ADVERTISEMENT

ಬೆಂಗಳೂರು| ನಾಯಿ ಸಾಕಲು ಅನುಮತಿ ಕಡ್ಡಾಯ?

ಸಾಕು ನಾಯಿ ಪರವಾನಗಿ ಉಪವಿಧಿ 2020’ಕ್ಕೆ ಬಿಬಿಎಂಪಿ ಕೌನ್ಸಿಲ್‌ ಸಭೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 20:35 IST
Last Updated 28 ಜುಲೈ 2020, 20:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಮನೆಯಲ್ಲಿ ನಾಯಿ ಸಾಕಬೇಕಾದರೆ ಅನುಮತಿ ಪಡೆಯಬೇಕು ಎಂಬ ನಿಯಮ ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ‘ಸಾಕು ನಾಯಿ ಪರವಾನಗಿ ಉಪವಿಧಿ 2020’ಕ್ಕೆ ಕೌನ್ಸಿಲ್‌ ಸಭೆಯಲ್ಲಿ ಮಂಗಳವಾರ ಅನುಮೋದನೆ ನೀಡಲಾಯಿತು.

ನಾಯಿ ಸಾಕಣೆ ಕುರಿತು ನಗರಭಿವೃದ್ಧಿ ಇಲಾಖೆ 2013ರಲ್ಲಿ ಪ್ರಕಟಿಸಿದ್ದ ಮಾರ್ಗಸೂಚಿಗಳ ಆಧಾರದಲ್ಲಿ ಪಾಲಿಕೆ 2018ರಲ್ಲಿ ಬೈಲಾ ರೂಪಿಸಿತ್ತು. ಆದರೆ, ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಾಗಿತ್ತು. ಆ ಬೈಲಾ ವನ್ನು ಹೈಕೋರ್ಟ್‌ ರದ್ದು ಪಡಿಸಿತ್ತು. ಬಳಿಕ ಪಾಲಿಕೆ ಆಯುಕ್ತರು 2020ರ ಫೆಬ್ರುವರಿಯಲ್ಲಿ ಪರಿಷ್ಕೃತ ಬೈಲಾವನ್ನು ಪಾಲಿಕೆ ಸಭೆಯ ಮುಂದೆ ಮಂಡಿಸಿದ್ದರು. ಐದು ತಿಂಗಳ ಬಳಿಕ ಅದಕ್ಕೆ ಒಪ್ಪಿಗೆ ಸಿಕ್ಕಿದೆ.

‘ನಾಯಿ ಸಾಕಲು ನಿಗದಿತ ಶುಲ್ಕ ಪಾವತಿಸಿ ನಿಯೋಜಿತ ಪಶುವೈದ್ಯಾಧಿಕಾರಿಯಿಂದ ಪರವಾನಗಿ ಪಡೆಯಬೇಕು. ಮಾಲೀಕರು ಸ್ವಂತ ವೆಚ್ಚದಲ್ಲಿ ಅದಕ್ಕೆ ಮೈಕ್ರೊಚಿಪ್ ಅಳವಡಿಸಬೇಕು. ಜಂತು ನಾಶಕ ಔಷಧಿ ಮತ್ತು ರೇಬಿಸ್, ಕೆನೈನ್ ಡಿಸ್ಟೆಂಪರ್, ಲೆಪ್ಟೋಸ್ಪೈರೋಸಿಸ್ ಮುಂತಾದ ಪ್ರಾಣಿಜನ್ಯ ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ ಹಾಕಿಸಬೇಕು. 12 ತಿಂಗಳಿಗಿಂತ ಹೆಚ್ಚು ವಯಸ್ಸಿನ ಹೆಣ್ಣು ನಾಯಿಗಳನ್ನು ಕಡ್ಡಾಯವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು ಮುಂತಾದ ನಿಯಮಗಳು ಬೈಲಾದಲ್ಲಿವೆ’ ಎಂದು ಪಾಲಿಕೆಯ ಪಶುಸಂಗೋಪನಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೈಲಾವನ್ನು ನಗರಾವೃದ್ಧಿ ಇಲಾಖೆಗೆ ಅನುಮೋದನೆಗಾಗಿ ಕಳುಹಿಸಲಿದ್ದೇವೆ. ಅವರು ಬೈಲಾ ಕುರಿತು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಿದ್ದಾರೆ. ನಗರಾಭಿವೃದ್ಧಿ ಇಲಾಖೆ ಈ ಬಗ್ಗೆ ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ಹೊಸ ಬೈಲಾ ಜಾರಿಗೆ ಬರಲಿದೆ’ ಎಂದರು.

ಹೊಸ ಬೈಲಾದ ಪ್ರಮುಖ ಅಂಶಗಳು

* ಫ್ಲ್ಯಾಟ್‌ಗಳಲ್ಲಿ ಡಾಬರ್‌ಮನ್, ಜರ್ಮನ್ ಶೆಫರ್ಡ್, ರಾಟ್‌ವೆಯ್ಲರ್, ಹೌಂಡ್ ಮುಂತಾದ ಆಕ್ರಮಣಕಾರಿ ತಳಿಯ ನಾಯಿಗಳನ್ನು ಸಾಕುವಂತಿಲ್ಲ

* ನಾಯಿಯನ್ನು ತ್ಯಜಿಸಿದರೆ ಮಾಲೀಕರಿಗೆ ಆಯುಕ್ತರು ದಂಡ ವಿಧಿಸಬಹುದು ಮತ್ತು ಶಿಸ್ತುಕ್ರಮ ಕೈಗೊಳ್ಳಬಹುದು

* ಪರಿತ್ಯಕ್ತವಾದ ನಾಯಿಯನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ

* ಉದ್ಯಾನ, ಪಾದಚಾರಿ ಮಾರ್ಗ, ರಸ್ತೆ ಮುಂತಾದ ಸ್ಥಳಗಳಲ್ಲಿ ಸಾಕುನಾಯಿ ಮಲ ವಿಸರ್ಜಿಸಿದರೆ ತೆರವುಗೊಳಿಸುವುದು ಮಾಲೀಕರ ಹೊಣೆ.

* ನಾಯಿಗೆ ಸಾಕಷ್ಟು ಜಾಗವನ್ನು ಮತ್ತು ಕಾಳಜಿಯನ್ನು ಒದಗಿಸಬೇಕು. ಕ್ರೌರ್ಯ ಮತ್ತು ಪ್ರಾಣಿ ಕಲ್ಯಾಣ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಬಾರದು.

* ಸಾಕುನಾಯಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಕರೆದೊಯ್ಯುವಾಗ ಕಡ್ಡಾಯವಾಗಿ ಸರಪಳಿಯಿಂದ ಕಟ್ಟಬೇಕು.

* ನಿಯಮ ಉಲ್ಲಂಘನೆಗೆ ಮೊದಲ ಸಲ ₹ 500, ನಂತರ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.