ADVERTISEMENT

ಬಿಬಿಎಂಪಿಗೂ ಇನ್ನು ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅನ್ವಯ

ಹಣಕಾಸು ನಿರ್ವಹಣಾ ತತ್ವಗಳ ಪಾಲನೆ ಇನ್ನು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 21:48 IST
Last Updated 10 ಮಾರ್ಚ್ 2022, 21:48 IST
   

ಬೆಂಗಳೂರು: ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ–2003’ ಅನ್ವಯವಾಗಲಿದೆ. ಈ ಕಾಯ್ದೆಯು ಬಿಬಿಎಂಪಿ ವ್ಯಾಪ್ತಿಯಲ್ಲಿ ಗುರುವಾರದಿಂದ ಜಾರಿಗೆ ಬರಲಿದೆ ಎಂದು ಹಣಕಾಸು ಇಲಾಖೆಯು ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಕಾಯ್ದೆಯ ಆಶಯಗಳಿಗೆ ಅನುಗುಣವಾಗಿ, ‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ) ನಿಯಮಗಳು 2021’ ಅನ್ನು ರೂಪಿಸಲಾಗಿದ್ದು, ಅವುಗಳು ಕೂಡಾ ಗುರುವಾರದಿಂದಲೇ ಜಾರಿಗೆ ಬರಲಿವೆ.

‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ) ನಿಯಮಗಳು 2021’ ಅನ್ನು ಕರಡು ನಿಯಮಗಳನ್ನುಸರ್ಕಾರ 2021ರ ಸೆ. 28ರಂದು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂಧ ಸಲಹೆ ಸೂಚನೆಗಳನ್ನು ಆಹ್ವಾನಿಸಿತ್ತು. ಅವುಗಳಿಗೆ ಅಂತಿಮರೂಪ ನೀಡಲಾಗಿದೆ. ಬಿಬಿಎಂಪಿಯು ಬಜೆಟ್‌ ರೂಪಿಸುವಾಗ ಈ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರದ (ಸಿಎಜಿಆರ್‌) ಆಧಾರದಲ್ಲೇ ಪಾಲಿಕೆಯು ಬಜೆಟ್‌ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ.

ADVERTISEMENT

ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ, ಪ್ರತಿ ವರ್ಷವೂ ವಾಸ್ತವ ವರಮಾನಕ್ಕಿಂತ ಹೆಚ್ಚು ವರಮಾನ ನಿರೀಕ್ಷಿಸಿ ಬಜೆಟ್‌ ಮಂಡಿಸಲಾಗುತ್ತಿತ್ತು. ಆದರೆ, ಬಜೆಟ್‌ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಹಣಕಾಸಿನ ಕೊರತೆ ಎದುರಾಗುತ್ತಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಹಣಕಾಸು ನಿರ್ವಹಣಾ ತತ್ವ: ಬಜೆಟ್‌ ರೂಪಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ನಿಯಮ
ಗಳಲ್ಲಿ ನಿರೂಪಿಸಲಾಗಿದೆ. ಬಜೆಟ್‌ನಲ್ಲಿ ಪಾರದರ್ಶಕತೆ ಕಾಪಾಡುವುದನ್ನು ಹಾಗೂ ನಿರ್ವಹಣೆ ಆಧಾರದಲ್ಲಿ ಬಜೆಟ್‌ ಸಿದ್ಧಪಡಿಸುವುದನ್ನು ಖಾತರಿ ಪಡಿಸುವ ಸಲುವಾಗಿ ಹಣಕಾಸು ನಿರ್ವಹಣಾ ತತ್ವಗಳನ್ನು ರೂಪಿಸಲಾಗಿದೆ. ಅದರ ಪ್ರಕಾರ ಬಜೆಟ್‌ನ ವಿತ್ತೀಯ ಕೊರತೆಯುಬಜೆಟ್‌ ಗಾತ್ರದ ಶೇ 3 ಅನ್ನು ಮೀರುವಂತಿಲ್ಲ. ವರಮಾನ ಕೊರತೆ ನೀಗಿಸುವುದಕ್ಕೂ ಪಾಲಿಕೆ ಆದ್ಯತೆ ನೀಡಬೇಕು ಎಂದೂ ಸ್ಪಷ್ಟಪಡಿಸಲಾಗಿದೆ. ಪಾಲಿಕೆಯ ಹಣಕಾಸು ಸ್ಥಿತಿಗತಿಯನ್ನು ಅವಲೋಕಿಸುವುದಕ್ಕೆ ಸೂಚ್ಯಂಕಗಳನ್ನು ರೂಪಿಸಲಾಗಿದೆ.

ಪಾಲಿಕೆಯು ‘ಮಧ್ಯಮಾವಧಿ ವಿತ್ತೀಯ ಯೋಜನೆ’ ರೂಪಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ವಾರ್ಷಿಕ ಬಜೆಟ್‌ ರೂಪಿಸುವುದಕ್ಕೆ ಇದರ ಅಂಕಿ–ಅಂಶಗಳನ್ನೇ ಆಧಾರವಾಗಿ ಬಳಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ದೇಶದಲ್ಲೇ ಮೊದಲು: ದೇಶದ ಯಾವುದೇ ನಗರ ಸ್ಥಳೀಯ ಸಂಸ್ಥೆಯೂ ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ಇದುವರೆಗೆ ರೂಪಿಸಿರಲಿಲ್ಲ. ಹಾಗಾಗಿ ಇದನ್ನು ರೂಪಿಸುವಾಗ ಬಿಬಿಎಂಪಿ ಮುಂದೆ ಸಿದ್ಧ ಮಾದರಿಗಳು ಇರಲಿಲ್ಲ. ಕೇರಳ ಹಾಗೂ ಕೇಂದ್ರ ಸರ್ಕಾರಗಳ ವಿತ್ತೀಯ ಹೊಣೆಗಾರಿಕೆ ನಿಯಮಗಳ ಮಾದರಿಯಲ್ಲೇ ಇದನ್ನು ರೂಪಿಸಲಾಗಿದೆ. ಕೇರಳವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಹಾಗೂ ಕೇಂದ್ರ ಸರ್ಕಾರವು ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಆಧರಿಸಿ ನಿಯಮ ರೂಪಿಸಿದ್ದವು. ಬಿಬಿಎಂಪಿಯು ಬೆಂಗಳೂರಿನ ಒಟ್ಟು ಆಂತರಿಕ ಉತ್ಪನ್ನ ಆಧರಿಸಿ ನಿಯಮ ರೂಪಿಸಲು ಅವಕಾಶ ಇರಲಿಲ್ಲ. ಹಾಗಾಗಿ, ಸಿಎಜಿಆರ್‌ ಆಧಾರದಲ್ಲಿ ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.