
ಬೆಂಗಳೂರು: ರಸ್ತೆಗಳ ಮೇಲ್ಮೈ ಸಾಮರ್ಥ್ಯ, ಗುಂಡಿಗಳು ಬೀಳುವ ಸಾಧ್ಯತೆ ತಿಳಿದುಕೊಳ್ಳಲುಸೆನ್ಸರ್ ಆಧಾರಿತ ಮ್ಯಾಪಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಬಿಬಿಎಂಪಿ ಮುಂದಾಗಿದೆ.
ರಸ್ತೆಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಸಾರ್ವಜನಿಕರಿಂದ ಕಟು ಟೀಕೆಗೆ ಗುರಿಯಾಗುತ್ತಿರುವ ಬಿಬಿಎಂಪಿ, ಈಗ ತಂತ್ರಜ್ಞಾನದ ಮೊರೆ ಹೋಗುತ್ತಿದೆ.
‘ಸೆನ್ಸರ್ ಆಧರಿತ ಈ ಉಪಕರಣದಿಂದ ರಸ್ತೆಯ ಮೇಲ್ಮೈ ಶಕ್ತಿ ಎಷ್ಟಿದೆ, ರಸ್ತೆಯಲ್ಲಿ ಎಲ್ಲೆಲ್ಲಿ ಗುಂಡಿಗಳು ಬೀಳುವ ಸಾಧ್ಯತೆ ಇದೆ ಎಂಬುದನ್ನು ಚಿತ್ರ ಸಹಿತ ಮಾಹಿತಿ ಪಡೆಯಬಹುದಾಗಿದೆ. ಇದನ್ನು ತಿಳಿದುಕೊಂಡು ಗುಂಡಿ ಬೀಳುವ ಮುನ್ನವೇ ರಸ್ತೆ ಗುಣಮಟ್ಟ ಹೆಚ್ಚಿಸಬಹುದು’ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
‘ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲು ಕೂಡ ಈ ವ್ಯವಸ್ಥೆಯಲ್ಲಿ ಅವಕಾಶ ಇದೆ. ರಸ್ತೆ ಅಭಿವೃದ್ಧಿಪಡಿಸಿದ ದಿನಾಂಕ, ಗುಣಮಟ್ಟ ಹೇಗಿದೆ ಎಂಬುದನ್ನೂ ಕುಳಿತಲ್ಲೇ ತಿಳಿದುಕೊಳ್ಳಬಹುದಾಗಿದೆ’ ಎಂದರು.ಪ್ರಾಯೋ
ಗಿಕವಾಗಿ ಈ ವ್ಯವಸ್ಥೆಯನ್ನು ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಒಟ್ಟು 500 ಕಿ.ಮೀ ಉದ್ದದ ರಸ್ತೆಗಳಲ್ಲಿ ಅಳವಡಿಸಿಕೊಳ್ಳಲು ₹1 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಪಾಲಿಕೆ ರೂಪಿಸಿದೆ. ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದೆ.
‘ರಸ್ತೆ ನಿರ್ವಹಣೆಗಾಗಿ ಪಾಲಿಕೆ ಬಜೆಟ್‌ನಲ್ಲಿ ₹142 ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ₹1 ಕೋಟಿಯನ್ನು ಈ ಪ್ರಾಯೋಗಿಕ ಯೋಜನೆಗೆ ಬಳಸಿಕೊಳ್ಳಬಹುದು. ಸರ್ಕಾರದ ಮಂಜೂರಾತಿ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸೋಮಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.