ADVERTISEMENT

ರಸ್ತೆ ಗುಂಡಿ ಮುಚ್ಚುವಲ್ಲಿ ತೋರಿದ ನಿರ್ಲಕ್ಷ್ಯ: ಇಬ್ಬರು ಎಂಜಿನಿಯರ್‌ಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 19:59 IST
Last Updated 2 ಜನವರಿ 2022, 19:59 IST

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚದ ಕಾರಣಕ್ಕೆ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ. ಜತೆಗೆ, ನಾಲ್ವರು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ನೋಟಿಸ್‌ ನೀಡಿದೆ.

ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲು ವಲಯವಾರು ಕೈಗೊಂಡಿರುವ ಕ್ರಮಗಳ ಬಗ್ಗೆ ಹಲವಾರು ಪರಿಶೀಲನಾ ಸಭೆಗಳನ್ನು ನಡೆಸಲಾಗಿದೆ. ಮುಖ್ಯ ರಸ್ತೆಗಳು, ಉಪ ಮುಖ್ಯ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳನ್ನು ಮುಚ್ಚಲು ತ್ವರಿತ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಮುಖ್ಯ ಆಯುಕ್ತರು ಸೂಚಿಸಿದ್ದರು. ಎಲ್ಲ ರಸ್ತೆಗಳ ಗುಂಡಿ ಮುಚ್ಚುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ನಿರ್ದೇಶನ ನೀಡಿದ್ದರು. ಗುಂಡಿ ಮುಚ್ಚಲು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ನಿರ್ಲಕ್ಷ್ಯ ತೋರಿದ ಆರೋಪದಲ್ಲಿ ಇದೀಗ ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಅಮಾನತು ಆದವರು: ಎನ್‌.ಎಸ್‌.ರೇವಣ್ಣ (ಪ್ರಭಾರ ಕಾರ್ಯಪಾಲಯ ಎಂಜಿನಿಯರ್, ಗಾಂಧಿನಗರ): ಗಾಂಧಿನಗರ ವಿಭಾಗದಲ್ಲಿ 787 ಗುಂಡಿಗಳಿದ್ದು, 67 ಗುಂಡಿಗಳನ್ನಷ್ಟೇ ಮುಚ್ಚಿ ಶೇ 9 ‍‍‍ಪ್ರಗತಿ.

ADVERTISEMENT

ಸಿ.ಎಂ. ಶಿವಕುಮಾರ್‌(ಕಾರ್ಯಪಾಲಕ ಎಂಜಿನಿಯರ್‌, ಯಲಹಂಕ ವಿಭಾಗ): ಯಲಹಂಕ ವಿಭಾಗದಲ್ಲಿ 18 ಗುಂಡಿಗಳಿದ್ದು, ಕೇವಲ 5 ಗುಂಡಿಗಳನ್ನು ಮುಚ್ಚಿ ಶೇ 28 ಪ್ರಗತಿ.

ನೋಟಿಸ್‌ ಪಡೆದವರು: ಇ.ರಾಮಕೃಷ್ಣ‍ಪ್ಪ (ಕಾರ್ಯಪಾಲಕ ಎಂಜಿನಿಯರ್‌, ಶಿವಾಜಿನಗರ): ಈ ವಿಭಾಗದಲ್ಲಿ 298 ಗುಂಡಿಗಳಿದ್ದು, 127 ಗುಂಡಿಗಳನ್ನು ಮುಚ್ಚಿ ಶೇ 43 ಪ್ರಗತಿ.

ಮೋಹನದಾಸ್‌ (ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌, ಬ್ಯಾಟರಾಯನಪುರ): ಈ ವಿಭಾಗದಲ್ಲಿ 239 ಗುಂಡಿಗಳಿದ್ದು, 76 ಗುಂಡಿಗಳನ್ನಷ್ಟೇ ಮುಚ್ಚಿ ಶೇ 32 ಪ್ರಗತಿ.

ಎಚ್‌.ಎಸ್‌.ಮಹದೇಶ್‌ (ಕಾರ್ಯಪಾಲಕ ಎಂಜಿನಿಯರ್‌, ಬೊಮ್ಮನಹಳ್ಳಿ): ಇಲ್ಲಿನ ರಸ್ತೆ ಮೂಲಸೌಕರ್ಯ ವಿಭಾಗದ ವ್ಯಾಪ್ತಿಯಲ್ಲಿ 13 ಗುಂಡಿಗಳಿದ್ದು, 4 ಗುಂಡಿಗಳನ್ನು ಮಾತ್ರ ಮುಚ್ಚಿ ಶೇ 31 ಪ್ರಗತಿ.

ಎಚ್.ವಿ.ಯರಪ್ಪ ರೆಡ್ಡಿ (ಕಾರ್ಯಪಾಲಕ ಎಂಜಿನಿಯರ್‌, ದಾಸರಹಳ್ಳಿ): ಇಲ್ಲಿನ ರಸ್ತೆ ಮೂಲಸೌಕರ್ಯ ವಿಭಾಗದಲ್ಲಿ 17 ಗುಂಡಿಗಳಿದ್ದು, 5 ಗುಂಡಿಗಳನ್ನು ಮಾತ್ರ ಮುಚ್ಚಿ ಶೇ 29 ಪ್ರಗತಿ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.