ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಾಳಿ ಮಳೆ ಮುನ್ಸೂಚನೆ ಸಂದೇಶ

ಅತಿವೃಷ್ಟಿ ಅನಾಹುತ ತಪ್ಪಿಸಲು ಮುನ್ನೆಚ್ಚರಿಕೆ– ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 21:10 IST
Last Updated 1 ಜೂನ್ 2020, 21:10 IST
ಮಳೆಗಾಲಕ್ಕೂ ಮುನ್ನ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮದ ಅಂಗವಾಗಿ ನಗರದ ಪುರಭವನದ ಮುಂಭಾಗದಲ್ಲಿ ಬಿಬಿಎಂಪಿ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸೋಮವಾರ ಬೋಟ್‌ ಹಾಗೂ ವಿವಿಧ ಉಪಕರಣಗಳನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಮಳೆಗಾಲಕ್ಕೂ ಮುನ್ನ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮದ ಅಂಗವಾಗಿ ನಗರದ ಪುರಭವನದ ಮುಂಭಾಗದಲ್ಲಿ ಬಿಬಿಎಂಪಿ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸೋಮವಾರ ಬೋಟ್‌ ಹಾಗೂ ವಿವಿಧ ಉಪಕರಣಗಳನ್ನು ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಬೀಳಲಿದೆ, ಮಳೆ ಬಂದಾಗ ಯಾವ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ, ಗಾಳಿಯ ವೇಗ ಎಷ್ಟು ಪ್ರಮಾಣದಲ್ಲಿ ಇರಲಿದೆ, ಯಾವ ಪ್ರದೇಶದ ಜನ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಅನಾಹುತ ನಡೆಯದಂತೆ ತಡೆಯಲು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮೇಯರ್ ಎಂ.ಗೌತಮ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಮಳೆ ಅನಾಹುತ ತಪ್ಪಿಸಲು ಪ್ರತಿ ಕಂದಾಯ ವಿಭಾಗಕ್ಕೊಂದು ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಬಿಬಿಎಂಪಿ, ಅರಣ್ಯ ಇಲಾಖೆ, ಬೆಸ್ಕಾಂ, ಜಲಮಂಡಳಿ, ಸಂಚಾರ ಪೊಲೀಸ್ ಇಲಾಖೆ ಸಿಬ್ಬಂದಿ ಇರುತ್ತಾರೆ. ನಗರದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ, ಎಲ್ಲೆಲ್ಲಿ ಎಚ್ಚರಿಕೆ ವಹಿಸಬೇಕು ಎಂಬ ಕುರಿತು ಕಂದಾಯ ಇಲಾಖೆಯಿಂದ ನೇರ ಸಂದೇಶ ಕಳುಹಿಸುವ ವ್ಯವಸ್ಥೆಯೂ ಜಾರಿಗೆ ಬರಲಿದೆ’ ಎಂದರು.

ADVERTISEMENT

‘ನಗರದಲ್ಲಿ 210 ಪ್ರವಾಹ ಸಂಭವಿಸಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದೆ. 21 ರಾಜಕಾಲುವೆಗಳಲ್ಲಿ ಸೆನ್ಸರ್ ಅಳವಡಿಸಲಾಗಿದ್ದು, ಇಲ್ಲಿ ಶೇ 75ರಷ್ಟು ನೀರು ತುಂಬಿದಾಗ ಸಂಬಂಧಪಟ್ಟವರಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಇದರ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಪ್ರವಾಹ ಉಂಟಾಗುವ ಪ್ರಮುಖ ಪ್ರದೇಶಗಳಲ್ಲಿ ಇನ್ನಷ್ಟು ಸೆನ್ಸರ್‌ಗಳನ್ನು ಅಳವಡಿಸುವ ಚಿಂತನೆ ಇದೆ' ಎಂದು ತಿಳಿಸಿದರು.

‘ಮರಗಳು ಬಿದ್ದ ಕಡೆ ಪೊಲೀಸ್ ಸಿಬ್ಬಂದಿ ಕೂಡಲೇ ಬ್ಯಾರಿಕೇಡ್ ಅಳವಡಿಸಬೇಕು. ವಿದ್ಯುತ್ ತಂತಿ ನೆಲಕ್ಕೆ ಬಿದ್ದು ಅವಘಡ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಅಗತ್ಯ’ ಎಂದರು.

‘ಪೌರ ರಕ್ಷಣಾ ವಿಭಾಗದಿಂದ 500 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರ ವೆಚ್ಚವನ್ನು ಪಾಲಿಕೆ ಭರಿಸಲಿದೆ.ರಾತ್ರಿ ವೇಳೆ ರಸ್ತೆಗೆ ಬಿಟ್ಟ ಮರ ತೆರವುಗೊಳಿಸಲು ಹೊನಲು ಬೆಳಕಿನ (ಫ್ಲಡ್‌ ಲೈಟ್‌) ವ್ಯವಸ್ಥೆ ಮಾಡಲಾಗುತ್ತದೆ’ ಎಂದರು.

ರಾಜಕಾಲುವೆ‌ ಹೂಳು ತೆರವು: ರಾಜಕಾಲುವೆಗಳಲ್ಲಿ ತುಂಬಿರುವ ಹೂಳನ್ನು ನಿರಂತರವಾಗಿ ತೆರವುಗೊಳಿಸಲಾಗುತ್ತಿದೆ. ಬೊಮ್ಮನಹಳ್ಳಿ ವಲಯದ ವ್ಯಾಪ್ತಿಯ ಅಗರ ಕೆರೆ ಹಾಗೂ ಜಕ್ಕಸಂದ್ರ ಬಳಿ ರಾಜಕಾಲುವೆಯಲ್ಲಿ ಸೋಮವಾರ ಹೂಳು ತೆರವುಗೊಳಿಸಲಾಯಿತು.

ದುರಸ್ತಿ ಸಲುವಾಗಿ ತೆರೆದ ಒಳಚರಂಡಿಗಳನ್ನು ಕೂಡಲೆ ಮುಚ್ಚುವಂತೆ ಜಲಮಂಡಳಿ ಅಧಿಕಾರಿಗಳಿಗೆ ಅಶೋಕ ನಿರ್ದೇಶನ ನೀಡಿದರು.

ಅವಶ್ಯಕ ಪರಿಕರಗಳ ಪ್ರದರ್ಶನ: ಮಳೆಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಬಳಸುವ ಅವಶ್ಯಕ ಸಾಮಗ್ರಿಗಳು, ಹೈ ಪ್ರೆಷರ್ ಪಂಪ್, ಅಗ್ನಿಶಾಮಕ ವಾಹನ, ಲೈಫ್ ಬೋಟ್, ಲೈಫ್ ಜಾಕೆಟ್ ಸೇರಿದಂತೆ ಇನ್ನಿತರೆ ಅವಶ್ಯಕ ಸಾಮಗ್ರಿಗಳನ್ನು ಪುರಭವನದ ಬಳಿ ಪ್ರದರ್ಶಿಸಲಾಯಿತು ಪಾಲಿಕೆ ಮತ್ತು ಅಗ್ನಿಶಾಮಕ ಇಲಾಖೆಯ ಮರಗಳನ್ನು ತೆರವುಗೊಳಿಸುವ ತಂಡಗಳು ಪಾಲ್ಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.