ADVERTISEMENT

ಬಿಬಿಎಂಪಿ ಚುನಾವಣೆಗೆ ಐಕ್ಯರಂಗ ಒಕ್ಕೂಟದಿಂದ ಸ್ಪರ್ಧೆ: ಮಹಿಮ.ಜೆ.ಪಟೇಲ್

ಕೆಆರ್‌ಎಸ್, ಜೆಡಿಯು ಮತ್ತು ಡಬ್ಲ್ಯುಪಿಐ ಪಕ್ಷಗಳ ಮೈತ್ರಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 20:02 IST
Last Updated 9 ಜೂನ್ 2022, 20:02 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ, ಸಂಯುಕ್ತ ಜನತಾದಳ ಮತ್ತು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲ್ಯುಪಿಐ) ಪಕ್ಷಗಳು ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸೇರಿದಂತೆ 2023ರ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿಕೂಟದ ಮೂಲಕ ಸ್ಪರ್ಧಿಸಲಿವೆ ಎಂದು ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಮಹಿಮ.ಜೆ.ಪಟೇಲ್ ತಿಳಿಸಿದರು.

ಕಳೆದ ಎರೆಡು ದಶಕಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಅನೀತಿ ರಾಜಕಾರಣ, ಭ್ರಷ್ಟಾಚಾರ ಮತ್ತು ಅಕ್ರಮ ನೇಮಕಾತಿಗಳಿಂದ ಜನ ಬೇಸತ್ತಿದ್ದಾರೆ. ಈ ಕೊಳೆತ ವ್ಯವಸ್ಥೆ ಸುಧಾರಿಸಲು ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆಆರ್‌ಎಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಮಾತನಾಡಿ, ಜೆಡಿಎಸ್, ಕಾಂಗ್ರೆಸ್‌ ಮತ್ತು ಬಿಜೆಪಿಯ ಅನೀತಿ ರಾಜಕಾರಣ, ಭ್ರಷ್ಟಾಚಾರ ದುರಾಡಳಿತದಿಂದಾಗಿ ರಾಜ್ಯ ರಾಜಕೀಯವು ಹಿಂದೆಂದೂ ಕಾಣದ ಅಧೋಗತಿಗೆ ತಲುಪಿದೆ ಎಂದು ಆರೋಪಿಸಿದರು.

ADVERTISEMENT

ಮುಂಬರುವ ಬಿಬಿಎಂಪಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಸ್ಥಾನ ಹೊಂದಾಣಿಕೆ, ಜಂಟಿ ಪ್ರಚಾರ ಹಾಗೂ ಕನಿಷ್ಠ ಕಾರ್ಯಕ್ರಮಗಳ ಮೂಲಕ ಮೈತ್ರಿಕೂಟವನ್ನು ಮುನ್ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಭ್ರಷ್ಟ, ಲಂಚಕೋರ ಜನಪ್ರತಿನಿಧಿಗಳ ವಿರುದ್ಧ ರೋಸಿ ಹೋಗಿರುವ ಜನ ಬದಲಾವಣೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮೌಲ್ಯ ಆಧಾರಿತ ರಾಜಕಾರಣ, ಸಾಮಾಜಿಕ ನ್ಯಾಯ ದಕ್ಷ ಆಡಳಿತ ಸಮಾಜವಾದಿ ಆಶಯಗಳನ್ನು ಮುನ್ನೆಲೆಗೆ ತರುವ ಅವಶ್ಯಕತೆ ಇದೆ ಎಂದು ಡಬ್ಲ್ಯುಪಿಐ ರಾಜ್ಯಾಧ್ಯಕ್ಷ ತಾಹೀರ್‌ ಹುಸೇನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.