ADVERTISEMENT

ಸಾರ್ವಜನಿಕ ಸ್ವಚ್ಛತೆ-ನಿಯಮ ಪಾಲಿಸದವರ ವಿರುದ್ಧ ಕ್ರಮ: ನಿತ್ಯ ₹ 1 ಲಕ್ಷದಷ್ಟು ದಂಡ

ಪ್ತವೀಣಕುಮಾರ್‌ ಪಿ.ವಿ.
Published 11 ಜೂನ್ 2020, 21:21 IST
Last Updated 11 ಜೂನ್ 2020, 21:21 IST
   
""

ಬೆಂಗಳೂರು: ಲಾಕ್‌ಡೌನ್‌ ಸಡಿಲಿಸಿ ಜನರ ಓಡಾಟಕ್ಕೆ ಅವಕಾಶ ಕಲ್ಪಿಸಿದ ಬಳಿಕ ಸಾರ್ವಜನಿಕ ಸ್ಥಳಗಳನ್ನು ಗಲೀಜು ಮಾಡುವ ಹಾಗೂ ಕಸ ನಿರ್ವಹಣೆ ನಿಯಮ ಉಲ್ಲಂಘಿಸುವ ಪ್ರಮಾಣವೂ ಹೆಚ್ಚಿದೆ. ಮೇ ತಿಂಗಳಿನಲ್ಲಿ ಬಿಬಿಎಂಪಿ ವಿವಿಧ ಪ್ರಕರಣಗಳಲ್ಲಿ ನಿತ್ಯ ಹೆಚ್ಚೂ ಕಡಿಮೆ ₹1 ಲಕ್ಷದಷ್ಟು ದಂಡ ವಿಧಿಸಿದೆ. ಒಂದೇ ತಿಂಗಳಿನಲ್ಲಿ ಒಟ್ಟು ₹29.77 ಲಕ್ಷ ದಂಡ ಹಾಕಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಓಡಾಡಿದವರಿಂದಲೇ ₹7.60 ಲಕ್ಷ ದಂಡ ಸಂಗ್ರಹಿಸಲಾಗಿದೆ. ಅತೀ ಹೆಚ್ಚು ದಂಡ ಸಂಗ್ರಹವಾಗಿರುವುದು ಪೂರ್ವ (₹1.65 ಲಕ್ಷ) ಮತ್ತು ದಕ್ಷಿಣ (₹1.87 ಲಕ್ಷ) ವಲಯಗಳಲ್ಲಿ. ಈ ತಪ್ಪಿಗೆ ಪಾಲಿಕೆ ಮೊದಲು ₹1 ಸಾವಿರ ದಂಡ ಹಾಕುತ್ತಿತ್ತು. ನಂತರ ಈ ಮೊತ್ತವನ್ನು ₹ 200ಕ್ಕೆ ಇಳಿಸಿತ್ತು.

ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡದವರಿಗೆ ಒಟ್ಟು ₹6.99 ಲಕ್ಷ ದಂಡ ವಿಧಿಸಲಾಗಿದೆ. ಇದರ ಪ್ರಮಾಣ ದಕ್ಷಿಣ ವಲಯದಲ್ಲಿ ಜಾಸ್ತಿ ಇದೆ. ಇಲ್ಲಿ ಒಟ್ಟು ₹ 69,054 ದಂಡ ಹಾಕಲಾಗಿದೆ. ಪೂರ್ವ ವಲಯದಲ್ಲಿ ₹ 29,917 ದಂಡ ಹಾಕಲಾಗಿದೆ.

