ADVERTISEMENT

36 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟೀಸ್‌ ಜಾರಿ

ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಶೇ 50ರಷ್ಟು ಹಾಸಿಗೆ ಕಾಯ್ದಿರಿಸಲು ಹಿಂದೇಟು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 20:07 IST
Last Updated 16 ಸೆಪ್ಟೆಂಬರ್ 2020, 20:07 IST

ಬೆಂಗಳೂರು: ಸರ್ಕಾರದ ಸೂಚನೆ ಮೇರೆಗೆ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ಸಂತ್ರಸ್ತರ ಚಿಕಿತ್ಸೆಗೆ ಕಾಯ್ದಿರಿಸದ 36 ಆಸ್ಪತ್ರೆಗಳಿಗೆ ಕಾರಣ ಕೇಳಿಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ.

‘ಕೆಲವು ಖಾಸಗಿ ಆಸ್ಪತ್ರೆಗಳು ಆನ್‌ಲೈನ್‌ ಪೋರ್ಟಲ್‌ನಲ್ಲಿ ಹಾಸಿಗೆಗಳನ್ನು ಅಕ್ರಮವಾಗಿ ಬ್ಲಾಕ್‌ ಮಾಡುತ್ತಿರುವುದು ಪತ್ತೆಯಾಗಿದೆ. ಸರ್ಕಾರ ಶಿಫಾರಸು ಮಾಡಿದ ರೋಗಿಗಳಿಗೆ ಕಾಯ್ದಿರಿಸಬೇಕಾದ ಹಾಸಿಗೆಗಳನ್ನು ಖಾಸಗಿಯಾಗಿ ದಾಖಲಾಗುವ ರೋಗಿಗಳ ಚಿಕಿತ್ಸೆಗೆ ಬಳಸುತ್ತಿವೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಂಬಂಧಿಸಿ 2017ರ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯ ಸೆಕ್ಷನ್‌ 11 ಮತ್ತು 11ಎ ಹಾಗೂ 2005ರ ವಿಕೋಪ ನಿರ್ವಹಣಾ ಕಾಯ್ದೆ ಪ್ರಕಾರ ಈ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿಮಾಡಲಾಗಿದೆ. 48 ಗಂಟೆಗಳ ಒಳಗೆ ಇದಕ್ಕೆ ಉತ್ತರಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರವು ಶಿಫಾರಸು ಮಾಡಿದ ಎಷ್ಟು ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸರ್ಕಾರದ ಶಿಫಾರಸು ಇಲ್ಲದೇ ಎಷ್ಟು ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಚಿಕಿತ್ಸೆ ಪಡೆದ ಕೋವಿಡೇತರ ರೋಗಿಗಳು ಎಷ್ಟು ಎಂಬ ಬಗ್ಗೆಯೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಪೋರ್ಟಲ್‌ನಲ್ಲಿ ನಮೂದಿಸಬೇಕು ಎಂದು ನೋಟಿಸ್‌ನಲ್ಲಿ ಆಯುಕ್ತರು ಸೂಚಿಸಿದ್ದಾರೆ.

ADVERTISEMENT

ಅಪೋಲೊ, ಬಿಜಿಎಸ್‌ ಗ್ಲೋಬಲ್‌, ವಿಕ್ರಮ್‌, ಸಕ್ರಾ, ನಾರಾಯಣ ಹೃದಯಾಲಯ, ಶಿಫಾ, ಮಣಿಪಾಲ್‌ ಆಸ್ಪತ್ರೆ, ರಾಮಯ್ಯ ಹರ್ಷ, ಫೋರ್ಟಿಸ್‌ ಮುಂತಾದ ಆಸ್ಪತ್ರೆಗಳು ನೋಟಿಸ್‌ ಪಡೆದ ಪಟ್ಟಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.