ADVERTISEMENT

ಕ್ರಿಸ್‌ಮಸ್‌, ಹೊಸ ವರ್ಷಾಚರಣೆ: ಕೋವಿಡ್‌ ನಿಯಂತ್ರಣಕ್ಕೆ ಪಾಲಿಕೆ ಮಾರ್ಗಸೂಚಿ

ಸಾಮೂಹಿಕ ಕಾರ್ಯಕ್ರಮಗಳಿಗೆ ಮಾದರಿ ಕಾರ್ಯ ವಿಧಾನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 20:08 IST
Last Updated 23 ಡಿಸೆಂಬರ್ 2020, 20:08 IST
   

ಬೆಂಗಳೂರು: ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಕೋವಿಡ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಬಿಬಿಎಂಪಿ ಮಾರ್ಗಸೂಚಿಗಳನ್ನು ಹೊರಡಿಸಿದೆ.

ದೇವಸ್ಥಾನ ಚರ್ಚ್‌, ಮಸೀದಿ ಮತ್ತು ಇತರ ಧಾರ್ಮಿಕ ಸ್ಥಳಗಳ ಬಳಿ ಏಕಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರದಂತೆ ಆಯಾ ಧಾರ್ಮಿಕ ಸ್ಥಳಗಳ ಮೇಲ್ವಿಚಾರಕರು ನೋಡಿಕೊಳ್ಳಬೇಕು. ಜನರು ಅಂತರ ಕಾಪಾಡುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಜನ ಹಸ್ತಲಾಘವ ಅಥವಾ ಆಲಿಂಗನ ಮಾಡುವುದನ್ನು ನಿಷೇಧಿಸಲಾಗಿದೆ. 65 ವರ್ಷ ಮೇಲ್ಪಟ್ಟವರು ಹಾಘೂ 10 ವರ್ಷಕ್ಕಿಂತ ಒಳಗಿನ ಮಕ್ಕಳು ಮನೆಯಲ್ಲೇ ಇರಬೇಕು ಎಂದು ಬಿಬಿಎಂಪಿ ಸೂಚಿಸಿದೆ.

ADVERTISEMENT

ಇದೇ 30ರಿಂದ 2021ರ ಜ.2ರ ಮಧ್ಯರಾತ್ರಿವರೆಗೆ ಕ್ಲಬ್‌, ಪಬ್‌, ರೆಸ್ಟೋರಂಟ್‌ ಹಾಗೂ ಅಂತಹ ಸ್ಥಳಗಳಲ್ಲಿ ಹೆಚ್ಚು ಜನ ಸೇರಲು ಅವಕಾಶ ಕಲ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವಂತಿಲ್ಲ. ಜನ ಅಂತರ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಟಿಕೆಟ್‌ ಪಡೆದು ಭಾಗವಹಿಸಲು ಅವಕಾಶ ಕಲ್ಪಿಸುವ ಡಿ.ಜೆ, ನೃತ್ಯದಂತಹ ವಿಶೇಷ ಕೂಟ ಕೂಟಗಳನ್ನು ಆಯೋಜಿಸುವಂತಿಲ್ಲ. ಇವುಗಳು ಎಂದಿನಂತೆ ಕಾರ್ಯನಿರ್ವಹಿಸಲು ಅಡ್ಡಿ ಇಲ್ಲ.

ಹೋಟೆಲ್‌, ಮಾಲ್‌, ಪಬ್‌, ಕ್ಲಬ್‌, ರೆಸ್ಟೋರಂಟ್‌ಗಳಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನರ ದೇಹದ ಉಷ್ಣಾಂಶ ತಪಾಸಣೆಗೆ, ಅವರು ಆಗಾಗ ಸ್ಯಾನಿಟೈಸರ್‌ನಿಂದ ಕೈತೊಳೆಯುವುದಕ್ಕೆ ಹಾಗೂ ಸರದಿ ಕಾಪಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚು ಜನ ಸೇರುವುದನ್ನು ತಡೆಯಲು ಆನ್‌ಲೈನ್‌ ಮೂಲಕ ಮುಂಗಡವಾಗಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಬಹುದು. ಸ್ಪರ್ಶರಹಿತ ಪಾವತಿ ವಿಧಾನ ಬಳಕೆಗೆ ಉತ್ತೇಜನ ನೀಡಬೇಕು ಎಂದು ಬಿಬಿಎಂಪಿ ಸಲಹೆ ನೀಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಜನ ಗುಂಪುಗೂಡಿ ಹೊಸ ವರ್ಷಾಚರಣೆ ಆಚರಿಸುವಂತಿಲ್ಲ. ಕಟ್ಟಡ ಸಮುಚ್ಚಯಗಳಲ್ಲಿ, ಅವುಗಳ ಪ್ರಾಂಗಣಗಳಲ್ಲಿ ಹಾಗೂ ಉಪಾಹಾರ ಸೇವಿಸುವ ಸ್ಥಳಗಳಲ್ಲಿ ಜನ ಅಂತರ ಕಾಪಾಡಲು ವ್ಯವಸ್ಥೆ ಮಾಡಬೇಕು ಎಂದೂ ಹೇಳಿದೆ.

