ಮಾಡಲು ಸರ್ಕಾರ ಅಧಿಕಾರಿಗಳ ಸಮಿತಿಯನ್ನು ರಚಿಸಿದೆ. ಈ ಸಮಿತಿ ರಚನೆಯಾಗಿ 11 ತಿಂಗಳಾಗಿದ್ದು, ಇದುವರೆಗೆ ಒಮ್ಮೆ ಮಾತ್ರ ಸಭೆ ನಡೆಸಿದೆ.

ಬಿಬಿಎಂಪಿ ವ್ಯಾಪ್ತಿಯನ್ನು ಈಗಿರುವಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು ಮಾತ್ರ 198ರಿಂದ 243ಕ್ಕೆ ಹೆಚ್ಚಿಸಲು ಸರ್ಕಾರ ಆರಂಭದಲ್ಲಿ ಚಿಂತನೆ ನಡೆಸಿತ್ತು. ಬಳಿಕ ಗಡಿ ಪ್ರದೇಶದಲ್ಲಿ 1 ಕಿ.ಮೀ ವ್ಯಾಪ್ತಿಯ ಗ್ರಾಮಗಳನ್ನು ತೆಕ್ಕೆಗೆ ಸೇರಿಸಿಕೊಂಡು ಬಿಬಿಎಂಪಿಯ ಪರಿಧಿ ವಿಸ್ತರಿಸುವ ನಿರ್ಧಾರ ಕೈಗೊಂಡಿತು. ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆಯು 2020ರ ಅ. 14ರಂದು ಅಧಿಸೂಚನೆಯನ್ನೂ ಹೊರಡಿಸಿತ್ತು. ಹೊಸದಾಗಿ ಸೇರ್ಪಡೆ ಮಾಡಬೇಕಾದ ಗ್ರಾಮಗಳ ಬಗ್ಗೆ ಶಿಫಾರಸು ಮಾಡಲು ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅದೇ ದಿನ ಸಮಿತಿ ರಚಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು, ಬಿಬಿಎಂಪಿಯ ವಿಶೇಷ ಆಯುಕ್ತರು (ಕಂದಾಯ) ಸದಸ್ಯರಾಗಿದ್ದಾರೆ.

ಆ ಬಳಿಕ 2020ರ ಬಿಬಿಎಂಪಿ ಕಾಯ್ದೆಯಲ್ಲೂ ಪಾಲಿಕೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 243ಕ್ಕೆ ನಿಗದಿಪಡಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್‌ 365 ಪಂಚಾಯಿತಿ ಪ್ರದೇಶಗಳನ್ನು ಪಾಲಿಕೆಗೆ ಸೇರ್ಪಡೆಗೊಳಿಸುವ ಬಗ್ಗೆ ವಿವರಿಸುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ 1993ರನ್ವಯ ಆಡಳಿತ ವ್ಯವಸ್ಥೆ ಹೊಂದಿರುವ ಪ್ರದೇಶಗಳನ್ನು ಸರ್ಕಾರವು ಬಿಬಿಎಂಪಿ ಕಾಯ್ದೆಯ ಸೆಕ್ಷನ್ 4ಎ ಉಪವಿಧಿ 1ರಡಿ ಅಧಿಸೂಚನೆ ಹೊರಡಿಸಿ ಪಾಲಿಕೆಗೆ ಸೇರ್ಪಡೆಗೊಳಿಸಬಹುದು.

ADVERTISEMENT

ಬಿಬಿಎಂಪಿ ಕಾಯ್ದೆ ಜಾರಿಗೆ ಅಧಿಸೂಚನೆ ಹೊರಡಿಸಿ ಎಂಟು ತಿಂಗಳುಗಳು ಉರುಳಿವೆ. ಈ ಕಾಯ್ದೆ ಜಾರಿಯಾದ ಬಳಿಕವೂ ಗ್ರಾ‌ಮಗಳ ಸೇರ್ಪಡೆ ಕುರಿತು ಶಿಫಾರಸು ಮಾಡಲು ಹಳೆ ಸಮಿತಿಯನ್ನೇ ಉಳಿಸಿಕೊಳ್ಳಲಾಗಿದೆ. ಹೊಸ ಗ್ರಾಮಗಳ ಸೇರ್ಪಡೆ ಪ್ರಕ್ರಿಯೆಯಲ್ಲಿ ಯಾವುದೇ ಮಹತ್ತರ ಪ್ರಗತಿ ಆಗಿಲ್ಲ.ಈ ಸಲುವಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ 2021ರ ಜುಲೈನಲ್ಲಿ ಒಮ್ಮೆ ಸಭೆ ಸೇರಿತ್ತು.

‘ಗ್ರಾಮಗಳನ್ನು ಬಿಬಿಎಂಪಿಗೆ ಸೇರ್ಪಡೆಗೊಳಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆಗೆ ನೇರವಾಗಿ ಮನವಿಗಳು ಸಲ್ಲಿಕೆ ಆಗಿವೆ. ಕೆಲವು ಮನವಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಿವೆ. ಇವುಗಳಲ್ಲಿ ಬಿಬಿಎಂಪಿ ಗಡಿಯ 1 ಕಿ.ಮೀ ವ್ಯಾಪ್ತಿಯಲ್ಲಿ ಯಾವೆಲ್ಲ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಆಳವಾಗಿ ಚರ್ಚೆ ನಡೆಸಬೇಕಿದೆ’ ಎಂದು ಸಮಿತಿಯ ಮೂಲಗಳು ತಿಳಿಸಿವೆ.

