ADVERTISEMENT

ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ನಿವೃತ್ತಿಯ ದಿನವೇ ಕಾರಣ ಕೇಳಿ ನೋಟಿಸ್‌

ಸಿದ್ದೇಗೌಡಗೆ ಪ್ರಧಾನ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಿದ್ದಕ್ಕೆ ಆಕ್ಷೇಪ * ನಿವೃತ್ತಿ ಸೌಲಭ್ಯ ತಡೆಹಿಡಿಯಿರಿ– ಬಿಬಿಎಂಪಿಗೆ ನಗರಾಭಿವೃದ್ದಿ ಇಲಾಖೆ ಪತ್ರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 17:54 IST
Last Updated 7 ಜೂನ್ 2021, 17:54 IST
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ   

ಬೆಂಗಳೂರು: ಗಾಂಧಿನಗರ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ವೇಳೆ ನಿಯಮಬಾಹಿರವಾಗಿ ಕಾಮಗಾರಿಗಳಿಗೆ ಅನುಮೋದನೆ ನೀಡಿ ಕರ್ತವ್ಯಲೋಪ ಎಸಗಿದ್ದಕ್ಕೆಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಆಗಿದ್ದ ಕೆ.ಸಿದ್ದೇಗೌಡ ಅವರಿಗೆ ಕಾರಣ ಕೇಳಿ ನಗರಾಭಿವೃದ್ಧಿ ಇಲಾಖೆ ನೋಟಿಸ್‌ ಜಾರಿಮಾಡಿದೆ. ಈ ನೋಟಿಸ್‌ ಜಾರಿಯಾಗಿರುವುದು ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾದ 2021ರ ಮೇ 31ರಂದು!

ಗಾಂಧಿನಗರ ಉಪವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿದ್ದಾಗ ಸಿದ್ದೇಗೌಡ ಅವರು ಕಾಮಗಾರಿಗಳ ಟೆಂಡರ್‌ ಕರೆಯುವಾಗ ಅಕ್ರಮ ನಡೆಸಿದ ಗುರುತರ ಆರೋಪ ಹೊತ್ತಿದ್ದರು. ಗಾಂಧಿನಗರ, ಆರ್‌.ಆರ್‌.ನಗರ ಹಾಗೂ ಮಲ್ಲೇಶ್ವರ ಉಪವಿಭಾಗಗಳಲ್ಲಿ ಅನುಷ್ಠಾನವಾಗಿದ್ದ ಕಾಮಗಾರಿಗಳ ಅಕ್ರಮದ ಬಗ್ಗೆ ತನಿಖೆ ನಡೆಸಿದ್ದ ನ್ಯಾ.ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ತನಿಖಾ ಸಮಿತಿ ವಿಚಾರಣೆಯಲ್ಲೂಅವರು ನಡೆಸಿದ್ದ ಅಕ್ರಮಗಳು ಸಾಬೀತಾಗಿದ್ದವು. ಅವರನ್ನು ತಪ್ಪಿತಸ್ಥರೆಂದು ಗುರುತಿಸಿದ್ದ ಸಮಿತಿಯು ಹಿಂಬಡ್ತಿ ನೀಡುವಂತೆಯೂ ಶಿಫಾರಸು ಮಾಡಿತ್ತು. ಆದರೆ, ಬಿಬಿಎಂಪಿ ಅವರಿಗೆ ಹಿಂಬಡ್ತಿ ನೀಡಿರಲಿಲ್ಲ. ಅದರ ಬದಲು ಪ್ರಧಾನ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ವಿಜಯನಗರದ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್‌.ಅಮರೇಶ್ ಅವರು 2021ರ ಮೇ 17ರಂದು ನಗರಾಭಿವೃದ್ಧಿ ಇಲಾಖೆಗೆ ದೂರು ನೀಡಿದ್ದರು. ಬಳಿಕ ನಗರಾಭಿವೃದ್ಧಿ ಇಲಾಖೆಯು ಅವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿದೆ.

ಸಿದ್ದೇಗೌಡ ಅವರಿಗೆ ಬಡ್ತಿ ನೀಡಿರುವ ಬಗ್ಗೆ ಹಾಗೂ ಅವರ ವಿರುದ್ದ ಆರೋಪಪಟ್ಟಿ ಸಲ್ಲಿಸದ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಜೂನ್‌ 5ರಂದು ಪತ್ರ ಬರೆದಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು, ‘ಸಿದ್ದೇಗೌಡ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಬೇಕು ಹಾಗೂ ಅವರ ವಿರುದ್ಧ ಸಿದ್ಧಪಡಿಸಲಾದ ಆರೋಪಪಟ್ಟಿಯನ್ನು ಜಾರಿ ಮಾಡಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

ಅಷ್ಟೇ ಅಲ್ಲ, ಸಿದ್ದೇಗೌಡ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭವಾಗಿರುವುದರಿಂದ ಅವರಿಗೆ ಪೂರ್ಣಪ್ರಮಾಣದ ನಿವೃತ್ತಿ ವೇತನ ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಭಾಗಶಃ ಪಿಂಚಣಿ ನೀಡುವ ಬಗ್ಗೆಯೂ ಕೆಸಿಎಸ್‌ಆರ್‌ ನಿಯಮ ಹಾಗೂ 1958ರ ಕರ್ನಾಟಕ ಆರ್ಥಿಕ ಸಂಹಿತೆ ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

‘ಈ ನೋಟಿಸ್‌ ಜಾರಿಯಾದ 15 ದಿನಗಳ ಒಳಗೆ ನೀವು ಬರಹದ ರೂಪದಲ್ಲಿ ಅಥವಾ ಮೌಖಿಕವಾಗಿ ಹೇಳಿಕೆ ನೀಡಬಹುದು. ನೀವು ಒಪ್ಪಿಕೊಳ್ಳದೇ ಇರುವ ಆರೋಪಗಳ ಬಗ್ಗೆ ಮಾತ್ರ ಇಲಾಖೆ ವಿಚಾರಣೆ ನಡೆಸಲಾಗುತ್ತದೆ. ಹಾಗಾಗಿ ಪ್ರತಿಯೊಂದು ಆರೋಪವನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಬೇಕು ಅಥವಾ ತಿರಸ್ಕರಿಸಬೇಕು. ನಿಗದಿತ ಅವಧಿಯ ಒಳಗೆ ಉತ್ತರಿಸದಿದ್ದಲ್ಲಿ 1957ರ ಕರ್ನಾಟಕ ನಾಗರಿಸ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕಾರಣ ಕೇಳಿ ಸಿದ್ದೇಗೌಡ ಅವರಿಗೆ ಜಾರಿಮಾಡಲಾದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ 2019ರ ಸೆಪ್ಟೆಂಬರ್‌ನಲ್ಲಿ ‘ಬ್ರಹ್ಮಾಂಡ ಭ್ರಷ್ಟಾಚಾರ’ ಎಂಬ ವಿಶೇಷ ವರದಿಗಳ ಸರಣಿಯನ್ನು ಪ್ರಕಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.