ADVERTISEMENT

ಬೆಂಗಳೂರು: ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿಗೆ ಸೂಚನೆ

ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಮಹೇಶ್ವರ್‌ ರಾವ್‌ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 15:42 IST
Last Updated 14 ಜುಲೈ 2025, 15:42 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಪ್ರಮುಖ ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಗರದಲ್ಲಿ ಈಗಾಗಲೇ ಹಲವಾರು ಜಂಕ್ಷನ್‌ಗಳ ಅಭಿವೃದ್ಧಿ ನಡೆಯುತ್ತಿದೆ. ಎಲ್ಲ ಜಂಕ್ಷನ್‌ಗಳ ಅಭಿವೃದ್ಧಿಗೂ ಸಮಗ್ರ ಯೋಜನೆ ರೂಪಿಸಿ’ ಎಂದರು.

ನಗರದಲ್ಲಿ 53 ಪ್ರವಾಹ ಪೀಡಿತ ಪ್ರದೇಶಗಳಿದ್ದು, ನಾಲ್ಕು ಕಡೆ ಸಮಸ್ಯೆ ಬಗೆಹರಿದಿದೆ. 49 ಕಡೆ ಸಮಸ್ಯೆ ಬಗೆಹರಿಸಬೇಕಿದ್ದು, ವಿಶ್ವಬ್ಯಾಂಕ್‌ ಅನುದಾನದಿಂದ 22 ಪ್ರದೇಶಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲಿಯೂ ಯಾವುದೇ ರೀತಿಯ ಸಮಸ್ಯೆ ಆಗದಂತೆ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ADVERTISEMENT

‘ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡುವವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನಕ್ಷೆಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಪತ್ರ ಪಡೆದು ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಮನವಿ ಮಾಡಿ’ ಎಂದರು.

‘ರಸ್ತೆಗಳು, ಮೇಲ್ಸೇತುವೆ, ಕೆಳಸೇತುವೆ ಸೇರಿದಂತೆ ಇನ್ನಿತರೆ ಯೋಜನೆಗಳಿಗಾಗಿ ಟಿಡಿಆರ್ ನೀಡಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿರುವ ಕುರಿತು ಆಯಾ ವಲಯಗಳಿಂದ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಭೂಸ್ವಾಧೀನದ ಅಗತ್ಯವಿದೆಯೋ ಅದನ್ನು ಪಟ್ಟಿ ಮಾಡಿಕೊಂಡು ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಿ, ಜಾಗವನ್ನು ಸ್ವಾಧೀನಪಡಿಸಿಕೊಂಡು ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಗುಂಡಿ ಮುಚ್ಚಿ: ನಗರದಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಿ ಇತ್ಯರ್ಥಪಡಿಸಬೇಕು. ಮುಖ್ಯರಸ್ತೆ ಹಾಗೂ ಉಪ ಮುಖ್ಯರಸ್ತೆಗಳು ಗುಂಡಿಮುಕ್ತವಾಗಬೇಕು. ಪಾದಚಾರಿಗಳ ಒತ್ತುವರಿ ತೆರವಾಗಬೇಕು ಎಂದು ಆದೇಶಿಸಿದರು.

ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಕೆ. ಹರೀಶ್ ಕುಮಾರ್, ವಲಯ ಆಯುಕ್ತರಾದ ಸತೀಶ್, ಕರೀಗೌಡ, ರಮ್ಯಾ, ರಮೇಶ್, ಸ್ನೇಹಲ್, ದಿಗ್ವಿಜಯ್ ಬೋಡ್ಕೆ ಉಪಸ್ಥಿತರಿದ್ದರು.

₹2966 ಕೋಟಿ ತೆರಿಗೆ ಸಂಗ್ರಹ:

‘2025-26ನೇ ಸಾಲಿನಲ್ಲಿ ₹6256 ಕೋಟಿ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿದ್ದು ಇದುವರೆಗೆ ₹2966 ಕೋಟಿ ಸಂಗ್ರಹಿಸಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದರು. ‘ಪಾಲಿಕೆಯ 8 ವಲಯಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಗಮನ ನೀಡಬೇಕು. ಜೊತೆಗೆ ಹೊಸ ಇ-ಖಾತಾ ವಿತರಣೆಗೆ ಆದ್ಯತೆ ನೀಡಿ ಮೇಲ್ವಿಚಾರಣೆ ಮಾಡಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಬರಲಿದೆ’ ಎಂದು ವಲಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.