ADVERTISEMENT

110 ಹಳ್ಳಿ: ರಸ್ತೆ ದುರಸ್ತಿ ಚುರುಕುಗೊಳಿಸಿ- ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ

ಯಲಹಂಕ ವಲಯದಲ್ಲಿ ಕಾಮಗಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 19:47 IST
Last Updated 2 ಮಾರ್ಚ್ 2022, 19:47 IST
ಅಟ್ಟೂರು ವಾರ್ಡ್‌ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ರಸ್ತೆ ದುರಸ್ತಿ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದರು. ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖ್ಯ ಎಂಜಿನಿಯರ್ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್ ಸುಧಾಕರ ರೆಡ್ಡಿ ಇದ್ದರು
ಅಟ್ಟೂರು ವಾರ್ಡ್‌ನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ರಸ್ತೆ ದುರಸ್ತಿ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದರು. ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖ್ಯ ಎಂಜಿನಿಯರ್ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್ ಸುಧಾಕರ ರೆಡ್ಡಿ ಇದ್ದರು   

ಬೆಂಗಳೂರು: ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 110 ಹಳ್ಳಿ ಯೋಜನೆಯಡಿ ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆಗಳ ಅಳವಡಿಕೆಗಾಗಿ ಅಗೆದಿರುವ ರಸ್ತೆಗಳ ಪುನರ್ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಟ್ಟೂರು ವಾರ್ಡ್ ವ್ಯಾಪ್ತಿಯ ಅನಂತಪುರ, ಎ.ಎಂ.ಎಸ್ ಲೇಔಟ್ ವ್ಯಾಪ್ತಿಯಲ್ಲಿ ರಸ್ತೆಗಳ ಪುನರ್ ನಿರ್ಮಾಣ ಕಾಮಗಾರಿಯನ್ನು ಅವರು ಬುಧವಾರ ಪರಿಶೀಲಿಸಿದರು. ನಗರದ ರಸ್ತೆಗಳು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತಿರಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

‘ಕುಡಿಯುವ ನೀರಿನ ಕೊಳವೆ ಮತ್ತು ಒಳ ಚರಂಡಿ ಅಳವಡಿಕೆ ಕಾಮಗಾರಿಯನ್ನು ಜಲಮಂಡಳಿ ಪೂರ್ಣಗೊಳಿಸಿರುವ ಕಡೆ ರಸ್ತೆ ದುರಸ್ತಿ ಕಾಮಗಾರಿಯನ್ನು ತಕ್ಷಣವೇ ನಡೆಸಬೇಕು. ಪಾದಚಾರಿ ಮಾರ್ಗವನ್ನೂ ಅಭಿವೃದ್ಧಿಪಡಿಸಿ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕು. ಕಾಮಗಾರಿ ವೇಳೆ ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ಕಾರ್ಯಪಾಲಕ ಎಂಜಿನಿಯರ್ ಸುಧಾಕರ್ ರೆಡ್ಡಿ, ‘ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನಂತಪುರ, ಚಿಕ್ಕಬೆಟ್ಟಹಳ್ಳಿ, ದೊಡ್ಡಬೆಟ್ಟಹಳ್ಳಿ, ಕೆಂಚೇನಹಳ್ಳಿ, ಹಾರೋಹಳ್ಳಿ, ನಾಗೇನಹಳ್ಳಿ, ವಡೇರಪುರ, ಗೋವಿಂದಪುರಗಳಲ್ಲಿ 110 ಹಳ್ಳಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ವಡೇರಪುರ, ಗೋವಿಂದಪುರ ಹೊರತುಪಡಿಸಿ ಉಳಿದೆಲ್ಲಾ ಹಳ್ಳಿಗಳಲ್ಲಿ ರಸ್ತೆ ಮರು ನಿರ್ಮಾಣ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಕುಡಿಯುವ ನೀರಿನ ಕೊಳವೆ ಹಾಗೂ ಒಳಚರಂಡಿ ಅಳವಡಿಕೆಗಾಗಿ 151 ಕಿ.ಮೀ. ಉದ್ದದ ರಸ್ತೆ ಅಗೆಯಲಾಗಿದ್ದು, ಅದರಲ್ಲಿ ಪಾಲಿಕೆ ಈಗಾಗಲೇ 60 ಕಿ.ಮೀ ಉದ್ದದ ರಸ್ತೆಯನ್ನು ಪುನರ್‌ ನಿರ್ಮಾಣ ಮಾಡಿದೆ. ಉಳಿದ 91 ಕಿ.ಮೀ ರಸ್ತೆ ದುರಸ್ತಿ ಕಾರ್ಯ ಬಾಕಿಯಿದೆ. ಶೀಘ್ರವೇ ಅವುಗಳನ್ನೂ ದುರಸ್ತಿಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.