ADVERTISEMENT

ಬಯಲು ಮೂತ್ರ ವಿಸರ್ಜನೆ ತಡೆಗೆ 'ಕನ್ನಡಿ' ಮೊರೆ ಹೋದ ಬಿಬಿಎಂಪಿ

ಬಿಬಿಎಂಪಿ ವಿನೂತನ ತಂತ್ರ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 9:39 IST
Last Updated 14 ಜನವರಿ 2020, 9:39 IST
ಚರ್ಚ್‌ಸ್ಟ್ರೀಟ್‌ ಬಳಿ ರಸ್ತೆ ಪಕ್ಕದಲ್ಲಿ ಕನ್ನಡಿ ಅಳವಡಿಸಿರುವುದು
ಚರ್ಚ್‌ಸ್ಟ್ರೀಟ್‌ ಬಳಿ ರಸ್ತೆ ಪಕ್ಕದಲ್ಲಿ ಕನ್ನಡಿ ಅಳವಡಿಸಿರುವುದು   

ಬೆಂಗಳೂರು: ಬಯಲು ಪ್ರದೇಶದಲ್ಲಿ ಜನ ಮೂತ್ರ ಮಾಡುವುದನ್ನು ತಡೆಯಲು ಅಂತಹ ಜಾಗಗಳಲ್ಲಿ ದೇವರ ಚಿತ್ರಗಳಿರುವ ಟೈಲ್ಸ್‌ಗಳನ್ನು ಅಳವಡಿಸುವುದನ್ನು ನೋಡಿದ್ದೇವೆ. ಬಯಲು ಮೂತ್ರ ವಿಸರ್ಜನೆ ತಡೆಯಲು ಹಾಗೂ ಸಮೀಪದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಮಾಹಿತಿ ನೀಡಲು ಬಿಬಿಎಂ‍ಪಿ ವಿನೂತನ ತಂತ್ರ ಅನುಸರಿಸಿದೆ. ಐದು ಜಾಗಗಳನ್ನು ಗುರುತಿಸಿರುವ ಬಿಬಿಎಂಪಿ ಅಲ್ಲಿ ಕನ್ನಡಿ ಅಳವಡಿಸಿದೆ.

‘ಬಯಲಿನಲ್ಲಿ ಮೂತ್ರ ಮಾಡುವಾಗ ಅವರ ಬಿಂಬ ಕನ್ನಡಿಯಲ್ಲಿ ಮೂಡಿದರೆ ಜನರಿಗೆ ಮುಜುಗರ ಉಂಟಾಗುತ್ತದೆ. ಅಂತಹ ಕಡೆ ಮೂತ್ರ ಮಾಡಲು ಜನ ಹಿಂಜರಿಯುತ್ತಾರೆ. ಈ ಕಾರಣಕ್ಕೆ ನಾವು ಕೆಲವು ಜಾಗಗಳನ್ನು ಗುರುತಿಸಿ ಅಲ್ಲಿ ಕನ್ನಡಿ ಅಳವಡಿಸುತ್ತಿದ್ದೇವೆ’ ಎಂದು ಪಾಲಿಕೆ ವಿಶೇಷ ಆಯುಕ್ತ(ಕಸ ವಿಲೇವಾರಿ) ಡಿ. ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಪ್ರಾಯೋಗಿಕವಾಗಿ ಐದು ಕಡೆ ಕನ್ನಡಿ ಅಳವಡಿಸಿದ್ದೇವೆ. ಕನ್ನಡಿಯಲ್ಲಿ ಕ್ಯು.ಆರ್‌.ಕೋಡ್‌ಗಳಿರುವ ಭಿತ್ತಿಪತ್ರವನ್ನು ಅಂಟಿಸಿರುತ್ತೇವೆ. ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಎಲ್ಲಿದೆ ಎಂಬ ಮಾಹಿತಿ ಅದರಲ್ಲಿರುತ್ತದೆ. ಜನ ಕ್ಯು.ಆರ್‌.ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಶೌಚಾಲಯದ ನಿಖರ ಜಾಗವನ್ನು ಪತ್ತೆ ಮಾಡಬಹುದು. ಈ ತಂತ್ರ ಯಶಸ್ವಿಯಾದರೆ ಇನ್ನಷ್ಟು ಕಡೆ ಕನ್ನಡಿ ಅಳವಡಿಸಲಿದ್ದೇವೆ. ಇದು ಜನರಲ್ಲಿ ಜಾಗೃತಿ ಮೂಡಿಸುವ ಒಂದು ಪ್ರಯತ್ನವಷ್ಟೇ’ ಎಂದರು.

ADVERTISEMENT

ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಡಿ ಕೇಂದ್ರ ಸರ್ಕಾರ ನೇಮಿಸಿರುವ ತಜ್ಞರ ತಂಡ ಸ್ವಚ್ಛತೆ ಕಾಪಾಡುವ ಸಲುವಾಗಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಜನವರಿ ತಿಂಗಳಿನಲ್ಲಿ ನಗರಗಳಿಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪಾಲಿಕೆ ನಾನಾ ತಂತ್ರಗಳ ಮೊರೆ ಹೋಗಿದೆ. ನಗರವನ್ನು ಶುಚಿಯಾಗಿಟ್ಟುಕೊಳ್ಳಲು ಅನುಸರಿಸಿರುವ ತಂತ್ರಗಾರಿಕೆಗೂ ಈ ಅಭಿಯಾನದಲ್ಲಿ ಅಂಕ ನೀಡಲಾಗುತ್ತದೆ.

ಕನ್ನಡಿ ಅಳವಡಿಸಿರುವ ಪ್ರದೇಶಗಳು: ಇಂದಿರಾನಗರ ಇಎಸ್‌ಐ ಆಸ್ಪತ್ರೆ, ಕೆ.ಆರ್‌.ಮಾರುಕಟ್ಟೆ, ಕೋರಮಂಗಲ ಜೆಎನ್‌ಸಿ, ಇಂಡಿಯನ್‌ ಎಕ್ಸ್‌ಪ್ರೆಸ್‌, ಚರ್ಚ್‌ಸ್ಟ್ರೀಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.