ADVERTISEMENT

ಬಿಬಿಎಂಪಿ ವಾರ್ಡ್‌ ಮೀಸಲಾತಿ: ಬಿಜೆಪಿಯಿಂದಲೇ ಆಕ್ರೋಶ

ಬೇಕಾಬಿಟ್ಟಿ ಪ್ರಕಟ– ಪ್ರತಿಪಕ್ಷಗಳ ಆರೋಪ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 20:45 IST
Last Updated 4 ಆಗಸ್ಟ್ 2022, 20:45 IST
   

ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿಯನ್ನು ಬುಧವಾರ ರಾತ್ರಿ ಸರ್ಕಾರ ಪ್ರಕಟಿಸಿದ್ದು, ಪ್ರತಿಪಕ್ಷಗಳವರಷ್ಟೆ ಅಲ್ಲದೆ ಬಿಜೆಪಿಯ ಮುಖಂಡರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚುನಾವಣೆ ನಡೆಸಲು ಸರ್ಕಾರಕ್ಕೆ ಇಷ್ಟ ಇಲ್ಲ. ಅದಕ್ಕಾಗಿಯೇ ಬೇಕಾಬಿಟ್ಟಿ ಮೀಸಲಾತಿಯನ್ನು ಪ್ರಕಟಿಸಿದೆ’ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಟೀಕಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳೂ ಧ್ವನಿಗೂಡಿಸಿದ್ದಾರೆ.

‘ಬಿಜೆಪಿಯ ಮಾಜಿ ಕಾರ್ಪೊರೇಟರ್‌ಗಳು ಹಾಗೂ ಮುಖಂಡರಿಗೆ ಅನುಕೂಲವಾಗದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಲಾಗಿದೆ. ಕೆಲವು ಶಾಸಕರು ಮೂರ್ನಾಲ್ಕು ಬಾರಿ ಕಾರ್ಪೊರೇಟರ್‌ ಆದವರಿಗೆ ಮೀಸಲಾತಿ ವಿರುದ್ಧವಾಗಿರುವಂತೆ ನೋಡಿಕೊಂಡಿದ್ದಾರೆ. ಹೀಗೆ ಅವರು ಮುಂದೆ ಕ್ಷೇತ್ರದಲ್ಲಿ ತಮಗೇ ಎದುರಾಳಿ ಆಗದಂತೆ ತಡೆಯುವಲ್ಲಿ ಯಶ ಸಾಧಿಸಿದ್ದಾರೆ’ ಎಂದು ಬಿಜೆಪಿ ಮಾಜಿ ಕಾರ್ಪೊರೇಟರ್‌ಗಳು ದೂರಿದರು.

ADVERTISEMENT

‘ಪಕ್ಷಕ್ಕೆ, ಬಿಜೆಪಿ ಮುಖಂಡರಿಗೆ ಅನುಕೂಲವಾಗುವಂತೆ ಅವರಿಗೆ ಬೇಕಾದಂತೆ ಮೀಸಲಾತಿ ಮಾಡಿಕೊಂಡಿ
ದ್ದಾರೆ. ಈ ಹಿಂದೆಯೂ ವಾರ್ಡ್‌ ಪುನರ್‌ವಿಂಗಡಣೆಯನ್ನೂ ಇದೇ ರೀತಿ ಮಾಡಿಕೊಂಡಿದ್ದರು. ಮೀಸಲಾತಿಯನ್ನು ಯಾವ ರೀತಿ ಮಾಡಿದ್ದಾರೆ ಎಂದು ಹೇಳಿಲ್ಲ. ಯಾವ ಮಾರ್ಗಸೂಚಿ ಅನುಸರಿಸಲಾಗಿದೆ ಎಂಬುದನ್ನೂ ಬಹಿರಂಗಪಡಿಸಿಲ್ಲ’ ಎಂದು ಶಾಸಕ ರಾಮಲಿಂಗಾರೆಡ್ಡಿ ಟೀಕಿಸಿದರು.

‘ಈಜಿಪುರ ವಾರ್ಡ್‌ನಲ್ಲಿ ಪರಿಶಿಷ್ಟ ವರ್ಗದವರು ಹೆಚ್ಚಿದ್ದಾರೆ. ಆದರೆ ಅದನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ನಮ್ಮ ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ 9 ವಾರ್ಡ್‌ಗಳಲ್ಲಿ 8 ಅನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಜಯನಗರ ಕ್ಷೇತ್ರದಲ್ಲಿ 6 ವಾರ್ಡ್‌ಗಳಲ್ಲಿ 5 ಮಹಿಳಾ ಮೀಸಲು ವಾರ್ಡ್‌ಗಳು. ಹೀಗೆ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಬೇಕಾಬಿಟ್ಟಿ ಮೀಸಲಾತಿ ಮಾಡಿದ್ದಾರೆ’ ಎಂದರು.

