ADVERTISEMENT

ಜನಸಂಖ್ಯೆ–ಮತದಾರರ ಸಂಖ್ಯೆ ತಾಳೆ ಮಾಡಿ: ಬಿಎಲ್‌ಒಗಳಿಗೆ ಕುಮಾರ ನಾಯಕ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:10 IST
Last Updated 24 ನವೆಂಬರ್ 2020, 21:10 IST
ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ 2021ರ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಜಿ.ಕುಮಾರ ನಾಯಕ್‌ ಮಾತನಾಡಿದರು. ಜೆ.ಮಂಜುನಾಥ್‌ ಮತ್ತು ಇತರ ಅಧಿಕಾರಿಗಳು ಇದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಅಭಿಯಾನ 2021ರ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಜಿ.ಕುಮಾರ ನಾಯಕ್‌ ಮಾತನಾಡಿದರು. ಜೆ.ಮಂಜುನಾಥ್‌ ಮತ್ತು ಇತರ ಅಧಿಕಾರಿಗಳು ಇದ್ದಾರೆ.   

ಬೆಂಗಳೂರು:‌ ‘ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ) ಮತಗಟ್ಟೆ ವ್ಯಾಪ್ತಿಯ ಜನಸಂಖ್ಯೆ ಎಷ್ಟಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಎಷ್ಟು ಮಂದಿ ಇದ್ದಾರೆ ಎಂಬುದನ್ನು ತಾಳೆ ಮಾಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗದೇ ಇರುವವರನ್ನು ಸೇರಿಸಬೇಕು’ ಎಂದು ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆಯ ವೀಕ್ಷಕ (ರೋಲ್‌ ಅಬ್ಸರ್ವರ್‌) ಜಿ.ಕುಮಾರ ನಾಯಕ್ ನಿರ್ದೇಶನ ನೀಡಿದರು.

ಬಿಬಿಎಂಪಿ (ಕೇಂದ್ರ) ವ್ಯಾಪ್ತಿಯ ಮತದಾರರ ಪಟ್ಟಿಯ ‘ವಿಶೇಷ ಪರಿಷ್ಕರಣೆ-2021’ರ ಕುರಿತು ಅವರು ಅಧಿಕಾರಿಗಳು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಮಂಗಳವಾರ ಸಭೆ ನಡೆಸಿದರು.

ಬಿಬಿಎಂಪಿಯ (ಕೇಂದ್ರ) ಜಿಲ್ಲಾ ಹೆಚ್ಚುವರಿ ಚುನಾವಣಾಧಿಕಾರಿ ಜೆ. ಮಂಜುನಾಥ್, ‘ಆಯಾ ವಿಧಾನಸಭಾ ಕ್ಷೇತ್ರದ ಮತದಾರರು– ಜನಸಂಖ್ಯೆ ಅನುಪಾತಕ್ಕೆ ಅನುಗುಣವಾಗಿ ಮತದಾರರ ಸಂಖ್ಯೆ ಹೆಚ್ಚಿಸಲು ಸತತ ನಾಲ್ಕು ಭಾನುವಾರ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಅಧಿಕಾರಿಗಳು ಮನೆ ಮನೆಗೆ ತೆರಳಿ ತಿಳಿವಳಿಕೆ ಮೂಡಿಸಲಿದ್ದಾರೆ. 2021ರ ಜ.1ಕ್ಕೆ 18 ವರ್ಷ ತುಂಬಲಿರುವವರಿಗೆ ನಮೂನೆ-6 ಪಡೆದು ಭಾವಚಿತ್ರದೊಂದಿಗೆ ಶಾಲಾ ಟಿ.ಸಿ., ಅಂಕಪಟ್ಟಿ, ಆಧಾರ್ ಕಾರ್ಡ್, ಪಡಿತರ ಚೀಟಿಗಳ ಪ್ರತಿಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ಕಲ್ಪಿಸಲಾಗಿದೆ’ ಎಂದರು.

ADVERTISEMENT

‘ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಹೆಚ್ಚಳ ಮಾಡಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸರ್ಕಾರೇತರ ಸಂಘಟನೆಗಳ ನೆರವು ಪಡೆದಿದ್ದೇವೆ. ಆಟೊದಲ್ಲಿ ಧ್ವನಿ ವರ್ಧಕಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮನೆಗಳಿಗೆ ಹಾಗೂ ಪಿ.ಜಿಗಳಿಗೆ ಭೇಟಿ ನೀಡಿ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆ ಮನೆಯಿಂದ ಕಸ ಸಂಗ್ರಹಿಸುವ ಆಟೊಗಳಲ್ಲಿ ಧ್ವನಿವರ್ಧಕಗಳ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡಬೇಕು’ ಎಂದು ರೋಲ್‌ ಅಬ್ಸರ್ವರ್‌ ನಿರ್ದೇಶನ ನೀಡಿದರು.

ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳು ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.