ADVERTISEMENT

ಬಿಬಿಎಂಪಿಗೆ ಬೇಕು 1.66 ಕೋಟಿ ಡೋಸ್‌ ಲಸಿಕೆ

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ಅಭಿಯಾನ– ಸಾಲುತ್ತದೆಯೇ ಸಿದ್ಧತೆ?

ಪ್ರವೀಣ ಕುಮಾರ್ ಪಿ.ವಿ.
Published 3 ಮೇ 2021, 20:00 IST
Last Updated 3 ಮೇ 2021, 20:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡು ಡೋಸ್‌ ಕೋವಿಡ್‌ ಲಸಿಕೆ ನೀಡಲು ಒಟ್ಟು 1.82 ಕೋಟಿ ಲಸಿಕೆಗಳು ಬೇಕು. ಇವುಗಳಲ್ಲಿ ಈಗಾಗಲೇ ಲಸಿಕೆ ಪಡೆದವರನ್ನು ಹೊರತಾಗಿ ಇನ್ನುಳಿದವರಿಗೆ ಲಸಿಕೆ ನೀಡುವುದಾದರೆ ಇನ್ನೂ 1.66 ಕೋಟಿ ಲಸಿಕೆಗಳು ಬಿಬಿಎಂಪಿಗೆ ಬೇಕು.

ಸರ್ಕಾರದಿಂದ ಇನ್ನೂ ಲಸಿಕೆ ಪೂರೈಕೆ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಆದರೆ, ಬಿಬಿಎಂಪಿ ಕೋವಿಡ್‌ ಪ್ರಕರಣಗಳ ನಿಯಂತ್ರಣದ ನಡುವೆಯೂ ಲಸಿಕೆ ಅಭಿಯಾನಕ್ಕೆ ಕೈಗೊಳ್ಳಬೇಕಾದ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ, ಈ ಸಿದ್ಧತೆಗಳು ಸಾಲುತ್ತವೆಯೇ ಎಂಬ ಪ್ರಶ್ನೆ ಮೂಡಿದೆ.

ನಗರದಲ್ಲಿ ಆರೋಗ್ಯ ಕಾರ್ಯಕರ್ತರು, ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಸಿಕೆಗಳನ್ನು ನೀಡಲಾಗಿದೆ. ಇವರಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲ ವಯೋವರ್ಗದವರೂ ಇದ್ದಾರೆ. ಪ್ರಸ್ತುತ 45 ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ಇವರೆಲ್ಲರಿಗೂ ಇದುವರೆಗೆ 15.5 ಲಕ್ಷ ಲಸಿಕೆಗಳನ್ನು ( ಮೊದಲ ಹಾಗೂ ಎರಡನೇ ಡೋಸ್‌ ಸೇರಿ) ನೀಡಲಾಗಿದೆ.

ADVERTISEMENT

ನಗರದಲ್ಲಿ ಪ್ರಸ್ತುತ ಎರಡು ಕಾರ್ಪೊರೇಟ್‌ ಆಸ್ಪತ್ರೆಗಳು (ಮಣಿಪಾಲ್‌ ಹಾಗೂ ಅಪೋಲೊ) ಮಾತ್ರ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನಿಡಲಾರಂಭಿಸಿವೆ. ಲಸಿಕೆ ಪಡೆಯಲು ಕೋವಿಡ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿರುವ 18 ವರ್ಷ ಮೇಲ್ಪಟ್ಟವರು ಲಸಿಕೆ ಯಾವಾಗ ಬರುತ್ತದೆ ಎಂದು ವಿಚಾರಿಸುತ್ತಿದ್ದಾರೆ.

