ADVERTISEMENT

ಪೊಲೀಸರ ಕರೆಗೂ ಸ್ಪಂದಿಸದ ಬಿಬಿಎಂಪಿ...

ಕೆ.ಆರ್. ಪುರದಲ್ಲಿ ಅಗೆದ ಗುಂಡಿ ಮುಚ್ಚಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:47 IST
Last Updated 24 ನವೆಂಬರ್ 2022, 19:47 IST
ಕೆ.ಆರ್‌. ಪುರ ಸಂಚಾರ ಪೊಲೀಸರ ಟ್ವೀಟ್‌
ಕೆ.ಆರ್‌. ಪುರ ಸಂಚಾರ ಪೊಲೀಸರ ಟ್ವೀಟ್‌   

ಬೆಂಗಳೂರು: ‘ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದೆ... ಇದನ್ನು ಸರಿಪಡಿಸಿ’ ಎಂದು ಸಂಚಾರ ಪೊಲೀಸರು ಬಿಬಿಎಂಪಿ ಅಧಿಕಾರಿಗಳು, ಎಂಜಿನಿಯರ್‌ಗಳಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಕೊನೆಗೆ ಪೊಲೀಸರೇ ಬೃಹತ್‌ ಗುಂಡಿಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

ಕೆ.ಆರ್‌. ಪುರದಲ್ಲಿ ಹೂಡಿ ಅಯ್ಯಪ್ಪನಗರ ಮುಖ್ಯರಸ್ತೆಯಲ್ಲಿ ದೊಡ್ಡ ಗುಂಡಿಯನ್ನು ತೆಗೆದು, ಮುಚ್ಚದೆ ಬಿಡಲಾಗಿತ್ತು. ಇದರಿಂದ ಗುರುವಾರ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಪೊಲೀಸರು ಮಹದೇವಪುರ ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ ಸೇರಿ ಎಲ್ಲರನ್ನೂ ಸಂಪರ್ಕಿಸಲು ಪ್ರಯತ್ನಿಸಿದರು. ಯಾರೂ ಸಿಕ್ಕಿಲ್ಲ. ಹೀಗಾಗಿ ಸಂಚಾರಕ್ಕೆ ಅನುವಾಗಲು ಜೆಸಿಬಿ ತರಿಸಿ ಗುಂಡಿ ಮುಚ್ಚಿದ್ದಾರೆ.

‘ಬಿಬಿಎಂಪಿಯಿಂದ ಯಾರೊಬ್ಬರೂ ನಮ್ಮ ಕರೆಗೆ ಸ್ಪಂದಿಸುತ್ತಿಲ್ಲ. ದಯವಿಟ್ಟು ಯಾರನ್ನಾದರೂ ಈ ದೊಡ್ಡ ಗುಂಡಿಯನ್ನು ಮುಚ್ಚಲು ಕಳುಹಿಸಿ’ ಎಂದು ಕೆ.ಆರ್‌. ಪುರ ಸಂಚಾರ ಪೊಲೀಸರು ಬಿಬಿಎಂಪಿ ಆಯುಕ್ತರನ್ನು ಟ್ಯಾಗ್‌ ಮಾಡಿ ಗುರುವಾರ ಬೆಳಿಗ್ಗೆ 10.02ಕ್ಕೆ ಟ್ವೀಟ್‌ ಮಾಡಿದರು.

ADVERTISEMENT

‘ನಾವೇ ಹೇಗೋ ತಾತ್ಕಾಲಿಕವಾಗಿ ಗುಂಡಿಯನ್ನು ಮುಚ್ಚಿದ್ದೇವೆ. ಇದನ್ನು ಪೂರ್ಣವಾಗಿ ಹಾಗೂ ಶಾಶ್ವತವಾಗಿ ಮುಚ್ಚಲು ಕಾಂಕ್ರೀಟ್‌ ಹಾಕಬೇಕಿದೆ’ ಎಂದು 10.54ಕ್ಕೆ ಸಂಚಾರ ಪೊಲೀಸರು ಮತ್ತೆ ಟ್ವೀಟ್‌ ಮಾಡಿದರು. ಇದು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಹರಿದಾಡಿದೆ.

ನಗರದಲ್ಲಿ ರಸ್ತೆ ಸಂಚಾರ ಹಾಗೂ ಸಮಸ್ಯೆಗಳ ನಿವಾರಣೆಗೆ ಎಲ್ಲ ಇಲಾಖೆಗಳು ಸಮನ್ವಯ ಸಾಧಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರಿಂದ ಮುಖ್ಯ ಕಾರ್ಯದರ್ಶಿಯವರೂ ಸೂಚನೆ ನೀಡಿದ್ದಾರೆ. ಆದರೂ ಪೊಲೀಸರ ಕರೆಗೂ ಬಿಬಿಎಂಪಿ ಓಗೊಟ್ಟಿಲ್ಲ.

‘ಗುರುವಾರ ಮಧ್ಯಾಹ್ನ ರಸ್ತೆಯನ್ನು ಅನಧಿಕೃತವಾಗಿ ಅಗೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಒಎಫ್‌ಸಿ ಹಾಕಲು ಕೆಲವೆಡೆ ಅಗೆದಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮುಖ್ಯ ಎಂಜಿನಿಯರ್‌ಗೆ ಸೂಚಿಸಲಾಗಿದೆ’ ಎಂದುಮಹದೇವಪುರ ವಲಯದ ವಿಶೇಷ ಆಯುಕ್ತ ಡಾ. ತ್ರಿಲೋಕ್‌ ಚಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.