‘ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ವಿಸ್ತರಿಸುವ ಬಗ್ಗೆ ಸಮಿತಿ ಒಂದು ಬಾರಿ ಸಭೆ ನಡೆಸಿ ಚರ್ಚಿಸಿದೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸುವ ಬಗ್ಗೆ ಈ ವಾರ ಮತ್ತೆ ಸಭೆ ಕರೆಯಲಿದ್ದೇವೆ’ ಎಂದು ಸಮಿತಿಯ ಅಧ್ಯಕ್ಷ ಗೌರವ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.

ವಾರ್ಡ್‌ಗಳ ಗಡಿ ಮತ್ತೆ ಮಾರ್ಪಾಡು

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಳವಾದ ಬಳಿಕ ಬಹುತೇಕ ಎಲ್ಲ ವಾರ್ಡ್‌ಗಳ ಗಡಿಗಳು ಮತ್ತೆ ಬದಲಾಗಲಿವೆ.

2020ರಲ್ಲಿ ಸರಾಸರಿ 42,645 ಜನಸಂಖ್ಯೆಯ ಆಧಾರದಲ್ಲಿ 198 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಲಾಗಿತ್ತು. ಈಗ ವಾರ್ಡ್‌ಗಳ ಸಂಖ್ಯೆ 243ಕ್ಕೆ ಹೆಚ್ಚಳವಾದ ಬಳಿಕ ವಾರ್ಡ್‌ವಾರು ಸರಾಸರಿ ಜನಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ. ವಾರ್ಡ್‌ಗಳ ಸರಾಸರಿ ಜನಸಂಖ್ಯೆ 35 ಸಾವಿರ ಮೀರಬಾರದು ಎಂಬ ಮಾನದಂಡ ಇಟ್ಟುಕೊಂಡು ಮರುವಿಂಗಡಣೆ ನಡೆಸಲು ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.

‘ಹೊಸ ಗ್ರಾಮಗಳ ಸೇರ್ಪಡೆಯಾದ ಬಳಿಕ ಬಿಬಿಎಂಪಿ ವ್ಯಾಪ್ತಿಯಲ್ಲಿ 2021ರ ಒಟ್ಟು ಅಂದಾಜು ಜನಸಂಖ್ಯೆಯ ಆಧಾರದಲ್ಲಿ ವಾರ್ಡ್‌ವಾರು ಜನಸಂಖ್ಯೆಯ ಸರಾಸರಿಯನ್ನು ನಿರ್ಧರಿಸಿ ಅದರ ಆಧಾರದಲ್ಲಿ ವಾರ್ಡ್‌ಗಳ ಮರುವಿಂಗಡಣೆ ನಡೆಸಲಾಗುತ್ತದೆ’ ಎಂದು ಸಮಿತಿಯ ಸದಸ್ಯರಾಗಿರುವ ಬಿಬಿಎಂಪಿ ವಿಶೇಷ ಆಯುಕ್ತ ಎಸ್‌.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.


ವರ್ಷದ ಹಿಂದಷ್ಟೇ ನಡೆದಿತ್ತು ಮರುವಿಂಗಡಣೆ

2011ರ ಜನಗಣತಿ ಆಧಾರದಲ್ಲಿ ಬಿಬಿಎಂಪಿ ವಾರ್ಡ್‌ಗಳ ವಾರ್ಡ್‌ ಮರುವಿಂಗಡಣೆ ನಡೆಸಲು ಸರ್ಕಾರ 2020ರ ಮಾರ್ಚ್‌ 2ರಂದು ಕರಡು ಅಧಿಸೂಚನೆ ಪ್ರಕಟಿಸಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಆಹ್ವಾನಿಸಿದ ಬಳಿಕ 2020ರ ಜೂನ್‌ 23ರಂದು ರಾಜ್ಯಪತ್ರದಲ್ಲಿ ಅಂತಿಮ ಅಧಿಸೂಚನೆಯನ್ನೂ ಪ್ರಕಟಿಸಲಾಗಿತ್ತು. ಮರುವಿಂಗಡಣೆಗೊಂಡ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಪರಿಷ್ಕರಿಸಲಾಗಿತ್ತು. ವಾರ್ಡ್‌ಗಳ ಮರುವಿಂಗಡಣೆಯಾಗಿ ವರ್ಷ ಕಳೆಯುವಷ್ಟರಲ್ಲೇ ಬಿಬಿಎಂಪಿಯ ವಾರ್ಡ್‌ಗಳನ್ನು ಮತ್ತೆ ಮರುವಿಂಗಡಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ಅಧಿಕಾರಿಗಳು ನಡೆಸಿದ ಅಷ್ಟೂ ಕಸರತ್ತು ವ್ಯರ್ಥವಾಗಿದೆ.

ಸೇರ್ಪಡೆಗೆ ಮುನ್ನವೇ ಕಾಣಿಸಿತು ಫಲಕ

ಯಲಹಂಕ ವಲಯದ ಗಡಿ ಪ್ರದೇಶದ ಕೆಲವು ಗ್ರಾಮಗಳನ್ನು ಬಿಬಿಎಂಪಿಗೆ ಸೇರ್ಪಡೆಗೊಳಿಸಬೇಕು ಎಂಬ ಪ್ರಸ್ತಾವಗಳಿವೆ. ಇವುಗಳ ಸೇರ್ಪಡೆ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳುವ ಮುನ್ನವೇ ಕೆಲವು ಗ್ರಾಮಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶ ಎಂದು ಬಿಂಬಿಸುವ ಫಲಕಗಳು ಕಾಣಿಸಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.