ಬೆಂಗಳೂರು: ವಯನಾಡ್‌ನಲ್ಲಿ ಪ್ರವಾಹ, ಭೂಕುಸಿತದಿಂದ ಸಂಕಷ್ಟದಲ್ಲಿರುವವರಿಗೆ ಅಗತ್ಯ ವಸ್ತು, ದಿನಸಿ ಸಾಮಗ್ರಿಗಳನ್ನು ತಲುಪಿಸುವ ಎರಡು ಟ್ರಕ್‌ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಚಾಲನೆ ನೀಡಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಿಬಿಎಂಪಿ ನೌಕರರ ಸಹಕಾರ ಸಂಘದಿಂದ ದಿನಸಿ ಸಾಮಗ್ರಿಗಳನ್ನು ಕಳುಹಿಸಲಾಯಿತು.
‘ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ಬಿಬಿಎಂಪಿ ನೌಕರರ ಸಂಘವು ಸಹಾಯ, ಸಹಕಾರ ನೀಡುತ್ತಿದೆ. ಕೇರಳದ ವಯಾನಾಡ್‌ನಲ್ಲಿ ದುರಂತದಿಂದ ಸಾಕಷ್ಟು ನಷ್ಟವುಂಟಾಗಿದ್ದು, ಆ ಸಮಸ್ಯೆಗೆ ಎಲ್ಲ ಕಡೆಯಿಂದ ಸ್ಪಂದಿಸಿ ನೆರವು ನೀಡುತ್ತಿದ್ದಾರೆ. ಹೀಗಾಗಿ, ಪಾಲಿಕೆ ನೌಕರರ ಸಂಘದ ವತಿಯಿಂದ ಎರಡು ಟ್ರಕ್‌ಗಳಲ್ಲಿ ಸುಮಾರು ₹25 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ’ ಎಂದು ತುಷಾರ್ ಗಿರಿನಾಥ್ ಹೇಳಿದರು.
ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್ ಮಾತನಾಡಿ, ‘ಸರ್ಕಾರದ ಜೊತೆಯಲ್ಲಿ ಸಂಘ, ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ. ಪಾಲಿಕೆಯ ಅಧಿಕಾರಿಗಳು, ನೌಕರರ ಆರ್ಥಿಕ ನೆರವಿನಿಂದ ದಿನಸಿ ಸಾಮಗ್ರಿಗಳಾದ ರವೆ, ಎಣ್ಣೆ, ಅಕ್ಕಿ, ಗೋಧಿ, ಸಕ್ಕರೆ ಹಾಗೂ ಹಾಸಿಗೆ, ದಿಂಬು, ಬೆಡ್ ಶೀಟ್, ಸ್ವೆಟರ್, ಜರ್ಕಿನ್ ಸೇರಿದಂತೆ ಸುಮಾರು 11 ಟನ್ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ದಿನಸಿ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳ ಟ್ರಕ್‌ಗಳ ಜೊತೆಗೆ 20ಕ್ಕೂ ಹೆಚ್ಚು ಅಧಿಕಾರಿ, ನೌಕರರು ವಯನಾಡ್‌ಗೆ ತೆರಳಿದ್ದು, ಸಂತ್ರಸ್ತರಿಗೆ ಸಾಮಗ್ರಿಗಳನ್ನು ಹಸ್ತಾಂತರ ಮಾಡಿ ಹಿಂತಿರುಗಲಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.