‘ಸರ್ಕಾರಕ್ಕೆ ಯಾವುದರಲ್ಲೂ ನೀತಿ, ನಿಯಮ ಎಂಬುದೇ ಇಲ್ಲ. ಮನಸೋಇಚ್ಛೆ ಮೀಸಲಾತಿ ಮಾಡಿ
ಕೊಂಡಿದ್ದಾರೆ. ದುಡ್ಡಿದೆ ಎಂಬ ಅಹಂನಿಂದ ಎಲ್ಲವನ್ನೂ ಮಾಡುತ್ತಿದ್ದಾರೆ. ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ವಿಜಯನಗರದ ಶಾಸಕ ಎಂ. ಕೃಷ್ಣಪ್ಪ ಪ್ರತಿಕ್ರಿಯಿಸಿದರು.

ಮುಸ್ಲಿಮರಿಗೆ ಅಡ್ಡಿ: ‘ಮುಸ್ಲಿಮರು ಹೆಚ್ಚಿರುವ ಶಿವಾಜಿನಗರ, ಪುಲಕೇಶಿನಗರ ಮತ್ತು ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಅನುಕೂಲವಾಗದ ಮೀಸಲಾತಿಯನ್ನು ನಿಗದಿಮಾಡಲಾಗಿದೆ. ಹಿಂದುಳಿದ ವರ್ಗ–ಎ ಮೀಸಲಾತಿಯನ್ನು ಬಿಜೆಪಿ ಶಾಸಕರಿರುವ ಕ್ಷೇತ್ರಗಳ ವಾರ್ಡ್‌ಗಳಿಗೆ ನೀಡಲಾಗಿದೆ. ಆ ವಾರ್ಡ್‌ಗಳಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇದೆ’ ಎಂದು ಕಾಂಗ್ರೆಸ್‌ ಮುಖಂಡರು ದೂರಿದರು.

‘ಗಂಗಾನಗರ, ಎಸ್‌.ಕೆ. ಗಾರ್ಡನ್‌, ಸಗಾಯಪುರ, ಪುಲಕೇಶಿನಗರ, ಕಾಡುಗೊಂಡನಹಳ್ಳಿ, ವೆಂಕಟೇಶಪುರ, ಲಿಂಗರಾಜನಗರ, ಮಾರುತಿ ಸೇವಾ ನಗರ, ರಾಮಸ್ವಾಮಿ ಪಾಳ್ಯ, ಭಾರತಿನಗರ, ಹಲಸೂರು, ಚಲವಾದಿ ಪಾಳ್ಯ, ಜಗಜೀವನರಾಮ್‌ ನಗರ, ಆಜಾದ್‌ನಗರ, ದೊಮ್ಮಲೂರು ಮತ್ತು ವನ್ನಾರ್‌ ಪೇಟೆ ವಾರ್ಡ್‌ಗಳಲ್ಲಿ ಮುಸ್ಲಿಮರು ಸ್ಪರ್ಧಿಸಲು ಸಾಧ್ಯವಾಗದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಯನ್ನು ನಿಗದಿಪಡಿಸಿದ್ದಾರೆ’ ಎಂದು ಆರೋಪಿಸಿದರು.

122 ಮಹಿಳೆಯರು

ಮಹಿಳೆಯರಿಗೆ ಶೇ 50 ಮೀಸಲಾತಿಯನ್ನು ಪಾಲಿಸಲಾಗಿದ್ದು, 243 ವಾರ್ಡ್‌ಗಳಲ್ಲಿ ಎಲ್ಲ ಮೀಸಲಾತಿ ಸೇರಿ ಒಟ್ಟು 122 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದೆ. 130 ವಾರ್ಡ್‌ಗಳು ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಹಿಂದುಳಿದ ವರ್ಗ ’ಎ‘ ಮೀಸಲಾತಿಯಲ್ಲಿ ಒಟ್ಟಾರೆ 55 ವಾರ್ಡ್‌ಗಳಿದ್ದು, ಇದರಲ್ಲಿ 32 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿದೆ. 16 ವಾರ್ಡ್‌ಗಳಲ್ಲಿ ಹಿಂದುಳಿದ ವರ್ಗ ’ಬಿ‘ಗೆ ಮೀಸಲಾಗಿದ್ದು, ಇದರಲ್ಲಿ ಮಹಿಳೆಯರಿಗೆ 9 ವಾರ್ಡ್‌ಗಳಿವೆ. ಪರಿಶಿಷ್ಟ ಜಾತಿಗೆ 28 ವಾರ್ಡ್‌ಗಳು ಮೀಸಲಾಗಿದ್ದು, ಅದರಲ್ಲಿ ಮಹಿಳೆಯರಿಗೆ 14 ವಾರ್ಡ್‌ಗಳಿವೆ. ಪರಿಶಿಷ್ಟ ಪಂಗಡಕ್ಕೆ 4 ವಾರ್ಡ್‌ಗಳಿದ್ದು, ಅದರಲ್ಲಿ ಮಹಿಳೆಯರಿಗೆ 2 ವಾರ್ಡ್‌ಗಳನ್ನು ಮೀಸಲಿಡಲಾಗಿದೆ.

