ADVERTISEMENT

ಟೆಂಡರ್‌ ಪ್ರಕ್ರಿಯೆ ವಿಳಂಬ: ಸಂಯೋಜಿತ ಕೋರ್ಸ್‌ ಪ್ರವೇಶಕ್ಕೆ ತ್ರಿಶಂಕು ಸ್ಥಿತಿ

ಬಿಬಿಎಂಪಿ: ಪರೀಕ್ಷಾ ತರಬೇತಿ ಟೆಂಡರ್‌

ಪ್ರವೀಣ ಕುಮಾರ್ ಪಿ.ವಿ.
Published 18 ಆಗಸ್ಟ್ 2019, 20:22 IST
Last Updated 18 ಆಗಸ್ಟ್ 2019, 20:22 IST
   

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಕಲಿಕೆಯ ಅವಧಿಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲೂ ನೆರವಾಗುವ ಬಿಬಿಎಂಪಿಯ ಹೊಸ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ನನೆಗುದಿಗೆ ಬಿದ್ದಿದೆ.

ಬಿ.ಎ ಅಥವಾ ಬಿ.ಕಾಂ ಪದವಿ ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ನುರಿತ ಸಂಸ್ಥೆಗಳಿಂದ ತರಬೇತಿ ಕೊಡಿಸಲು ಕಲ್ಯಾಣ ಕಾರ್ಯಕ್ರಮಗಳ ಅಡಿ ಈ ವರ್ಷದಿಂದ ಹೊಸ ಕಾರ್ಯಕ್ರಮ ಆರಂಭಿಸಲು ಬಿಬಿಎಂಪಿ ಸಿದ್ಧತೆ ನಡೆಸಿತ್ತು.

ನಾಲ್ಕು ವರ್ಷ ಅವಧಿಯ ಸಂಯೋಜಿತ (ಇಂಟೆಗ್ರೇಟೆಡ್‌) ಕೋರ್ಸ್‌ಗೆ ಆರ್ಥಿಕ ನೆರವು ನೀಡುವ ಉದ್ದೇಶಿತ ಕಾರ್ಯಕ್ರಮದ ಜಾರಿಗೆ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಟೆಂಡರ್‌ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪದವಿ ಪ್ರವೇಶ ಪ್ರಕ್ರಿಯೆ ಆ. 24ರಂದು ಪೂರ್ಣಗೊಳ್ಳಲಿದೆ. ಅಷ್ಟರೊಳಗೆ ತರಬೇತಿ ಸಂಸ್ಥೆ ಆಯ್ಕೆಯಾಗದೇ ಇದ್ದಲ್ಲಿ, ವಿದ್ಯಾರ್ಥಿಗಳಿಗೆ ಸೌಲಭ್ಯ ತಲುಪಿಸುವುದು ಆಗುವುದಿಲ್ಲ. ರಾಜ್ಯ ಸರ್ಕಾರದ ಟೆಂಡರ್‌ ಪ್ರಕ್ರಿಯೆಗಳನ್ನು ನಿಭಾಯಿಸುವ ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ ಆಗಿದ್ದೇಈ ಸಮಸ್ಯೆ ಉಂಟಾಗುವುದಕ್ಕೆ ಪ್ರಮುಖ ಕಾರಣ.

ಸಂಬಂಧಿಸಿದ ಹಣಕಾಸು ಬಿಡ್‌ ಅನ್ನು ಆ.12ರಂದು ತೆರೆಯಬೇಕಿತ್ತು. ಇ–ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಹ್ಯಾಕ್‌ ಆಗಿದ್ದರಿಂದ ಪ್ರಕ್ರಿಯೆ ಪೂರ್ಣಗೊಳಿಸಲಾಗಲಿಲ್ಲ’ ಎಂದು ಪಾಲಿಕೆಯ ಕಲ್ಯಾಣ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜುಗಳಲ್ಲಿ ಪದವಿಗಳ ಪ್ರವೇಶ ಪ್ರಕ್ರಿಯೆ ಇದೇ 24ಕ್ಕೆ ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಸೂಕ್ತ ಕಾಲೇಜುಗಳಲ್ಲಿ ಪ್ರವೇಶ ಕೊಡಿಸಬೇಕು. 24ರ ಒಳಗೆ ಹಣಕಾಸು ಬಿಡ್‌ ತೆರೆಯದಿದ್ದರೆ ಸಮಸ್ಯೆ ಆಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

‘ಆಯುಕ್ತರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ’ ಎಂದು ವಿದ್ಯಾರ್ಥಿಯ ಪೋಷಕರೊಬ್ಬರು ಅಳಲು ತೋಡಿಕೊಂಡರು.

ಏನಿದು ಸಂಯೋಜಿತ ಕೋರ್ಸ್‌?

ಬಿ.ಎ. ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ನಿತ್ಯ ಎರಡು ಗಂಟೆ ತರಬೇತಿ ನೀಡಲಾಗುತ್ತದೆ. ಪದವಿ ಪೂರ್ಣಗೊಂಡ ಬಳಿಕ ಮತ್ತೆ ಒಂದು ವರ್ಷ ವಿಶೇಷ ತರಬೇತಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಮವಸ್ತ್ರ, ಶೈಕ್ಷಣಿಕ ಸಾಮಗ್ರಿಯಿಂದ ಹಿಡಿದು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ.

ಮೊದಲ ವರ್ಷ 103 ಮಂದಿ ಆಯ್ಕೆ

‘ಸಂಯೋಜಿತ ಕೋರ್ಸ್‌ಗೆ ಮೊದಲ ವರ್ಷ 117 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 103 ಮಂದಿಯನ್ನು ಅಂಕ ಹಾಗೂ ಇತರ ಅರ್ಹತೆಗಳ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ.

ಪದವಿ ವ್ಯಾಸಂಗ ಮಾಡಲು ಆಸಕ್ತಿಯುಳ್ಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ಸವಲತ್ತಿಗೆ ಅರ್ಹರು. ಮುಂದಿನ ವರ್ಷ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಗುರಿ ಇದೆ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

*ಸಂಯೋಜಿತ ಕೋರ್ಸ್‌ಗೆ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಉಂಟಾಗಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ
–ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.