ADVERTISEMENT

ಗೇಟ್‌ಗಳ ಗುಣಮಟ್ಟದ ವರದಿಗೆ ಬಿಬಿಎಂಪಿ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 22:08 IST
Last Updated 24 ಸೆಪ್ಟೆಂಬರ್ 2024, 22:08 IST
ಬಿಬಿಎಂಪಿ ಕೇಂದ್ರ ಕಚೇರಿ
ಬಿಬಿಎಂಪಿ ಕೇಂದ್ರ ಕಚೇರಿ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೆರೆಗಳು, ಆಟದ ಮೈದಾನಗಳು, ರುದ್ರ ಭೂಮಿ, ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರಗಳಲ್ಲಿ ಸಾರ್ವಜನಿಕ ಪ್ರವೇಶ ದ್ವಾರಗಳಲ್ಲಿ ಅಳವಡಿಸಲಾಗಿರುವ ಗೇಟ್‌ಗಳ ಗುಣಮಟ್ಟವನ್ನು ತುರ್ತಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಎಲ್ಲ ಮುಖ್ಯ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಸೂಚಿಸಿದ್ದಾರೆ.

ಗೇಟ್‌ಗಳ ಚಿತ್ರ ಹಾಗೂ ಜಿಪಿಎಸ್‌ ಮಾಹಿತಿಯೊಂದಿಗಿನ ವರದಿಯನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಮಂಗಳವಾರ ಆದೇಶಿಸಲಾಗಿದೆ.

ಗೇಟ್ ದುರಂತ: ಬಾಲಕನ ಕುಟುಂಬಕ್ಕೆ ₹5 ಲಕ್ಷ

ADVERTISEMENT

ಬೆಂಗಳೂರು: ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಕಬ್ಬಿಣದ ಗೇಟ್‌ ಬಿದ್ದು ಮೃತಪಟ್ಟ ಬಾಲಕ ನಿರಂಜನ್‌ ಅವರ ಕುಟುಂಬಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಾಮಗಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿರುವ ಸಹಾಯಕ ಎಂಜಿನಿಯರ್ ಶ್ರೀನಿವಾಸ್ ರಾಜು ಅವರನ್ನು ಅಮಾನತು ಮಾಡಲಾಗಿದೆ. ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಕೆ. ಶಾಂತಲಾ, ದೇವರಾಜು, ಬೇಬಿ ಆಯೇಷಾ ಹುಸೇನ್ ಅವರನ್ನು ಅಮಾನತುಗೊಳಿಸಲು ಸೂಚಿಸಲಾಗಿದೆ. ಅಲ್ಲದೆ, ಕಾರ್ಯಪಾಲಕ ಎಂಜಿನಿಯರ್‌ ಎಲ್.ವೆಂಕಟೇಶ್ ಅವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ಶಿವಕುಮಾರ್‌ ತಿಳಿಸಿದ್ದಾರೆ.

ಆಟದ ಮೈದಾನದ ಸಂಪೂರ್ಣ ಕಾಮಗಾರಿಯ ಕುರಿತು ತನಿಖೆ ನಡೆಸಲು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಒಂದು ವಾರದೊಳಗೆ ಪರಿಶೀಲಿಸಿ, ಸಂಪೂರ್ಣ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.