ADVERTISEMENT

ತೆರಿಗೆ ಹೊರೆ ಹೆಚ್ಚಿಸಲು ಬಿಬಿಎಂಪಿ ನಿರ್ಣಯ

ಶೇ 2ರಷ್ಟು ನಗರ ಭೂ ಸಾರಿಗೆ ಸೆಸ್‌ ಸಂಗ್ರಹಕ್ಕೆ ಕೌನ್ಸಿಲ್‌ನಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 19:45 IST
Last Updated 28 ಜನವರಿ 2020, 19:45 IST
ಆಡಳಿತ ಪಕ್ಷದ ನಾಯಕ ಕೆ.ಎಂ.ಮುನೀಂದ್ರ ಕುಮಾರ್‌ (ಬಲದಿಂದ ಎರಡನೆಯವರು) ಅವರು ಮಂಡಿಸಿದ ನಿರ್ಣಯವನ್ನು ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಅನುಮೋದಿಸುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹಾಗೂ ಕಾಂಗ್ರೆಸ್‌ ಸದಸ್ಯೆ ಜಿ.ಪದ್ಮಾವತಿ ಎದ್ದುನಿಂತು ವಿರೋಧ ವ್ಯಕ್ತಪಡಿಸಿದರು ಪ್ರಜಾವಾಣಿ ಚಿತ್ರ
ಆಡಳಿತ ಪಕ್ಷದ ನಾಯಕ ಕೆ.ಎಂ.ಮುನೀಂದ್ರ ಕುಮಾರ್‌ (ಬಲದಿಂದ ಎರಡನೆಯವರು) ಅವರು ಮಂಡಿಸಿದ ನಿರ್ಣಯವನ್ನು ಬಿಜೆಪಿ ಸದಸ್ಯ ಪದ್ಮನಾಭ ರೆಡ್ಡಿ ಅನುಮೋದಿಸುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹಾಗೂ ಕಾಂಗ್ರೆಸ್‌ ಸದಸ್ಯೆ ಜಿ.ಪದ್ಮಾವತಿ ಎದ್ದುನಿಂತು ವಿರೋಧ ವ್ಯಕ್ತಪಡಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿಗೆ ಆಸ್ತಿ ತೆರಿಗೆ ಪಾವತಿಸುತ್ತಿದ್ದೀರಾ. ಹಾಗಾದರೆ ಇನ್ನು ಮುಂದೆ ನೀವು ಆಸ್ತಿ ತೆರಿಗೆ ಜೊತೆಗೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನೂ (ಸೆಸ್‌) ಸೇರಿಸಿ ಪಾವತಿಸಬೇಕಾಗುತ್ತದೆ.

ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸದ್ಯ ಆಸ್ತಿ ತೆರಿಗೆಯ ಜೊತೆ ಗ್ರಂಥಾಲಯ ಸೆಸ್‌ (ತೆರಿಗೆಯ ಶೇ 6ರಷ್ಟು), ಭಿಕ್ಷುಕರ ಪುನರ್ವಸತಿ ಸೆಸ್ (ತೆರಿಗೆಯ ಶೇ 3ರಷ್ಟು), ಕಸ ನಿರ್ವಹಣೆ ಸೆಸ್‌, ಆರೋಗ್ಯ ಸೆಸ್‌ ಹಾಗೂ ಕಾರ್ಮಿಕ ಕಲ್ಯಾಣ ಸೆಸ್‌ಗಳು ಸೇರಿದಂತೆ ಶೇ 24ರಷ್ಟು ಉಪಕರ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ನಗರ ಭೂಸಾರಿಗೆ ಸೆಸ್‌ ಕೂಡಾ ಸೇರಿದರೆ ಇದರ ಪ್ರಮಾಣವು ಶೇ 26ಕ್ಕೆ ಹೆಚ್ಚಲಿದೆ ಎಂದು ಪಾಲಿಕೆಯ ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸಿದರು.

2013ರಲ್ಲಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದ ಸರ್ಕಾರ, ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ನಗರ ಭೂಸಾರಿಗೆ ಸೆಸ್‌ ವಸೂಲಿ ಮಾಡಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ಈ ಸೆಸ್‌ ಸಂಗ್ರಹದ ಬಗ್ಗೆ ನಗರ ಭೂಸಾರಿಗೆ ಇಲಾಖೆಗೆ ತ್ರೈಮಾಸಿಕ ವರದಿ ಸಲ್ಲಿಸಬೇಕು ಎಂದು ಸರ್ಕಾರ ಆದೇಶ ಮಾಡಿತ್ತು.