ADVERTISEMENT

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದವರಿಗೂ ದಂಡ ವಿಧಿಸಲಾಗಿದೆ. ಪೂರ್ವವಲಯದಲ್ಲಿ ಈ ಕುರಿತು ₹2 ಸಾವಿರ ಹಾಗೂ ದಕ್ಷಿಣ ವಲಯದಲ್ಲಿ ₹1 ಸಾವಿರ ದಂಡ ಹಾಕಲಾಗಿದೆ. ಬಯಲು ಪ್ರದೇಶದಲ್ಲಿ ಶೌಚ ಮಾಡಿದ್ದಕ್ಕೆ ದಾಸರಹಳ್ಳಿ ಮತ್ತು ದಕ್ಷಿಣ ವಲಯದಲ್ಲಿ ತಲಾ ₹ 1 ಸಾವಿರ ದಂಡ ವಿಧಿಸಲಾಗಿದೆ.

ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದ ವಿವಿಧ ಪ್ರಕರಣಗಳಲ್ಲಿ ₹19,500 ದಂಡ ವಿಧಿಸಲಾಗಿದೆ. ಖಾಲಿ ನಿವೇಶನಗಳಲ್ಲಿ ಕಸ ಹಾಕಲು ಅವಕಾಶ ಕಲ್ಪಿಸಿದ್ದಕ್ಕೆ ವಿವಿಧ ಪ್ರಕರಣಗಳಲ್ಲಿ ಮಾಲೀಕರಿಗೆ ಒಟ್ಟು ₹7ಸಾವಿರ ದಂಡ ಹಾಕಲಾಗಿದೆ.

ಅತಿ ಹೆಚ್ಚು ದಂಡ ಕಟ್ಟಿದವರಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚು. ಅವರಿಗೆ ಒಟ್ಟು ₹3. 60 ಲಕ್ಷ ದಂಡ ಹಾಕಲಾಗಿದೆ.

‘ಕಸ ನಿರ್ವಹಣೆಬೈಲಾದಿಂದ ಮತ್ತಷ್ಟು ಬಲ’
ಪಾಲಿಕೆಯ ಕಸ ನಿರ್ವಹಣೆ (ಎಸ್‌ಡಬ್ಲ್ಯುಎಂ) ಉಪನಿಯಮ ರಾಜ್ಯಪತ್ರದಲ್ಲಿ ಪ್ರಕಟವಾದ ಬಂದ ಬಳಿಕ ದಂಡ ವಿಧಿಸುವ ಪ್ರಕ್ರಿಯೆಗೆ ಮತ್ತಷ್ಟು ಬಲ ಬಂದಂತಾಗಿದೆ.

‘ನಾವು ಈ ಹಿಂದೆ ಬಿಬಿಎಂಪಿ ಆದೇಶದ ಆಧಾರದಲ್ಲಿ ದಂಡ ಹಾಕುತ್ತಿದ್ದೆವು. ದಂಡದ ಮೊತ್ತಎಸ್‌ಡಬ್ಲ್ಯುಎಂ ಉಪನಿಯಮಗಳಲ್ಲಿ ನಿಗದಿಪಡಿಸಿದಷ್ಟೇ ಇತ್ತು. ಈಗ ಕಾನೂನಿನ ಬಲವೂ ಸಿಕ್ಕಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ದಂಡ ವಿಧಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತೇವೆ’ ಎಂದು ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉಗುಳಿದರೆ ದಂಡ‌
ಸಾರ್ವಜನಿಕ ಪ್ರದೇಶದಲ್ಲಿ ಉಗುಳಿ ಗಲೀಜು ಮಾಡುವವರಿಗೂ ಪಾಲಿಕೆ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳು ಮುಲಾಜಿಲ್ಲದೇ ದಂಡ ಹಾಕುತ್ತಿದ್ದಾರೆ. ಇಂತಹವರಿಂದ ಒಟ್ಟು ₹ 6 ಸಾವಿರ ದಂಡ ವಸೂಲಿ ಮಾಡಲಾಗಿದೆ. ಪೂರ್ವ ವಲಯದಲ್ಲಿ ₹ 3ಸಾವಿರ, ಮಹದೇವಪುರ ವಲಯದಲ್ಲಿ ₹ 1 ಸಾವಿರ ಹಾಗೂ ಪಶ್ಚಿಮ ವಲಯದಲ್ಲಿ ₹ 2 ಸಾವಿರ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.