ಹಸಿರು ಪಟಾಕಿಗಳನ್ನು ಹೊರತಾಗಿ ಅನ್ಯ ಪಟಾಕಿ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಕ್ರಿಸ್‌ಮಸ್‌/ ಹೊಸ ವರ್ಷಾಚರಣೆ– ಇವು ಗಮನದಲ್ಲಿರಲಿ
* ತೆರೆದ ಸ್ಥಳಗಳಲ್ಲಿ 3.5 ಮೀ ಅಂತರ ಕಾಪಾಡಲು ವ್ಯವಸ್ಥೆ ಒದಗಿಸಬೇಕು
*ಕಾರ್ಯಕ್ರಮಕ್ಕೆ ಮೊದಲು ಮತ್ತು ನಂತರ ಸ್ಥಳವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಬೇಕು
* ಕೋವಿಡ್‌ ನಿಯಂತ್ರಣದ ಉಸ್ತುವಾರಿಗೆ ಪ್ರತ್ಯೇಕ ವ್ಯಕ್ತಿಯನ್ನು ನೇಮಿಸಬೇಕು
* ಕೋವಿಡ್‌ ನಿಯಂತ್ರಣ ನಿಯಮ ಪಾಲನೆ ಬಗ್ಗೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು
* ಕೋವಿಡ್‌ ಲಕ್ಷಣ ಇರುವವರಿಗೆ ಪ್ರವೇಶಾವಕಾಶ ನೀಡಬಾರದು
* ಸ್ಥಳದಲ್ಲಿ ವೈದ್ಯಕೀಯ ಸಲಹೆ ಪಡೆಯಲು ವ್ಯವಸ್ಥೆ ಕಲ್ಪಿಸಬೇಕು
* ಕೋವಿಡ್‌ ಲಕ್ಷಣ ಕಂಡು ಬಂದವರನ್ನು ಪ್ರತ್ಯೇಕಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು
* ತುರ್ತು ಸಂದರ್ಭದಲ್ಲಿ ಬಳಸಲು ಆ್ಯಂಬುಲೆನ್ಸ್‌ನ ಲಭ್ಯತೆ ಹಾಗೂ ಆಸ್ಪತ್ರೆಯ ಸಂಪರ್ಕವನ್ನು ಖಾತರಿಪಡಿಸಿಕೊಳ್ಳಬೇಕು

ಹೊಸ ವರ್ಷ: ಸಾಮೂಹಿಕ ಆಚರಣೆ ನಿಷೇಧ
ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾ ನಗರ ಹಾಗೂ ವೈಟ್‌ಫೀಲ್ಡ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರ್ಷಂಪ್ರತಿ ಜನ ಗುಂಪುಗೂಡಿ ಹೊಸ ವರ್ಷಾಚರಣೆಯನ್ನು ಹಮ್ಮಿಕೊಳ್ಳುತ್ತಿದ್ದರು. ಈ ಪ್ರದೇಶಗಳಲ್ಲಿ ಪ್ರತಿ ವರ್ಷವೂ ಹೊಸ ವರ್ಷವನ್ನು ಸ್ವಾಗತಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಇಲ್ಲಿನ ಪಬ್‌ ಹಾಗೂ ರೆಸ್ಟೋರಂಟ್‌ಗಳಲ್ಲಿ ವಿಶೇಷ ಮನರಂಜನಾ ಕೂಟಗಳನ್ನು ಆಯೋಜಿಸಲಾಗುತ್ತಿತ್ತು. ಇವುಗಳಿಗೆ ಈ ಬಾರಿ ಬಿಬಿಎಂಪಿ ನಿಷೇಧ ಹೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.