ADVERTISEMENT

ಈ ಸೆಸ್‌ ವಿಧಿಸುವುದರಿಂದ ನಗರದ ಆಸ್ತಿ ತೆರಿಗೆದಾರರಿಗೆ ಹೆಚ್ಚಿನ ಹೊರೆಯಾಗುತ್ತದೆ. ಹಾಗಾಗಿ ಈ ಆದೇಶವನ್ನು ಹಿಂಪಡೆಯಬೇಕು ಎಂದು 2014ರ ಮೇ 28ರಂದು ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಿರ್ಣಯಕ್ಕೆ ಅನುಮೋದನೆ ಕೋರಿ ಕುರಿತು ಪಾಲಿಕೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ತಿರಸ್ಕರಿಸಿದ್ದರು. ಅಲ್ಲದೇ ಸೆಸ್‌ ಸಂಗ್ರಹಿಸಲು ಕ್ರಮವಹಿಸುವಂತೆ ಸೂಚಿಸಿದ್ದರು.

ಸೆಸ್‌ ಸಂಗ್ರಹಿಸದ ಕಾರಣ ರಾಜಸ್ವ ನಷ್ಟ ಉಂಟಾಗಿದೆ ಎಂದು ಮಹಾಲೇಖಪಾಲರ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಹಾಗಾಗಿ ಈ ಸೆಸ್‌ ಸಂಗ್ರಹಿಸುವ ಬಗ್ಗೆ ಪಾಲಿಕೆ ಆಯುಕ್ತರು ಪ್ರತಿ ಕೌನ್ಸಿಲ್‌ ಸಭೆಯಲ್ಲೂ ಈ ಪ್ರಸ್ತಾವನೆಯನ್ನು ಮಂಡಿಸುತ್ತಿದ್ದರು. ಆದರೆ, ಕಾಂಗ್ರೆಸ್– ಜೆಡಿಎಸ್‌ ಮೈತ್ರಿಕೂಟದ ಆಡಳಿತದ ಅವಧಿಯಲ್ಲಿ ಈ ಪ್ರಸ್ತಾವವನ್ನು ಮುಂದೂಡುತ್ತಲೇ ಬರಲಾಗಿತ್ತು. ಈ ಸೆಸ್‌ ವಿಧಿಸುವುದರಿಂದ ತೆರಿಗೆದಾರರಿಗೆ ಹೊರೆಯಾಗುತ್ತದೆ ಎಂದು ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಪ್ರತಿಪಾದಿಸಿತ್ತು.

ಸೆಸ್‌ ಸಂಗ್ರಹ ಯಾವ ಆರ್ಥಿಕ ವರ್ಷದಿಂದ ಜಾರಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ‘ಈ ಬಗ್ಗೆ ಇನ್ನೂ ಸೂಚನೆ ಬಂದಿಲ್ಲ’ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಸೆಸ್‌ಗೆ ಕಾಂಗ್ರೆಸ್‌ ವಿರೋಧ

ಪಾಲಿಕೆಯ ವಿರೋಧ ಪಕ್ಷವಾದ ಕಾಂಗ್ರೆಸ್‌ ನಗರ ಭೂಸಾರಿಗೆ ಸೆಸ್‌ ಸಂಗ್ರಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ತೆರಿಗೆದಾರರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ನಾವು ನಗರ ಭೂಸಾರಿಗೆ ಸೆಸ್‌ ಸಂಗ್ರಹಿಸುವುದಿಲ್ಲ ಎಂದು 2013–14ನೇ ಸಾಲಿನಲ್ಲೇ ಕೌನ್ಸಿಲ್‌ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದೆವು. ಬಿಜೆಪಿಯವರೂ ವಿರೋಧ ಪಕ್ಷದಲ್ಲಿದ್ದಾಗ ಈ ಸೆಸ್‌ ಸಂಗ್ರಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆಡಳಿತಕ್ಕೆ ಬಂದ ಬಳಿಕ ಚರ್ಚೆಗೆ ಅವಕಾಶ ನೀಡದೆಯೇ ಸೆಸ್‌ ಸಂಗ್ರಹಿಸುವ ತೀರ್ಮಾನ ಕೈಗೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಪ್ರಶ್ನಿಸಿದರು.

