ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ₹750 ಕೋಟಿಗೂ ಹೆಚ್ಚು ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ 1.07 ಲಕ್ಷ ಆಸ್ತಿಗಳ ಮಾಲೀಕರು ಪ್ರಯೋಜನ ಪಡೆದುಕೊಂಡಿದ್ದು, ₹217.50 ಕೋಟಿ ಪಾವತಿಸಿದ್ದಾರೆ. 6,723 ಆಸ್ತಿಗಳ ತೆರಿಗೆಯನ್ನು ಪುನರ್ ವಿಮರ್ಶೆ ಮಾಡಿದ್ದರಿಂದ, ಈ ಬಾಬ್ತಿನಲ್ಲಿ ₹163.13 ಕೋಟಿ ಸಂದಾಯವಾಗಿದೆ. ಇನ್ನುಳಿದಂತೆ, ಜುಲೈ 31ರವರೆಗಿದ್ದ ಶೇ 5ರಷ್ಟು ರಿಯಾಯಿತಿಯನ್ನು ಬಳಸಿಕೊಂಡು ಆಸ್ತಿ ಮಾಲೀಕರು ತೆರಿಗೆ ಪಾವತಿ ಮಾಡಿದ್ದಾರೆ ಎಂದು ಸುದ್ದಿಗಾರರಿಗೆ ಗುರುವಾರ ಮಾಹಿತಿ ನೀಡಿದರು.
ಒಟಿಎಸ್ ಯೋಜನೆಯಡಿ ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ಇತ್ತು. ಇದೀಗ ಯೋಜನೆ ಮುಗಿದಿದ್ದು, ಬಾಕಿಯಿರುವ ವರ್ಷದಿಂದ ಬಡ್ಡಿ, ದಂಡ ವಿಧಿಸಲಾಗುತ್ತದೆ. ತೆರಿಗೆ ಪಾವತಿಸದವರಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಆಸ್ತಿ ತೆರಿಗೆ ಪಾವತಿಸದವರಿಗೆ ನೋಟಿಸ್ ನೀಡಿ, ಚರಾಸ್ತಿ, ಸ್ಥಿರಾಸ್ತಿಯನ್ನು ಜಪ್ತಿ ಮಾಡುವ ಅವಕಾಶವಿದೆ. ಕಾನೂನುಗಳು ತಿದ್ದುಪಡಿಯಾಗಿರುವುದರಿಂದ ಆಸ್ತಿ ಮಾರಾಟ, ಹರಾಜಿಗೂ ಅವಕಾಶ ಇದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ವಿಸ್ತರಣೆಗೆ ಪ್ರಸ್ತಾವ
‘ಒಟಿಎಸ್ ಯೋಜನೆಯ ಕೊನೆಯಾಗುವ ಎರಡು ದಿನಗಳಲ್ಲಿ ಸಾಕಷ್ಟು ಜನರು ಸಾಲುಗಟ್ಟಿ ತೆರಿಗೆ ಪಾವತಿಸಿದ್ದಾರೆ. ಸರ್ವರ್ ಸಮಸ್ಯೆ ಇದ್ದು, ಅದನ್ನೂ ಪರಿಗಣಿಸಲಾಗುತ್ತಿದೆ. ಹಲವು ಸಂಘ–ಸಂಸ್ಥೆಗಳು, ನಿವಾಸಿಗಳ ಸಂಘದವರು ಒಟಿಎಸ್ ವಿಸ್ತರಿಸಲು ಮನವಿ ಮಾಡಿದ್ದಾರೆ. ಕಂದಾಯ ವಿಭಾಗದಿಂದ ವರದಿ ಪಡೆದು, ಅದರ ಆಧಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಮುಖ್ಯ ಆಯುಕ್ತರು ತಿಳಿಸಿದರು.