‘ಈ ಹಿಂದೆ ಖಾಸಗಿ ಆಸ್ಪತ್ರೆಗಳಿಗೂ ಬೇಡಿಕೆಗೆ ಅನುಗುಣವಾಗಿ ಸರ್ಕಾರದಿಂದಲೇ ಲಸಿಕೆ ಪೂರೈಸಲಾಗುತ್ತಿತ್ತು. ಆದರೆ, ಈ ಬಾರಿ ಲಸಿಕೆ ಅಭಿಯಾನದಲ್ಲಿ ಕೈಜೋಡಿಸುವ ಆಸ್ಪತ್ರೆಗಳು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿ ನೇರವಾಗಿ ಲಸಿಕೆ ಖರೀದಿಸಿ ನೀಡಬೇಕು’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿ ಈ ಹಿಂದೆ ಲಸಿಕಾ ಅಭಿಯಾನ ಜಾರಿಗೊಳಿಸಿದಾಗ 141 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 33 ರೆಫರಲ್‌ ಆಸ್ಪತ್ರೆಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದಿತ್ತು. 500 ಲಸಿಕಾ ಕೇಂದ್ರಗಳನ್ನು ಆರಂಭಿಸುವ ಉದ್ದೇಶವಿತ್ತಾದರೂ ನಿತ್ಯ ಸರಾಸರಿ 470 ಲಸಿಕಾ ಕೇಂದ್ರಗಳು ಕಾರ್ಯನಿರ್ವಹಿಸಿದ್ದವು. ಲಸಿಕೆ ಪಡೆಯಲು ಜನ ಆಗ ಅಷ್ಟು ಉತ್ಸಾಹ ತೋರದ ಕಾರಣ ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ಸೃಷ್ಟಿಯಾಗಿರಲಿಲ್ಲ. ಆದರೆ, ಈ ಬಾರಿಯೂ ಅಷ್ಟೇ ಲಸಿಕಾ ಕೇಂದ್ರಗಳನ್ನು ಹೊಂದುವ ಬಗ್ಗೆ ಬಿಬಿಎಂಪಿ ಚಿಂತನೆ ಹೊಂದಿದೆ. ಈ ಸಲ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ. ಕೋವಿಡ್‌ ಎರಡನೇ ಅಲೆ ಬಳಿಕ ಲಸಿಕೆ ಪಡೆಯಲು ಜನರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಹಾಗಾಗಿ ಹಿಂದೆ ಸ್ಥಾಪಿಸಿದ ಲಸಿಕಾ ಕೇಂದ್ರಗಳು ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಬಾರಿ ಎಲ್ಲ ಖಾಸಗಿ ಆಸ್ಪತ್ರೆಗಳು ಕೋವಿಡ್‌ ರೋಗಿಗಳಿಂದ ತುಂಬಿ ಹೋಗಿವೆ. ಈ ಹಿಂದೆ ಲಸಿಕಾ ಅಭಿಯಾನ ನಡೆಸಿದ್ದ ಅನೇಕ ಖಾಸಗಿ ಆಸ್ಪತ್ರೆಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಲಸಿಕೆ ಖರೀದಿಸುವುದಕ್ಕೆ ಹರಸಾಹಸ ಪಡಬೇಕಾದ ವಾತಾವರಣ ಇದೆ. ಈ ಹಿಂದೆ ಲಸಿಕೆ ಅಭಿಯಾನಕ್ಕೆ ಕೈಜೋಡಿಸಿದ ಎಲ್ಲ ಆಸ್ಪತ್ರೆಗಳು ಈ ಬಾರಿ ಲಸಿಕಾ ಕೇಂದ್ರ ಹೊಂದಲು ಆಸಕ್ತಿ ತೋರುವ ಸ್ಥಿತಿಯಲ್ಲಿಲ್ಲ.

‘ಬಿಬಿಎಂಪಿಯೂ 33 ರೆಫರಲ್‌ ಆಸ್ಪತ್ರೆಗಳಲ್ಲಿ 10 ಆಸ್ಪತ್ರೆಗಳನ್ನು ಕೋವಿಡ್‌ ಆಸ್ಪತ್ರೆಗಳನ್ನಾಗಿ ಮಾರ್ಪಾಡು ಮಾಡಿದೆ. ಅಗತ್ಯ ಬಿದ್ದರೆ ಇನ್ನಷ್ಟು ರೆಫರಲ್‌ ಆಸ್ಪತ್ರೆಗಳಲ್ಲೂ ಕೋವಿಡ್‌ ಚಿಕಿತ್ಸೆಗೆ ಆರಂಭಿಸಬೇಕಾಗುತ್ತದೆ. ಆ ಆಸ್ಪತ್ರೆಗಳಲ್ಲಿ ಲಸಿಕಾ ಕೇಂದ್ರ ಹೊಂದಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕಾ ಕೇಂದ್ರ ತೆರೆಯಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳದಿದ್ದರೆ ಸಮಸ್ಯೆ ಎದುರಿಸಬೇಕಾದೀತು’ ಎಂಬುದು ಬಿಬಿಎಂಪಿ ಅಧಿಕಾರಿಯೊಬ್ಬರ ಅನಿಸಿಕೆ.

‘ಸದ್ಯಕ್ಕೆ ಬಿಬಿಎಂಪಿಗೆ ಎಷ್ಟು ಲಸಿಕೆ ಪೂರೈಕೆ ಆಗಲಿದೆ ಎಂಬ ಖಚಿತ ಮಾಹಿತಿ ಇಲ್ಲ. ಆದರೂ ಸಿದ್ಧತೆ ಆರಂಭಿಸಿದ್ದೇವೆ. ಬಿಬಿಎಂಪಿ ಈ ಹಿಂದೆ ಸ್ಥಾಪಿಸಿದ್ದ ಲಸಿಕಾ ಕೇಂದ್ರಗಳು ಈ ಬಾರಿಯೂ ಮುಂದುವರಿಯುತ್ತವೆ. ಅಗತ್ಯ ಬಿದ್ದರೆ ಲಸಿಕಾ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಅಂಕಿ ಅಂಶ

1.30 ಕೋಟಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಿನ ಜನಸಂಖ್ಯೆ

91 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ

1.82 ಕೋಟಿ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ಬೇಕಾಗುವ ಲಸಿಕೆಗಳು (ಎರಡೂ ಡೋಸ್‌ ಸೇರಿ)

15.5 ಲಕ್ಷ

ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ನೀಡಿರುವ ಲಸಿಕೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.