ADVERTISEMENT

ಭೂಸ್ವಾಧೀನ ವಿಳಂಬ: ಕಾಮಗಾರಿ ನಿಧಾನಗತಿ

ಕುಂದಲಹಳ್ಳಿ ಜಂಕ್ಷನ್‌ ಬಳಿ ಕೆಳಸೇತುವೆ ಕಾಮಗಾರಿ: ಯೋಜನಾ ವೆಚ್ಚ ಅಧಿಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 4:35 IST
Last Updated 26 ಅಕ್ಟೋಬರ್ 2019, 4:35 IST
ಅನಿಲ್‌ಕುಮಾರ್‌
ಅನಿಲ್‌ಕುಮಾರ್‌   

ಬೆಂಗಳೂರು:ಮಹದೇವಪುರದ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ನಿರ್ಮಿಸಲಾಗುತ್ತಿರುವ ಕೆಳಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಲು ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿರುವುದೇ ಕಾರಣ ಎಂದು ಬಿಬಿಎಂಪಿ ಹೇಳಿದೆ.

‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ಮಳೆ ಬಂದರೆ ಮಹದೇವನೇ ಗತಿ’ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿಯು, ‘ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಕುಂದಲಹಳ್ಳಿ ರಸ್ತೆ ಜಂಕ್ಷನ್‌, ಸುರಂಜನದಾಸ್‌ ರಸ್ತೆ ಜಂಕ್ಷನ್‌ ಹಾಗೂ ವಿಂಡ್‌ಟನಲ್‌ ರಸ್ತೆ ಜಂಕ್ಷನ್‌ನಲ್ಲಿ ಮೂರು ಕೆಳಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆಗಳನ್ನು ಒಳಗೊಂಡ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣಕ್ಕೆ ಆರ್.ಎನ್.ಎಸ್‌.ಐ.ಎಲ್. ಸಂಸ್ಥೆಗೆ ಟೆಂಡರ್‌ ನೀಡಲಾಗಿದೆ’ ಎಂದು ಹೇಳಿದೆ.

‘ಕೆಳಸೇತುವೆಗಳಿಗೆ ಅವಶ್ಯಕವಿರುವ ಭೂಮಿಯ ಸ್ವಾಧೀನಕ್ಕೆ ಯೋಜನೆಯಲ್ಲಿ ಮೀಸಲಿಡಲಾದ ವೆಚ್ಚಕ್ಕಿಂತ ಅತಿ ಹೆಚ್ಚು ನೀಡಬೇಕಾಗಿದ್ದರಿಂದ ಯೋಜನಾ ವೆಚ್ಚ ಅಧಿಕವಾಗಿದೆ’ ಎಂದು ಅದು ಹೇಳಿದೆ.

ADVERTISEMENT

‘ಕುಂದಲಹಳ್ಳಿ ಜಂಕ್ಷನ್‌ ಕೆಳಸೇತುವೆ ಕಾಮಗಾರಿಯು 2019ರ ಮಾರ್ಚ್‌ನಿಂದ ಪ್ರಾರಂಭವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕೆಳಸೇತುವೆಯ ಎಡಭಾಗದ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ’ ಎಂದು ಪಾಲಿಕೆ ಹೇಳಿದೆ.

‘ಬಲಭಾಗದ ತಡೆಗೋಡೆ ನಿರ್ಮಾಣ ಮಾಡಲು ಮಣ್ಣನ್ನು ಅಗೆಯಲಾಗಿದೆ. ಆದರೆ, ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರು ಹರಿಯಲು ಜಾಗವಿಲ್ಲದೆ ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ಈ ನೀರನ್ನು ಪಂಪ್‌ ಸಹಾಯದಿಂದ ಹೊರಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಹೇಳಿದೆ.

ಅಂಕಿ–ಅಂಶ
281 ಮೀಟರ್‌ - ಕೆಳಸೇತುವೆಯ ಉದ್ದ
7.50 ಮೀಟರ್‌ - ಸರ್ವಿಸ್‌ ರಸ್ತೆಯ ಅಗಲ
₹135.25 ಕೋಟಿ - ಮೂರು ಕೆಳಸೇತುವೆ ನಿರ್ಮಾಣ ವೆಚ್ಚ
₹42.49 ಕೋಟಿ -ಭೂಸ್ವಾಧೀನಕ್ಕೆ ತಗುಲುವ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.