ADVERTISEMENT

ಮಳೆಗಾಲದಲ್ಲಿ ಹೆಚ್ಚುವರಿ ರಜೆ ಪಡೆವಂತಿಲ್ಲ

ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಆದೇಶ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:03 IST
Last Updated 11 ಆಗಸ್ಟ್ 2019, 20:03 IST
ಎನ್‌.ಮಂಜುನಾಥ್‌ ಪ್ರಸಾದ್‌
ಎನ್‌.ಮಂಜುನಾಥ್‌ ಪ್ರಸಾದ್‌   

ಬೆಂಗಳೂರು: ‘ಮಳೆಗಾಲ ಮುಗಿಯುವವರೆಗೆ ಪಾಲಿಕೆ ಅಧಿಕಾರಿಗಳು ಹೆಚ್ಚುವರಿ ರಜೆ ಪಡೆಯುವಂತಿಲ್ಲ. ತೀರಾ ತುರ್ತು ಸಂದರ್ಭದಲ್ಲಷ್ಟೇ ನನ್ನ ಅನುಮತಿ ಪಡೆದು ರಜೆ ಪಡೆಯಬಹುದು’ ಎಂದು ಪಾಲಿಕೆಯ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹೇಳಿದರು.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಸದಾ ಸಿದ್ಧರಾಗಿರಬೇಕು. ಹೀಗಾಗಿ, ಹೆಚ್ಚುವರಿ ರಜೆ ಹಾಗೂಎರಡು ಮತ್ತು ನಾಲ್ಕನೇ ಶನಿವಾರದ ರಜೆಯನ್ನು ರದ್ದು ಮಾಡಲಾಗಿದೆ’ ಎಂದರು.

‘ಸಿಬ್ಬಂದಿಗೆ ರಜೆ ನೀಡುವ ವಿಶೇಷ ಅಧಿಕಾರವನ್ನು ನನ್ನ ಹತೋಟಿಗೆ ತೆಗೆದುಕೊಂಡಿದ್ದೇನೆ. ಪಾಲಿಕೆ ಅಧಿಕಾರಿಗಳುದಿನದ 24 ಗಂಟೆಯೂ ಸೇವೆ ಒದಗಿಸಲು ಸಿದ್ಧರಿರಬೇಕು’ ಎಂದು ತಿಳಿಸಿದರು.

ADVERTISEMENT

‘ನಗರದ 184 ಕಿ.ಮೀ. ರಾಜಕಾಲುವೆಯನ್ನು ಸ್ವಚ್ಛಗೊಳಿಸಿದ್ದೇವೆ. 1,200 ಕಿ.ಮೀ. ಮುಖ್ಯರಸ್ತೆಗಳ ನಿರ್ವಹಣೆಗೆ 26 ತಂಡಗಳನ್ನು ನಿಯೋಜಿಸಲಾಗಿದೆ. ರಸ್ತೆಗಳ ಗುಂಡಿ ಮುಚ್ಚಲು ಪ್ರತಿ ವಾರ್ಡ್‌ಗೆ ₹20 ಲಕ್ಷ ಹಾಗೂ ಹೊರ ವಲಯದ ವಾರ್ಡ್‌ಗೆ ₹30 ಲಕ್ಷದಂತೆ ಒಟ್ಟು ₹46 ಕೋಟಿ ಅನುದಾನ ನೀಡಲಾಗಿದೆ’ ಎಂದರು.

‘ಇಲ್ಲಿಯವರೆಗೆ 4,443 ಡೆಂಗಿ ಪ್ರಕರಣಗಳು ದಾಖಲಾಗಿವೆ. 60 ವಾರ್ಡ್‌ಗಳಲ್ಲಿ 20ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ವಾರ್ಡ್‌ಗಳ ಮನೆಮನೆಗಳಿಗೆ ಭೇಟಿ ನೀಡಿ ಡೆಂಗಿ ಬಗ್ಗೆ ಅರಿವು ಮೂಡಿಸಲಾಗಿದೆ’ ಎಂದರು.

‘ಕಸ ವಿಲೇವಾರಿಗೆ ಬೆಳ್ಳಹಳ್ಳಿ ಕ್ವಾರಿಯಲ್ಲಿ ಇನ್ನೂ ಅವಕಾಶವಿದೆ. ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ ವಿಲೇವಾರಿ ಶೀಘ್ರವೇ ಆರಂಭವಾಗಲಿದೆ. ಇಂದಿರಾ ಕ್ಯಾಂಟೀನ್‌ ಟೆಂಡರ್‌ ಆಗಸ್ಟ್‌ 15ಕ್ಕೆ ಮುಕ್ತಾಯವಾಗಲಿದೆ. ಹೊಸ ಟೆಂಡರ್‌ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದರು.

ಪ್ರಾಣಿ ಬಲಿಗೆ ಪ್ರತ್ಯೇಕ ಸ್ಥಳ

‘ಬಕ್ರೀದ್‌ ಪ್ರಯುಕ್ತ ಪ್ರತಿ ವಾರ್ಡ್‌ನಲ್ಲೂ ಪ್ರಾಣಿಗಳ ಬಲಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಪ್ರಾಣಿಗಳ ತ್ಯಾಜ್ಯ ಸಂಗ್ರಹಣೆಗೆ ಒಂದು ಆಟೊ ರಿಕ್ಷಾ ನಿಯೋಜನೆ ಮಾಡಲಾಗಿದೆ. ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ನಗರದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧ ಮಾಡಲಾಗಿದೆ. ಕೆಲವೆಡೆ ಕಾರ್ಯಾಚರಣೆ ನಡೆಸಿ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.

*ನಾಲ್ವರು ವಿಶೇಷ ಆಯುಕ್ತರಿಗೆ ತಲಾ ಎರಡು ವಲಯಗಳ ಉಸ್ತುವಾರಿ ನೀಡಲಾಗಿದೆ. ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸಲಿದ್ದಾರೆ

- ಎನ್‌.ಮಂಜುನಾಥ್‌ ಪ್ರಸಾದ್‌, ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.