ADVERTISEMENT

ಬೆಂಗಳೂರು: ₹1.47 ಕೋಟಿ ಆಸ್ತಿ ತೆರಿಗೆ ವಂಚನೆ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 19:06 IST
Last Updated 17 ಜೂನ್ 2022, 19:06 IST
   

ಬೆಂಗಳೂರು: ಆಸ್ತಿ ತೆರಿಗೆ ವಂಚನೆ ತಡೆಯಲು ಬೆಸ್ಕಾಂ ಸಹಕಾರ ಪಡೆಯಲಾಗುತ್ತಿದ್ದು, ಇದರಿಂದ ₹1.47 ಕೋಟಿ ತೆರಿಗೆ ವಂಚನೆಯನ್ನು ಪತ್ತೆ ಮಾಡಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಕಂದಾಯ) ಆರ್.ಎಲ್‌. ದೀಪಕ್‌ ತಿಳಿಸಿದರು.

‘ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡುತ್ತಿದ್ದು, ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆಯೇ ಎಂದು ಪರಿಶೀಲಿಸಿದಾಗ 46 ಆಸ್ತಿಗಳ ಮಾಲೀಕರು ತಪ್ಪು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಜಕ್ಕಸಂದ್ರ ಮತ್ತು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಪ್ರಾಯೋಗಿಕವಾಗಿ ಬೆಸ್ಕಾಂನಿಂದ ಮಾಹಿತಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡ್‌ಗಳಿಗೂ ಈ ಪ್ರಕ್ರಿಯೆ ವಿಸ್ತರಿಸಲಾಗುವುದು. ತೆರಿಗೆ ವಂಚಿಸಿದ ಆಸ್ತಿ ಮಾಲೀಕರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ವಂಚಿಸಿದವರಿಗೆ ದಂಡ ವಿಧಿಸಲಾಗುವುದು’ ಎಂದರು.

ADVERTISEMENT

‘ಆರ್ಥಿಕ ವರ್ಷಾಂತ್ಯಕ್ಕೆ ₹5,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿದ್ದು, ಈವರೆಗೆ ₹2,099 ಕೋಟಿ ಸಂಗ್ರಹಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹1,399 ಕೋಟಿ ಸಂಗ್ರಹಿಸಲಾಗಿತ್ತು. ಡ್ರೋನ್ ಸರ್ವೆ ನಡೆಸಿ ತೆರಿಗೆ ವಂಚಿಸುತ್ತಿದ್ದ ಆಸ್ತಿಗಳನ್ನು ಪತ್ತೆ ಮಾಡಲಾಗಿತ್ತು. ತೆರಿಗೆಯಿಂದ ಹೊರಗುಳಿದಿದ್ದ ಹಲವು ಆಸ್ತಿಗಳನ್ನು ಸೇರ್ಪಡೆ ಮಾಡಿಕೊಂಡಿರುವುದರಿಂದ ತೆರಿಗೆ ಸಂಗ್ರಹ ಹೆಚ್ಚಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.