₹1,200 ಕೋಟಿ
‘ಜುಲೈ ಎರಡನೇ ವಾರದ ನಂತರವೇ ಸಮಾರು ₹1,200 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿವೆ. ಕೊನೆಯ ದಿನಗಳಲ್ಲಿ ಆನ್‌ಲೈನ್ ಅಲ್ಲದೆ ಡಿ.ಡಿ ಹಾಗೂ ಚೆಕ್‌ಗಳ ರೂಪದಲ್ಲಿಯೂ ಸುಮಾರು ₹150 ಕೋಟಿ ಆಸ್ತಿ ತೆರಿಗೆಯನ್ನು ಸಂದಾಯ ಮಾಡಲಾಗಿದೆ. ಇದೆಲ್ಲ ಮೊತ್ತವನ್ನೂ ಕ್ರೋಡೀಕರಿಸಲಾಗುತ್ತಿದೆ. ಇದೆಲ್ಲದರ ಮಾಹಿತಿ ಇನ್ನೆರಡು ದಿನದಲ್ಲಿ ಲಭ್ಯವಾಗಲಿದ್ದು, ನಂತರ ಸ್ಪಷ್ಟ ಮೊತ್ತದ ಲೆಕ್ಕ ಸಿಗಲಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
‘ಪ್ರವೇಶ ನಿರಾಕರಿಸಿದರೆ ಪರವಾನಗಿ ರದ್ದು’
ಬೆಂಗಳೂರು: ನಾಗರಿಕರ ಪ್ರವೇಶ ನಿರಾಕರಿಸುವ ಮಾಲ್, ವಾಣಿಜ್ಯ ಸಂಕೀರ್ಣಗಳ ವ್ಯಾಪಾರ
ಪರವಾನಗಿಯನ್ನು ರದ್ದು ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಗುರುವಾರ ಕಚೇರಿ ಆದೇಶ ಹೊರಡಿಸಿರುವ ಅವರು, ‘ಭಾಷೆ, ಜಾತಿ, ಧರ್ಮ, ಉಡುಪು ಆಧರಿತವಾಗಿ ಮಾಲ್ ಅಥವಾ ವಾಣಿಜ್ಯ ಸಂಕೀರ್ಣಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ’ ಎಂದು ತಿಳಿಸಿದ್ದಾರೆ.
ಮಾಗಡಿ ರಸ್ತೆಯ ಜಿ.ಟಿ. ವರ್ಲ್ಡ್ ಮಾಲ್‌ಗೆ ಪಂಚೆ ಧರಿಸಿದ್ದ ರೈತರಿಗೆ ಪ್ರವೇಶ ನಿರಾಕರಿಸಿದ್ದರಿಂದ ಈ ಆದೇಶ ಹೊರಬಿದ್ದಿದೆ.
‘ವ್ಯಾಪಾರ ಪರವಾನಗಿ ರದ್ದುಗೊಳಿಸಿ, ಭಾರತೀಯ ನ್ಯಾಯ ಸಂಹಿತೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಳಿಗೆ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿನ ಶುಚಿತ್ವದ ಮೇಲೆ ನಿಗಾವಹಿಸಲು ಆದೇಶಿಸಲಾಗಿದೆ’ ಎಂದು
ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.
‘ಗ್ರಾಹಕರ ಜೊತೆ ಉತ್ತಮವಾಗಿ ನಡೆದುಕೊಳ್ಳಬೇಕು ಹಾಗೂ ಅವಮಾನಕರ ರೀತಿಯಲ್ಲಿ ಮಾತನಾಡಬಾರದು ಎಂದು ಭದ್ರತಾ ಸಿಬ್ಬಂದಿಗೆ ಮಾಲ್‌ಗಳ ಮಾಲೀಕರು ಹಾಗೂ ನಿರ್ವಹಣೆಗಾರರು ಸೂಕ್ತ ರೀತಿಯಲ್ಲಿ ಸೂಚನೆ ನೀಡಿರಬೇಕು’ ಎಂದು
ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.