ADVERTISEMENT

34 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ: ಹೊರಮಾವು ನರ್ಸಿಂಗ್ ಕಾಲೇಜು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 19:31 IST
Last Updated 3 ಸೆಪ್ಟೆಂಬರ್ 2021, 19:31 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ನಗರದ ಹೊರಮಾವು ಕ್ರಿಸ್ಟಿಯನ್ ನರ್ಸಿಂಗ್ ಕಾಲೇಜಿನಲ್ಲಿ 300 ಮಂದಿ ಪೈಕಿ 34 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಕಾಲೇಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾಲೇಜಿನ ಸುತ್ತ–ಮುತ್ತ ಇರುವ ಸುಮಾರು 800 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.

ಕಾಲೇಜಿಗೆ ಶುಕ್ರವಾರ ಭೇಟಿ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಹೊರರಾಜ್ಯದಿಂದ ವಿದ್ಯಾರ್ಥಿಗಳು ಬರುವುದರಿಂದ ಶಿಕ್ಷಣ ಸಂಸ್ಥೆಗಳು ಎಚ್ಚರ ವಹಿಸಬೇಕೆಂದು ಸೂಚಿಸಲಾಗಿದೆ’ ಎಂದರು.

‘ಹೊರಮಾವು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಕೇರಳ ಮತ್ತು ಪಶ್ಚಿಮ ಬಂಗಾಳದಿಂದ ಬಂದವರಾಗಿದ್ದಾರೆ. ಕೋವಿಡ್‌ ದೃಢಪಟ್ಟವರಲ್ಲಿ ಬಹುತೇಕರು ಕೊರೊನಾ ಸೋಂಕು ಲಕ್ಷಣರಹಿತರಾಗಿದ್ದಾರೆ. ಇವರ ಮಾದರಿಯನ್ನು ವೈರಾಣು ಅನುಕ್ರಮಣಿಕೆಗೆ ಕಳುಹಿಸಲಾಗುವುದು’ ಎಂದರು.

ADVERTISEMENT

‘ಸೋಂಕಿತ ವಿದ್ಯಾರ್ಥಿಗಳನ್ನು ಕೋವಿಡ್ ಆರೈಕೆ ಕೇಂದ್ರ, ಹೋಟೆಲ್ ಮೊದಲಾದ ಕಡೆ ಪ್ರತ್ಯೇಕವಾಗಿರಿಸಲಾಗುವುದು. ಹಲವರನ್ನು ಸಂಸ್ಥೆಯಲ್ಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಒಂದು ವಾರ ಸಂಸ್ಥೆಯನ್ನು ಮುಚ್ಚಿ, ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ಈ ಕಾಲೇಜು ಇರುವ ಪ್ರದೇಶವನ್ನು ಸೂಕ್ಷ್ಮ ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗಿದೆ’ ಎಂದರು.

ಪಾಲಿಕೆಯಿಂದ ಮೇಲುಸ್ತುವಾರಿ: ‘ಪಾಲಿಕೆಯ ಮಹದೇವಪುರ ಮತ್ತು ಪೂರ್ವ ವಲಯಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೊರಮಾವು ಕಾಲೇಜಿನ ವಿದ್ಯಾರ್ಥಿಗಳನ್ನು ಕೋವಿಡ್ ಆರೈಕೆ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ವ್ಯವಸ್ಥೆಯ ಮೇಲುಸ್ತುವಾರಿಯನ್ನು ಪಾಲಿಕೆಯಿಂದ ಮಾಡಲಾಗುತ್ತಿದೆ. ಕ್ಲಸ್ಟರ್ ಪ್ರಕರಣ ಸಂಬಂಧ ಅಧಿಕಾರಿಗಳಿಂದ ವರದಿ ತರಿಸಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.