ADVERTISEMENT

ಬಿಬಿಎಂಪಿ: ಮುಂದುವರಿದ ವಿಚಾರಣೆ

243 ವಾರ್ಡ್‌ಗಳ ಪಟ್ಟಿ: ಒಬಿಸಿಗೆ ರಾಜಕೀಯ ಮೀಸಲು ನಿಗದಿ ಜಿಜ್ಞಾಸೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:22 IST
Last Updated 28 ಸೆಪ್ಟೆಂಬರ್ 2022, 4:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧಪಡಿಸಲಾಗಿರುವ 243 ವಾರ್ಡ್‌ಗಳ ಮೀಸಲು ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ರಾಜಕೀಯ ಮೀಸಲು ಕಲ್ಪಿಸಿಲ್ಲ ಮತ್ತು ಈಗ ನಿಗದಪಡಿಸಲಾಗಿರುವ ಒಬಿಸಿ ಮೀಸಲಿಗೆ ಜನಸಂಖ್ಯೆಯ ಆಧಾರಗಳೇನು ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳಿಲ್ಲ’ ಎಂಬ ಅರ್ಜಿದಾರರ ಆಕ್ಷೇಪಣೆ ಮುಂದುವರಿದ ಹಿನ್ನೆಲೆಯಲ್ಲಿ ಈ ಕುರಿತ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರಕ್ಕೆ (ಸೆ.28) ಮುಂದೂಡಿದೆ.

ಈಜಿಪುರದ ಕೆ.ಮಹದೇವ, ಕಮ್ಮನಹಳ್ಳಿಯ ಪಳನಿ ದಯಾಳನ್‌, ದೊಡ್ಡಬಾಣಸವಾಡಿಯ ವಿ.ಶ್ರೀನಿವಾಸ್‌ ಮತ್ತು ನಾಗನಾಥಪುರದ ಕೆ. ಚಂದ್ರಶೇಖರ್ ಸೇರಿ ಎಂಟು ಜನರ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಜಯಕುಮಾರ್ ಎಸ್.ಪಾಟೀಲ್‌, ಎ.ಎಸ್.ಪೊನ್ನಣ್ಣ ಮತ್ತು ಸಂದೀಪ್‌ ಪಾಟೀಲ್‌, ಜಯಾ ಮೊವಿಲ್‌ ವಾದ ಮಂಡಿಸಿ, ‘ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ರಾಜಕೀಯ ಮೀಸಲು ನಿಗದಿಗೆ ಸರ್ವೆ ನಡೆಸಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಚುನಾವಣಾ ಆಯೋಗ ಟ್ರಿಪಲ್ ಟೆಸ್ಟ್ ಮಾನದಂಡ ಅನುಸರಿಸಿಲ್ಲ. ಹಾಗಾಗಿ, ಒಬಿಸಿ ಆಯೋಗದ ವರದಿಯಂತೆ ಮೀಸಲು ಪರಿಗಣಿಸಬಾರದು. ಹೊಸದಾಗಿ ಒಬಿಸಿಗಳ ಸರ್ವೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿದರು.

ADVERTISEMENT

‘ವಿಧಾನಸಭಾ ಕ್ಷೇತ್ರವಾರು ವಿರೋಧ ಪಕ್ಷಗಳ ಶಾಸಕರಿರುವ ಕ್ಷೇತ್ರ
ಗಳಲ್ಲಿ ಮಹಿಳಾ ಮೀಸಲು ಹೆಚ್ಚಳ ಮಾಡಲಾಗಿದೆ. ಆಡಳಿತಾರೂಢ ಪಕ್ಷದ ಶಾಸಕರು ಇರುವ ಕಡೆ ಸಾಮಾನ್ಯ ಕ್ಷೇತ್ರಗಳನ್ನು ಹೆಚ್ಚಿಸಲಾಗಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.ಇಂತಹ ತಾರತಮ್ಯದಿಂದ ಅಂತಿಮವಾಗಿ ಶ್ರೀಸಾಮಾನ್ಯ ಬಳಲುತ್ತಾನೆ’ ಎಂದು ಆಕ್ಷೇಪಿಸಿದರು.

ಆಯೋಗದ ಪರ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ, ‘ಟ್ರಿಪಲ್ ಟೆಸ್ಟ್ ಆಧಾರದಲ್ಲಿ ಮೀಸಲಾತಿ ನಿಗದಿಪಡಿಸಿ ವರದಿ ಪಡೆಯಲು ಸಮಯಬೇಕಾಗುತ್ತದೆ. ಹೀಗೇ ಕಾಲ ತಳ್ಳುತ್ತಾ ಹೋದರೆ ಇದು ಎಂದೂ ಮುಗಿಯದ ಕಥೆಯಾಗುತ್ತದೆ. ಒಂದು ವೇಳೆ ಮೀಸಲು ಮರು ರೂಪಿಸಲು ನಿರ್ದೇಶನ ನೀಡಿದರೆ ಒಂದು ವಾರ ಮಾತ್ರವೇ ಸಮಯ ನೀಡಬೇಕು. ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ಮರಳಿಸಬೇಕಿದೆ. ಹಾಗಾಗಿ, ಮೀಸಲು ಮರುರೂಪಿಸಲು ಹೆಚ್ಚಿನ ಸಮಯ ನೀಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರಕ್ಕೆ ಚುನಾವಣೆ ನಡೆಸಲು ಮನಸ್ಸಿದ್ದಂತಿಲ್ಲ. ಈ ರೀತಿಯ ತಾರತಮ್ಯ ಸಲ್ಲದು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.