ADVERTISEMENT

‘ಸಹಾಯ’ ಸಿಗದೆ ತಪ್ಪು ಮಾಹಿತಿ ದಾಖಲು

ಬಿಬಿಎಂಪಿಯ ಸಹಾಯ 2.0 ಆ್ಯಪ್: ಕೆಲಸವಾಗದಿದ್ದರೂ ಪರಿಹಾರವಾಗಿದೆ ಎಂದು ಉಲ್ಲೇಖ

ಗುರು ಪಿ.ಎಸ್‌
Published 4 ಡಿಸೆಂಬರ್ 2020, 20:59 IST
Last Updated 4 ಡಿಸೆಂಬರ್ 2020, 20:59 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ನಾಗರಿಕ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳ ಪರಿಹಾರಕ್ಕಾಗಿ ಬಿಬಿಎಂಪಿಯು ‘ಸಹಾಯ’ (Sahaaya 2.0) ಎಂಬ ಆನ್‌ಲೈನ್‌ ವೇದಿಕೆ ಆರಂಭಿಸಿದ್ದು, ಈ ಮೊಬೈಲ್‌ ಆ್ಯಪ್‌ ಮೂಲಕ ನಾಗರಿಕರು ಮೂಲಸೌಕರ್ಯ ಕೊರತೆಗಳ ಬಗ್ಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಂಡು ದೂರು ನೀಡಿದರೆ, ಆ ಕೆಲಸ ಪೂರ್ಣಗೊಳ್ಳವುದಕ್ಕೂ ಮುನ್ನವೇ ‘ಸಮಸ್ಯೆ ಪರಿಹರಿಸಲಾಗಿದೆ’ ಎಂದು ಆ್ಯಪ್‌ನಲ್ಲಿ ಉತ್ತರ ನೀಡಲಾಗಿದೆ.

‘ಚಿಕ್ಕಪೇಟೆ ವಾರ್ಡ್‌ ಸಂಖ್ಯೆ 109ರ ಕಬ್ಬನ್‌ ಪೇಟೆಯಲ್ಲಿ ಬೀದಿದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಇಲ್ಲಿನ 23ನೇ ಅಡ್ಡರಸ್ತೆಯ ಎರಡೂ ಬದಿ ಬೀದಿದೀಪ ಕೆಟ್ಟು ಹೋಗಿ ಹಲವು ತಿಂಗಳುಗಳೇ ಆಗಿವೆ. ‘ಸಹಾಯ 2.0’ ಆ್ಯಪ್ ಬಳಸಿ ಈ ಬಗ್ಗೆ ದೂರು (ದೂರು ಸಂಖ್ಯೆ 20086872) ನೀಡಿದ್ದೆ. ನಾಲ್ಕು ದಿನ ಬಿಟ್ಟು ನೋಡಿದರೆ ಸಮಸ್ಯೆ ಪರಿಹರಿಸಲಾಗಿದೆ (Resolved) ಎಂದು ಬಂದಿದೆ’ ಎಂದು ಚಿಕ್ಕಪೇಟೆ ನಿವಾಸಿ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಆ್ಯಪ್‌ ಬಗ್ಗೆ ಹೆಚ್ಚು ಪ್ರಚಾರ ನೀಡಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಲ್ಲಿಯೂ ಜಾಹೀರಾತು ನೀಡಿದ್ದರು. ಕೆಲಸ ಮಾಡದೆ ಈ ರೀತಿ ತಪ್ಪು ಮಾಹಿತಿ ಅಪ್‌ಲೋಡ್ ಮಾಡುವ ಮೂಲಕ ಜನ ಮತ್ತು ಸರ್ಕಾರವನ್ನು ಅಧಿಕಾರಿಗಳು ವಂಚಿಸುತ್ತಿದ್ದಾರೆ’ ಎಂದು ಅವರು ಆರೋಪಿಸುತ್ತಾರೆ.

ADVERTISEMENT

‘ಹಲವು ಅಧಿಕಾರಿಗಳನ್ನು ಈ ಕುರಿತು ಸಂಪರ್ಕಿಸಿದೆ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಬೇರೆಯವರಿಗೆ ವರ್ಗಾಯಿಸಿದರು. ಈಗ ನೋಡಿದರೆ, ನನ್ನ ದೂರನ್ನು ‘ಮುಕ್ತಾಯಗೊಳಿಸಲಾಗಿದೆ’ (ಕ್ಲೋಸ್ಡ್‌) ಎಂದು ಹಾಕಿದ್ದಾರೆ‘ ಎಂದು ಅವರು ಆರೋಪಿಸಿದರು.

ಮೊದಲಿನ ಸಹಾಯ ಆ್ಯಪ್‌ನಲ್ಲಿಯೂ ಇದೇ ರೀತಿ ಆಗುತ್ತಿದ್ದಾಗ ಇದು ತಾಂತ್ರಿಕ ದೋಷ ಎಂದಿದ್ದ ಬಿಬಿಎಂಪಿ, ಸುಧಾರಿತ ಆ್ಯಪ್‌ ಆಗಿ ‘ಸಹಾಯ 2.0’ ಅನ್ನು ಬಳಕೆಗೆ ತಂದಿತ್ತು. ಘನ ತ್ಯಾಜ್ಯ ನಿರ್ವಹಣೆ, ರಸ್ತೆ, ಪಾದಚಾರಿ ಮಾರ್ಗ, ಬೀದಿದೀಪ, ಒಳಚರಂಡಿ ನಿರ್ವಹಣೆ ಮತ್ತಿತರ ಮೂಲಸೌಕರ್ಯ ಸಂಬಂಧಿಸಿದಂತೆ ದೂರುಗಳನ್ನು ನೀಡಬಹುದು. ಬಿಬಿಎಂಪಿ ಮಾತ್ರವಲ್ಲದೆ, ಜಲಮಂಡಳಿ, ಬೆಸ್ಕಾಂ, ಬಿಡಿಎ ವಿಷಯಗಳನ್ನೂ ಇದರ ಜೊತೆಗೆ ಸಂಯೋಜನೆಗೊಳಿಸಲಾಗಿದೆ. ಆ್ಯಪ್‌ ಅನ್ನು ಮೇಲ್ದರ್ಜೆಗೇರಿಸಿದ್ದರೂ ಕೆಲಸಗಳು ಮಾತ್ರ ನಡೆಯುತ್ತಿಲ್ಲ. ಸಮಸ್ಯೆಗಳು ಪರಿಹಾರವಾಗುತ್ತಿಲ್ಲ ಎಂದು ನಾಗರಿಕರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.