ಬೆಂಗಳೂರು: ಅಂತಿಮ ಆಯ್ಕೆ ಪಟ್ಟಿಯಲ್ಲಿರುವ ಪೌರ ಕಾರ್ಮಿಕರಿಗೆ ಮಾರ್ಚ್ ಅಂತ್ಯದೊಳಗೆ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಐ.ಪಿ.ಡಿ ಸಾಲಪ್ಪ ಅವರ ಜನ್ಮದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರ ಕಾರ್ಮಿಕರನ್ನು ಕಾಯಂ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದು, ಪೊಲೀಸ್ ತಪಾಸಣೆ ಹಾಗೂ ಮೀಸಲಾತಿ ಪ್ರಮಾಣ ಪತ್ರಗಳ ಸಿಂಧುತ್ವ ತಪಾಸಣೆ ನಡೆಯುತ್ತಿದೆ. ಇವೆಲ್ಲವನ್ನೂ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
‘ಐ.ಪಿ.ಡಿ ಸಾಲಪ್ಪ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಬಿನ್ನಿಪೇಟೆಯಿಂದ ಶಾಸಕರಾಗಿದ್ದ ಅವರು, ಪೌರ ಕಾರ್ಮಿಕರ ಜೀವನದ ಸ್ಥಿತಿಗತಿಗಳನ್ನು ಬಹಳ ಹತ್ತಿರದಿಂದ ಅರಿತಿದ್ದರು. ಸಾಲಪ್ಪನವರು 36 ಅಂಶಗಳ ವರದಿಯನ್ನು ಸರ್ಕಾರಕ್ಕೆ ನೀಡಿದರು. ಐ.ಪಿ.ಡಿ. ಸಾಲಪ್ಪ ವರದಿಯ ಅಧಾರದ ಮೇಲೆ ಪೌರಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ’ ಎಂದರು.
ನಾಗರಿಕರು ರಸ್ತೆ ಬದಿ ಕಸ ಬಿಸಾಡುತ್ತಾರೆ. ಅದನ್ನು ಪೌರಕಾರ್ಮಿಕರೇ ಸ್ವಚ್ಛಗೊಳಿಸಬೇಕಿದೆ. ಮನೆ-ಮನೆಯಿಂದ ಕಸ ಸಂಗ್ರಹಿಸುವ ಪದ್ದತಿ ಸರಿಯಾಗಿ ಜಾರಿಯಾದರೆ ಬಹುತೇಕ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು.
ಯಂತ್ರ ವಿತರಣೆ: ‘ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಪೌರ ಕಾರ್ಮಿಕರು ಇನ್ನೂ ಪೊರಕೆಯಿಂದಲೇ ಬೀದಿಗಳನ್ನು ಸ್ವಚ್ಛ ಮಾಡುತ್ತಿದ್ದಾರೆ. ಅದನ್ನು ನಾವು ಬದಲಿಸಲು ಮುಂದಾಗಿದ್ದೇವೆ. ಪೌರಕಾರ್ಮಿಕರಿಗೆ ಯಂತ್ರಗಳನ್ನು ನೀಡಲಾಗುತ್ತದೆ’ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ವಿಶೇಷ ಆಯುಕ್ತರಾದ ಕೆ. ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಉಪ ಆಯುಕ್ತ ಮಂಜುನಾಥ ಸ್ವಾಮಿ, ಜಂಟಿ ಆಯುಕ್ತರಾದ ಪ್ರತಿಭಾ, ಲಕ್ಷ್ಮಿದೇವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.