ADVERTISEMENT

ಕನಕ ಭವನದಲ್ಲಿ ಪಾಲಿಕೆ ಕಚೇರಿ ಬೇಡ: ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿ ಪತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿ ಪತ್ರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 15:41 IST
Last Updated 29 ಆಗಸ್ಟ್ 2025, 15:41 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ‘ಬೆಂಗಳೂರು ಪಶ್ಚಿಮ ನಗರ ಪಾಲಿಕೆ’ ಕಚೇರಿಯನ್ನು ಚಂದ್ರಾ ಲೇಔಟ್‌ನ ‘ಕನಕ ಭವನ’ದಲ್ಲಿ ಸ್ಥಾಪಿಸುವುದು ಬೇಡ’ ಎಂದು ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮನವಿ ಮಾಡಿದ್ದಾರೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ‘ಹಿಂದಿನ ಸರ್ಕಾರ, ಬಿಬಿಎಂಪಿ ವತಿಯಿಂದ ಚಂದ್ರಾ ಲೇಔಟ್‌ನಲ್ಲಿ ‘ಕನಕ ಭವನ’ವನ್ನು ಕಟ್ಟಿ, ಅದನ್ನು ಗುರುಪೀಠಕ್ಕೆ 30 ವರ್ಷಗಳಿಗೆ ಗುತ್ತಿಗೆಗೆ ನೀಡಿದೆ. ಕುರುಬ ಸಮಾಜದ ಕಲ್ಯಾಣಕ್ಕೆ ನೀಡಲಾಗಿರುವ ಈ ಭೂಮಿಯನ್ನು ವಾಪಸ್‌ ಪಡೆಯುವುದು ಬೇಡ’ ಎಂದು ಹೇಳಿದ್ದಾರೆ.

‘ಕನಕ ಭವನ’ ಆವರಣದಲ್ಲಿ ರೇವಣಸಿದ್ದೇಶ್ವರ ಸ್ವಾಮಿ ದೇವಸ್ಥಾನವಿದ್ದು, ಅದನ್ನು ಪುನರುಜ್ಜೀವನಗೊಳಿಸಲಾಗಿದೆ. ಕನಕ ಗುರುಪೀಠ ಬೆಂಗಳೂರು ವಿಭಾಗದ ಶಾಖಾ ಮಠ ಈ ಕಟ್ಟಡದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಅಲ್ಲದೆ, ಸಾಮಾಜಿಕ, ಸಾಂಸ್ಕೃತಿಕ ಸಭೆ–ಸಮಾರಂಭಗಳೂ ನಡೆಯುತ್ತಿವೆ. ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ತರಬೇತಿಗೆ, ಈ ಕಟ್ಟಡದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘ಕನಕ ಗುರುಪೀಠಕ್ಕೆ ನೀಡಲಾಗಿರುವ ಕಟ್ಟಡದಲ್ಲಿ ನಗರ ಪಾಲಿಕೆ ಕಚೇರಿ ಸ್ಥಾಪಿಸುವುದು ಸರಿಯಲ್ಲ. ಉದ್ದೇಶಿತ ನಗರ ಪಾಲಿಕೆ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಮಠದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆ ನಡೆಸಲು ಅವಕಾಶ ನೀಡಬೇಕು’ ಮನವಿ ಮಾಡಿದ್ದಾರೆ.

‘ಕಾಗಿನೆಲೆ ಮಹಾಸಂಸ್ಥಾನಕ್ಕೆ ನೀಡಿರುವ ಕಟ್ಟಡದಲ್ಲಿ ಯಾವುದೇ ಕಾರಣಕ್ಕೂ ಪಾಲಿಕೆ ಕಚೇರಿ ಆರಂಭಿಸಲು ಬಿಜೆಪಿ ಬಿಡುವುದಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು, ಅಧಿಕಾರಿಗಳು ತಮ್ಮ ನಿರ್ಧಾರವನ್ನು ಬದಲಿಸಬೇಕು’ ಎಂದು ಬಿಬಿಎಂಪಿ ಮಾಜಿ ಸದಸ್ಯ ಬಿ. ಸೋಮಶೇಖರ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.