‘ನಾವೇಕೆ ಬೇಡ?’

‘ಪಕ್ಷಕ್ಕಾಗಿ ನಾವು 20–30 ವರ್ಷ ದುಡಿದಿದ್ದೇವೆ. ಈಗಲೂ ನಾವು ಪಕ್ಷನಿಷ್ಠರೇ. ನಮ್ಮದೇ ಪಕ್ಷ ಅಧಿಕಾರದಲ್ಲಿದೆ, ನಾವೇ ಬಿಬಿಎಂಪಿಯಲ್ಲೂ ಅಧಿಕಾರಕ್ಕೆ ಬರುತ್ತೇವೆ. ಆದರೆ ಪಕ್ಷಕ್ಕೆ ನಾವು ಮಾತ್ರ ಬೇಡ. ಅದಕ್ಕಾಗಿಯೇ ಎರಡು–ಮೂರು ಬಾರಿ ನಾವು ಗೆದ್ದಿರುವ ವಾರ್ಡ್‌ಗಳಲ್ಲಿ ನಮಗೆ ಸ್ಪರ್ಧೆಗೆ ಅವಕಾಶ ಇಲ್ಲದಂತೆ ಮೀಸಲಾತಿ ನಿಗದಿಮಾಡಿದ್ದಾರೆ’ ಎಂಬುದು ಬಿಜೆಪಿಯ ಮಾಜಿ ಕಾರ್ಪೊರೇಟರ್‌ ಗಳ ಅಸಮಾಧಾನ.

‘ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಧಿಕಾರದಲ್ಲಿದ್ದಾಗಲೂ ನಮಗೆ ಅನ್ಯಾಯ ಆಗಿರಲಿಲ್ಲ. ನಮ್ಮ ವಾರ್ಡ್‌ಗಳಲ್ಲಿ ನಮಗೆ ಮೀಸಲಾತಿ ಇತ್ತು. ಆದರೆ, ನಮ್ಮ ಸರ್ಕಾರವೇ ನಮ್ಮನ್ನು ಕಡೆಗಣಿಸಿದೆ. 55 ವರ್ಷವಾದವರು ಸ್ಪರ್ಧಿಸಬಾರದು ಎಂದೂ ಹೇಳಲಾಗುತ್ತಿದೆ. ನಾವು ಶಾಸಕ ಸ್ಥಾನಕ್ಕೂ ಸ್ಪರ್ಧಿಸಲು ಅವಕಾಶ ನೀಡಲ್ಲ, ಪಾಲಿಕೆಯಿಂದಲೂ ನಮ್ಮನ್ನು ದೂರ ಮಾಡಲಾಗುತ್ತಿದೆ. ಪಕ್ಷಕ್ಕೆ ನಾವೇಕೆ ಬೇಡ ಎಂಬುದು ನಮಗೆ ಅರ್ಥವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿಯಹಲವು ಮುಖಂಡರು ಹೇಳಿದರು.

‘ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಎಲ್ಲಿ ಏನು ಮಾಡಿದರೂ ಯಾರಿಗಾದರೂ ತೊಂದರೆ ಆಗುತ್ತದೆ. ಕಾನೂನು ಪ್ರಕಾರವೇ ಮಾಡಬೇಕಾಗುತ್ತದೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹೇಳಿದರು.

‘ಎಲ್ಲ ಕಾರ್ಯಕರ್ತರು, ಹಿಂದಿನ ಕಾರ್ಪೊರೇಟರ್‌ಗಳಿಗೆ ಸ್ಪರ್ಧಿಸಲು ಆಸೆ ಇರುತ್ತದೆ. ಆದರೆ ಎಲ್ಲರಿಗೂ ಅವಕಾಶ ಮಾಡಿಕೊಡಲು ಸಾಧ್ಯವಾಗುವುದಿಲ್ಲ. ಪಕ್ಷಕ್ಕಾಗಿ ಎಲ್ಲರೂ ದುಡಿಯಬೇಕು. ಮುಂದೆ ಅದಕ್ಕೆ ಫಲ ಸಿಕ್ಕೇ ಸಿಗುತ್ತದೆ’ ಎಂದು ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.