***

ಜನರಿಗೆ ತೆರಿಗೆ ಹೊರೆ ಹೆಚ್ಚಿಸಲು ನಾವು ಅವಕಾಶ ನೀಡುವುದಿಲ್ಲ. ನಗರ ಭೂಸಾರಿಗೆ ಸೆಸ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ. ಕೌನ್ಸಿಲ್‌ ಸಭೆಯಲ್ಲಿ ಮೇಯರ್ ಪೀಠದ ಎದುರು ಧರಣಿ ನಡೆಸುತ್ತೇವೆ

– ಅಬ್ದುಲ್‌ ವಾಜಿದ್‌, ವಿರೋಧ ಪಕ್ಷದ ನಾಯಕ

***

‘ಸೆಸ್‌ ಮೊತ್ತವನ್ನು ಪಾಲಿಕೆಯೇ ಬಳಸಲಿದೆ’

‘ಸೆಸ್‌ ರೂಪದಲ್ಲಿ ವರ್ಷಕ್ಕೆ ಸುಮಾರು ₹ 150 ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ಮೊತ್ತವನ್ನು ನಾವು ನಗರ ಭೂಸಾರಿಗೆ ಇಲಾಖೆಗೆ ನೀಡುವುದಿಲ್ಲ. ಅದನ್ನು ಪಾಲಿಕೆಯೇ ಬಳಸಿಕೊಳ್ಳಲಿದೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಗಣರಾಜ್ಯೋತ್ಸವ ಗೈರು–ಒಂದು ದಿನದ ಸಂಬಳ ಕಟ್‌

ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವಕ್ಕೆ ಗೈರಾದ ಅಧಿಕಾರಿಗಳ ಒಂದು ದಿನದ ಸಂಬಳಕ್ಕೆ ಕತ್ತರಿ ಹಾಕುವಂತೆ ಮೇಯರ್‌ ಗೌತಮ್‌ ಕುಮಾರ್‌ ಸೂಚನೆ ನೀಡಿದ್ದಾರೆ.

ರಾಷ್ಟ್ರಧ್ವಜಕ್ಕೆ ನಮಸ್ಕರಿಸುವ ಅವಕಾಶ ವರ್ಷದಲ್ಲಿ ಎರಡು ಮೂರು ಬಾರಿ ಮಾತ್ರ ಸಿಗುತ್ತದೆ. ಪಾಲಿಕೆ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಭಾಗವಹಿಸಬೇಕು ಎಂದು ಆಯುಕ್ತಬಿ.ಎಚ್‌.ಅನಿಲ್‌ ಕುಮಾರ್‌ ಸೂಚನೆ ನೀಡಿದ್ದರು. ಆದರೂ ಐದಾರು ಜನ ಮಾತ್ರ ಭಾಗವಹಿಸಿದ್ದಾರೆ. ಇದು ಅವಮಾನದ ವಿಷಯ. ಶಾಲೆಗಳಿಂದ ವಿದ್ಯಾರ್ಥಿಗಳನ್ನು ಕರೆಸಿ ಜನರನ್ನು ಸೇರಿಸುವ ಅಗತ್ಯ ನಮಗಿಲ್ಲ. ರಾಷ್ಟ್ರಧ್ವಜಕ್ಕೆ ಮರ್ಯಾದೆ ಪೂರ್ವಕಾಗಿ ನಮಸ್ಕರಿಸಲು ಬಾರದ ಅಧಿಕಾರಿಗಳು ಕೆಲಸದ ಬಗ್ಗೆ ಹೇಗೆ ಶ್ರದ್ಧೆ ತೋರಿಸಬಲ್ಲರು. ಹಾಗಾಗಿ ಅವರ ಒಂದು ದಿನದ ಸಂಬಳ ಕತ್ತರಿಸುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಮೇಯರ್‌ ಸುದ್ದಿಗಾರರಿಗೆ ತಿಳಿಸಿದರು.

‘ಗಣರಾಜ್ಯೋತ್ಸವಕ್ಕೆ ಗೈರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವಾಗ ‘ದೇಶದ್ರೋಹಿಗಳು’ ಎಂಬ ಶಬ್ದ ಬಳಸಿದ್ದೆ. ಆ ಪದವನ್ನು ಹಿಂದಕ್ಕೆ ಹಿಂಪಡೆಯುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.